ADVERTISEMENT

ದಾವಣಗೆರೆ: ಧಾರಾಕಾರ ಮಳೆ, ಮನೆ-ಬೆಳೆಗೆ ಹಾನಿ

ತುರ್ಚಘಟ್ಟ, ಲೋಕಿಕೆರೆಗಳಲ್ಲಿ ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 15:25 IST
Last Updated 10 ಅಕ್ಟೋಬರ್ 2020, 15:25 IST
ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ಗ್ರಾಮದ ಬಳಿ ದೊಡ್ಡಘಟ್ಟದಿಂದ ಚಿರಡೋಣಿ ಗ್ರಾಮಕ್ಕೆ ಹೋಗುವ ಸೇತುವೆಯ ಮೇಲೆ ಶುಕ್ರವಾರ ಬಿದ್ದ ಮಳೆಗೆ ನೀರು ಹರಿಯುತ್ತಿರುವುದು.
ಚನ್ನಗಿರಿ ತಾಲ್ಲೂಕು ದೊಡ್ಡಘಟ್ಟ ಗ್ರಾಮದ ಬಳಿ ದೊಡ್ಡಘಟ್ಟದಿಂದ ಚಿರಡೋಣಿ ಗ್ರಾಮಕ್ಕೆ ಹೋಗುವ ಸೇತುವೆಯ ಮೇಲೆ ಶುಕ್ರವಾರ ಬಿದ್ದ ಮಳೆಗೆ ನೀರು ಹರಿಯುತ್ತಿರುವುದು.   

ದಾವಣಗೆರೆ: ಶುಕ್ರವಾರ ರಾತ್ರಿ ಮಳೆ ಒಂದೇ ಸಮನೆ ಸುರಿದ ಕಾರಣ ಹಲವೆಡೆ ಕೃಷಿ ಭೂಮಿ ಜಲಾವೃತಗೊಂಡು ಬೆಳೆಗಳಿಗೆ ಹಾನಿಯಾಗಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ.

ಲೋಕಿಕೆರೆ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ಶನಿವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಆ ಮನೆಗಳನ್ನು ವೀಕ್ಷಿಸಿದರು

ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು ಗಿಡ ಗಂಟಿಗಳಿಂದ ತುಂಬಿಕೊಂಡಿರುವ ಚರಂಡಿಗಳನ್ನು ಕೂಡಲೇ ಸ್ವಚ್ಛಗೊಳಿಸುವಂತೆ ಸೂಚಿಸಿದರು. ಜಲಾವೃತವಾಗಿರುವ ಭತ್ತದ ಗದ್ದೆಗಳನ್ನು ವೀಕ್ಷಿಸಿದರು

ADVERTISEMENT

ತಹಶೀಲ್ದಾರ್ ಗಿರೀಶ್, ‌ಪಿಆರ್‌ಇಡಿ ಎಂಜನಿಯರ್ ಪರಮೇಶ್ ಅವರೂ ಇದ್ದರು.

ತುರ್ಚಘಟ್ಟ ಗ್ರಾಮದಲ್ಲಿ 50ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋದವು.

ಸಂತೇಬೆನ್ನೂರು ವರದಿ:ಇಲ್ಲಿಗೆ ಸೂಳೆಕೆರೆ ಹಳ್ಳ ಉಕ್ಕಿ ಹರಿದ ಪರಿಣಾಮ ಸಮೀಪದ ದೊಡ್ಡಘಟ್ಟ- ಚಿರಡೋಣಿ ನಡುವಿನ ರಸ್ತೆ ನೀರಲ್ಲಿ ಮುಳುಗಿತು. ಹಾಗಾಗಿ ವಾಹನಗಳ ಸಂಚಾರ ಸ್ಥಗಿತಗೊಂಡಿತು. ಅಪಾರ ಪ್ರಮಾಣದ ನೀರು ಪಕ್ಕದ ಭತ್ತದ ಗದ್ದೆಗಳಿಗೆ ನುಗ್ಗಿದೆ. ಸುಮಾರು 500 ಎಕರೆ ಗದ್ದೆಗಳು ನೀರಿನಿಂದ ಆವೃತಗೊಂಡಿವೆ.

ಮಳೆ ಮುಂದುವರಿದರೆ ಭತ್ತದ ಬೆಳೆ ಸಂಪೂರ್ಣ ನಾಶವಾಗಲಿದೆ. ರಸ್ತೆಗೆ ಸೇತುವೆ ನಿರ್ಮಿಸಬೇಕು ಎಂಬ ಹಲವು ವರ್ಷಗಳ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಚಿರಡೋಣಿ ಗ್ರಾಮದ ಗಗನ್ ಬೇಸರ ವ್ಯಕ್ತಪಡಿಸಿದರು.

ಚನ್ನಗಿರಿ ವರದಿ:ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಬಿರುಸಿನ ಮಳೆಯಾಗಿದೆ. ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿವೆ. 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ನಲ್ಕುದುರೆ ಗೋಮಾಳದಲ್ಲಿ 2, ಕೆಂಗಾಪುರ 2, ಕಂಸಾಗರ, ದೇವರಹಳ್ಳಿ 1, ತ್ಯಾವಣಿಗಿ 1 ಹಾಗೂ ದೊಡ್ಡಘಟ್ಟ ಗ್ರಾಮದಲ್ಲಿ ತಲಾ 1 ಮನೆ ಸೇರಿ ಒಟ್ಟು 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ₹2.75 ಲಕ್ಷ ನಷ್ಟ ಉಂಟಾಗಿದೆ ಎಂದು ಪ್ರಭಾರ ತಹಶೀಲ್ದಾರ್ ಅರುಣ್ ಕುಮಾರ್ ತಿಳಿಸಿದ್ದಾರೆ.

ಹರಪನಹಳ್ಳಿ ವರದಿ:ತಾಲ್ಲೂಕಿನ ವಿವಿಧೆಡೆ ಗುಡುಗು, ಮಿಂಚು, ಸಿಡಿಲು ಸಹಿತ ಉತ್ತಮ ಮಳೆ ಸುರಿದಿದ್ದು 20 ಹೆಕ್ಟರ್ ಭತ್ತಕ್ಕೆ ಹಾನಿಯಾಗಿದೆ.

ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ 20 ಹೆಕ್ಟರ್ ಭತ್ತ ಹಾನಿಯಾಗಿದೆ. ಬೇವಿನಹಳ್ಳಿ ದೊಡ್ಡತಾಂಡದಲ್ಲಿ ನುಗ್ಗೆ ಬೆಳೆಗೆ ಹಾನಿಯಾಗಿದೆ. ತಡರಾತ್ರಿ ಸುರಿದ ಮಳೆಗೆ ಲಕ್ಷಾಂತರ ರೂಪಾಯಿ ಹಾನಿ ಅಂದಾಜಿಸಲಾಗಿದೆ. ಕಟಾವು ಮಾಡಿ ರಾಶಿ ಮಾಡಿರುವ ಮೆಕ್ಕೆಜೋಳ, ಶೇಂಗಾ ಬೆಳೆ ರಕ್ಷಣೆಗೆ ರೈತರು ಮಳೆಯಿಂದಾಗಿ ಹರಸಾಹಸ ಪಡುವಂತಾಗಿದೆ.

ಉಚ್ಚಂಗಿದುರ್ಗ ವರದಿ:ಹಿರೇಮೆಗಳಗೆರೆ ಹಾಗೂ ಜಿತ್ತಿನಕಟ್ಟೆ ಗ್ರಾಮದಲ್ಲಿ ತಲಾ ಒಂದು ಮನೆ ಭಾಗಶಃ ಹಾನಿಯಾಗಿದ್ದು, ಕಟಾವು ಹಂತದಲ್ಲಿದ್ದ ಬೆಳೆಗಳು ನೆಲಕಚ್ಚಿದೆ.

ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಹಿರೇಮೆಗಳಗೆರೆ, ಲಕ್ಷ್ಮೀಪುರ, ಸಿಂಗ್ರಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಮೃದ್ಧವಾಗಿ ಬೆಳೆದ ಭತ್ತದ ಬೆಳೆ ಚಾಪೆ ಹಾಸಿದೆ.

ಬೇವಿನಹಳ್ಳಿ ದೊಡ್ಡ ತಾಂಡಾದ ರೈತ ಕೃಷ್ಣನಾಯ್ಕ ಅವರಿಗೆ ಸೇರಿದ ಒಂದೂವರೆ ಏಕರೆಯಲ್ಲಿ ಬೆಳೆದೆ ನುಗ್ಗೆಗಿಡಗಳಲ್ಲಿ ಸುಮಾರು 300 ಗಿಡಗಳು ಉರುಳಿವೆ. ಅರಸೀಕೆರೆ ಹೋಬಳಿ ವ್ಯಾಪ್ತಿಯಲ್ಲಿ ಕಟಾವು ಮಾಡಿಟ್ಟ ಜೋಳದ ರಾಶಿ ರಕ್ಷಿಸಿಕೊಳ್ಳಲು ರೈತರು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.