ADVERTISEMENT

ಬಿಟ್ಟು ಬಿಟ್ಟು ಬರುವ ಮಳೆ: ಡೆಂಗಿ ಹೆಚ್ಚಳ

ಹಳೇಕುಂದವಾಡ, ದೇವರಹಟ್ಟಿಯಲ್ಲಿ ಡೆಂಗಿ ಜ್ವರ ಉಲ್ಬಣ

ಬಾಲಕೃಷ್ಣ ಪಿ.ಎಚ್‌
Published 23 ಜುಲೈ 2019, 19:49 IST
Last Updated 23 ಜುಲೈ 2019, 19:49 IST
ಸೊಳ್ಳೆ
ಸೊಳ್ಳೆ   

ದಾವಣಗೆರೆ: ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾರಣಾಂತಿಕವಾಗಿ ಕಾಡುತ್ತಿರುವ ಡೆಂಗಿ ಜಿಲ್ಲೆಯಲ್ಲಿ ಆರು ತಿಂಗಳಲ್ಲಿ ನಿಯಂತ್ರಣದಲ್ಲಿತ್ತು. ಜುಲೈಯಲ್ಲಿ ಒಮ್ಮೆಲೇ ಉಲ್ಬಣಿಸಿದೆ. ಹಳೇ ಕುಂದವಾಡ ಮತ್ತು ದೇವರಹಟ್ಟಿಯಲ್ಲಿ ಸಾಲು ಸಾಲು ಡೆಂಗಿ ಪ್ರಕರಣ ಕಾಣಿಸಿಕೊಂಡಿದೆ.

ಜೂನ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 36 ಪ್ರಕರಣಗಳು ದಾಖಲಾಗಿದ್ದರೆ, ಜುಲೈನಲ್ಲಿ ಈವರೆಗೆ 27 ಪ್ರಕರಣಗಳು ದೃಢಗೊಂಡಿವೆ. ಹಳೇ ಕುಂದವಾಡದಲ್ಲಿ ಜುಲೈ 10ರವರೆಗೆ 22 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿದೆ. ಅದರಲ್ಲಿ ಸಾಮಾನ್ಯ ಜ್ವರ ಕಾಣಿಸಿಕೊಂಡವರನ್ನು ಹೊರತುಪಡಿಸಿ ಉಳಿದ 16 ಮಂದಿಗೆ ಶಂಕಿತ ಡೆಂಗಿ ಎಂದು ಗುರುತಿಸಿ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 8 ಪ್ರಕರಣ ಖಚಿತಗೊಂಡಿದೆ.

ಹಳೇ ಕುಂದವಾಡದಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಹಾಗಾಗಿ ನೀರು ಶೇಖರಣೆ ಮಾಡಿ ಎರಡು–ಮೂರು ವಾರಗಳ ಕಾಲ ಇಟ್ಟುಕೊಂಡಿದ್ದರಿಂದ ಅಲ್ಲಿ ಲಾರ್ವಾಗಳು ಬೆಳೆದಿರುವುದು ಸಮಸ್ಯೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ದೇವರಹಟ್ಟಿಯಲ್ಲಿ 30 ಮಂದಿಯಲ್ಲಿ ಜ್ವರ ಕಾಣಿಸಿಕೊಂಡಿತ್ತು. 7 ಶಂಕಿತ ಪ್ರಕರಣಗಳು ಎಂದು ಗುರುತಿಸಲಾಗಿತ್ತು. ಅದರಲ್ಲಿ 6 ಪ್ರಕರಣಗಳು ಖಚಿತಗೊಂಡಿವೆ.

ಕಳೆದ ವರ್ಷ ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ 17 ಪ್ರಕರಣಗಳಷ್ಟೇ ದಾಖಲಾಗಿದ್ದವು. ಪ್ರಸ್ತುತ ವರ್ಷ ಈ ಎರಡು ಪ್ರದೇಶಗಳಲ್ಲಿ ಕಂಡು ಬಂದ 15 ಪ್ರಕರಣಗಳು ಸೇರಿ ದಾವಣಗೆರೆ ತಾಲ್ಲೂಕಿನಲ್ಲಿ 20 ಪ್ರಕರಣಗಳು ದೃಢಗೊಂಡಿವೆ. ಹರಿಹರ ತಾಲ್ಲೂಕಿನಲ್ಲಿ 2, ಚನ್ನಗಿರಿ ತಾಲ್ಲೂಕಿನಲ್ಲಿ 3 ಜಗಳೂರಿನ ತಾಲ್ಲೂಕಿನಲ್ಲಿ 2 ಪ್ರಕರಣಗಳು ಖಚಿತಗೊಂಡಿದ್ದರೆ, ಹೊನ್ನಾಳಿಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.

ಜೋರಾಗಿ ಮಳೆ ಬಂದಾಗ ನೀರು ಹರಿದು ಹೋಗುತ್ತದೆ. ಬಿಟ್ಟು ಬಿಟ್ಟು ಮಳೆ ಸಣ್ಣದಾಗಿ ಸುರಿದರೆ ಅಲ್ಲಲ್ಲಿ ನೀರು ನಿಲ್ಲುತ್ತದೆ. ಇದು ಈಡೀಸ್‌ ಈಜಿಪ್ಟೈ ಸೊಳ್ಳೆ ಮೊಟ್ಟೆ ಇಟ್ಟು ಲಾರ್ವಾಗಳು ಬೆಳೆಯಲು ಅವಕಾಶವಾಗುತ್ತದೆ. ಹಾಗಾಗಿ ಜುಲೈ, ಆಗಸ್ಟ್‌ ತಿಂಗಳಲ್ಲಿ ಹೆಚ್ಚು ಎಚ್ಚರದಿಂದ ಇರಬೇಕಾಗುತ್ತದೆ. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಡಾ. ಮೀನಾಕ್ಷಿ ಮಾಹಿತಿ ನೀಡಿದರು.

ಇತರ ಸೊಳ್ಳೆಗಳಿಗಿಂತ ಭಿನ್ನ: ಮಲೇರಿಯಾ, ಚಿಕೂನ್‌ಗುನ್ಯ ಸಹಿತ ಇತರ ರೋಗಗಳನ್ನು ಹರಡಬೇಕಿದ್ದರೆ ಸೊಳ್ಳೆಗಳು ಸೋಂಕಿತರಿಗೆ ಕಚ್ಚಿ ಬಳಿಕ ಇನ್ನೊಬ್ಬರಿಗೆ ಕಚ್ಚಿದಾಗ ಸೋಂಕು ಹರಡುತ್ತದೆ. ಆದರೆ, ಡೆಂಗಿ ಹರಡುವ ಈಡೀಸ್‌ ಈಜಿಪ್ಟೈ ಸೊಳ್ಳೆ ಉಳಿದವುಗಳಿಗಿಂತ ಹೆಚ್ಚು ಅಪಾಯಕಾರಿ. ಯಾಕೆಂದರೆ ಈ ಸೊಳ್ಳೆ ಡೆಂಗಿ ಸೋಂಕು ಇರುವವರಿಗೆ ಕಚ್ಚಿ ರಕ್ತ ಹೀರಿದರೆ ಅದು ಕಚ್ಚುವ ಇನ್ನೊಬ್ಬ ವ್ಯಕ್ತಿಗೆ ಮಾತ್ರ ಹರಡುವುದಲ್ಲ; ಜತೆಗೆ ತಾನು ಇಡುವ ಮೊಟ್ಟೆಗಳಿಗೂ ಹರಡುತ್ತದೆ. ಅವು ಲಾರ್ವಗಳಾಗಿ ಸೊಳ್ಳೆಗಳಾಗಿ ಬೆಳೆಯುವಾಗ ಈ ಸೋಂಕನ್ನು ಹಾಗೆ ಇಟ್ಟುಕೊಳ್ಳುತ್ತವೆ. ಆ ಸೊಳ್ಳೆಗಳು ಕಚ್ಚಿದಾಗಲೂ ರೋಗ ಹರಡುತ್ತದೆ ಎನ್ನುತ್ತಾರೆ ಕೀಟಶಾಸ್ತ್ರಜ್ಞ ಸತೀಶ್‌ ಮಾಳಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.