ಬಸವಾಪಟ್ಟಣ: ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿರುವ ಪರಿಣಾಮ, ಅಡಿಕೆ ಇಳುವರಿ ಕಡಿಮೆಯಾಗಿದ್ದು, ಬೇಯಿಸಿದ ಅಡಿಕೆ ಒಣಗಿಸಲು ರೈತರು ಪೇಚಾಡುತ್ತಿದ್ದಾರೆ.
ಬಸವಾಪಟ್ಟಣ ಹೋಬಳಿಯಲ್ಲಿ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಧಿಕ ಮಳೆಯಿಂದಾಗಿ ಇಳುವರಿಯು ಎಕರೆಗೆ //5 ಕ್ವಿಂಟಲ್‌ನಿಂದ 8 ಕ್ವಿಂಟಲ್‌ವರೆಗೆ ಇಳಿಕೆಯಾಗಿದೆ.//
ಮಳೆಗಾಲದಲ್ಲಿಯೇ ಅಡಿಕೆ ಕೊಯ್ಲು ಬರುವುದರಿಂದ, ಬೇಯಿಸಿದ ಅಡಿಕೆಯನ್ನು ಒಣಗಿಸಲು ಬಿಸಿಲು ಬೀಳದೇ ತೊಂದರೆಯಾಗುವುದು ಸಹಜ. ಆದರೆ ಈ ವರ್ಷ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ 15 ದಿನಗಳಿಂದ ಬಿಸಿಲಿಲ್ಲದೇ ಬೇಯಿಸಿದ ಅಡಿಕೆ ಹಾಳಾಗುತ್ತಿವೆ ಎಂದು ಇಲ್ಲಿನ ಅಡಿಕೆ ಬೆಳೆಗಾರ ಹಾಲೇಶಪ್ಪ ಹೇಳಿದರು.
ಮಳೆಗಾಲದಲ್ಲಿ ಬೇಯಿಸಿದ ಅಡಿಕೆ ಒಣಗಿಸಲು ಶೇಡ್ ಹೌಸ್‌ಗಳು ನೆರವಿಗೆ ಬರುತ್ತವೆ. ರೈತರು ಸಬ್ಸಿಡಿ ದರದಲ್ಲಿ ದೊರೆಯುವ ಶೇಡ್ ಹೌಸ್‌ಗಳನ್ನು ನಿರ್ಮಿಸಿಕೊಂಡು ಸುಲಭವಾಗಿ ಅಡಿಕೆ ಒಣಗಿಸಬಹುದು. ಕಣಿವೆಬಿಳಚಿಯಲ್ಲಿ ಎರಡು ವರ್ಷದಿಂದ ಶೇಡ್ ಹೌಸ್‌ಗಳಲ್ಲಿ ಅಡಿಕೆ ಒಣಗಿಸುತ್ತಿದ್ದೇವೆ ಎಂದು ಅಡಿಕೆ ಕೇಣಿದಾರ ಎಸ್.ಅಣ್ಣೋಜಿರಾವ್ ಹೇಳಿದರು.
ಯಂತ್ರಗಳಲ್ಲಿ ಸುಲಿದ ಅಡಿಕೆಯ ಸ್ವಲ್ಪ ಭಾಗ ಪುಡಿಯಾಗುತ್ತದೆ. ಇದರಿಂದ ಸಹಜವಾಗಿ ತೂಕ ಕಡಿಮೆಯಾಗಿ ರೈತರಿಗೆ ನಷ್ಟವಾಗುತ್ತದೆ. ಆದರೆ ಕೈಯಿಂದ ಸುಲಿಯಲು ಕೂಲಿಕಾರರ ಕೊರತೆಯೂ ಕಾಡುತ್ತಿದೆ ಎಂದು ಇಲ್ಲಿನ ಅಡಿಕೆ ಬೆಳೆಗಾರರಾದ ಕೆ. ರುದ್ರಪ್ಪ ಮತ್ತು ಬಿ.ಚಂದ್ರಪ್ಪ ತಿಳಿಸಿದರು.
ಹೊಸದಾಗಿ ಅಡಿಕೆ ಸಸಿಗಳನ್ನು ನಾಟಿ ಮಾಡುವ ರೈತರಿಗೆ ಇದು ಸಕಾಲವಾಗಿದೆ. ಭೂಮಿಯಲ್ಲಿ ತೇವಾಂಶ ಉಂಟಾಗದಂತೆ ಬಸಿಗಾಲುವೆ ನಿರ್ಮಿಸಿ ಅಡಿಕೆ ಸಸಿಗಳನ್ನು ನೆಡಬೇಕು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಸೌರಭ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.