ADVERTISEMENT

ಸಿನಿಮೀಯ ಕಾರ್ಯಾಚರಣೆ: ದರೋಡೆಕೋರರ ಬಂಧನ

ದುಷ್ಕರ್ಮಿಗಳನ್ನು ಬೆನ್ನಟ್ಟಿದ ಪೊಲೀಸ್ ಜೀಪ್ ಪಲ್ಟಿ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 4:15 IST
Last Updated 25 ಫೆಬ್ರುವರಿ 2021, 4:15 IST
ಉಚ್ಚಂಗಿದುರ್ಗದ ಸಮೀಪದ ಅರಸೀಕೆರೆ ಪೊಲೀಸರು ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ಅಪಘಾತಕ್ಕೆ ಒಳಗಾದ ಪೊಲೀಸರ ಜೀಪ್.
ಉಚ್ಚಂಗಿದುರ್ಗದ ಸಮೀಪದ ಅರಸೀಕೆರೆ ಪೊಲೀಸರು ದರೋಡೆಕೋರರನ್ನು ಹಿಡಿಯಲು ಪ್ರಯತ್ನಿಸಿದ ವೇಳೆ ಅಪಘಾತಕ್ಕೆ ಒಳಗಾದ ಪೊಲೀಸರ ಜೀಪ್.   

ಉಚ್ಚಂಗಿದುರ್ಗ: ಸಮೀಪದ ನೆಲಗೊಂಡಹಳ್ಳಿ ಗ್ರಾಮದ ಕ್ರಾಸ್‌ ಬಳಿ ಬುಧವಾರ ಬೆಳಗಿನಜಾವ ವಾಹನ ತಡೆದು ದರೋಡೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬೆನ್ನು ಹತ್ತಿದ್ದ ಪೊಲೀಸ್‌ ಜೀಪ್‌ ಪಲ್ಟಿಯಾಗಿದ್ದರೂ ಧೃತಿಗೆಡದ ಪೊಲೀಸರು, ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಕೆಲವೇ ಗಂಟೆಗಳಲ್ಲಿ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಸೀಕೆರೆ ಗ್ರಾಮದ ವೀರೇಶ್ (23), ಶೆಡ್ಡೆರ ಅರುಣ (20) ಹಾಗೂ ಫಿರ್ದೋಸ್ (20) ಬಂಧಿತ ಆರೋಪಿಗಳು. ಇವರನ್ನು ಹಿಡಿಯಲು ಹೋಗುತ್ತಿದ್ದ ವೇಳೆ ಜೀಪ್ ಪಲ್ಟಿಯಾಗಿ ಬಿದ್ದ ಪರಿಣಾಮ ಸಹಾಯಕ ಸಬ್ ಇನ್‌ಸ್ಪೆಕ್ಟರ್ ರಾಮಚಂದ್ರಪ್ಪ, ಸಿಬ್ಬಂದಿ ಮಹಾಂತೇಶ್ ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಶಿವನಿ ಗ್ರಾಮದ ಹರೀಶ್ ಅವರು ಬುಧವಾರ ಬೆಳಗಿನಜಾವ ಮಹೀಂದ್ರಾ ವಾಹನದಲ್ಲಿ ತೆಂಗಿನಕಾಯಿ ಹೇರಿಕೊಂಡು ಅರಸೀಕೆರೆ ಕಡೆಯಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದರು. ನೆಲಗೊಂಡಹಳ್ಳಿ ಗ್ರಾಮದ ಕ್ರಾಸ್ ಬಳಿ ಈ ಮೂವರು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ಹಾಕಿದ್ದರು. ವಾಹನ ನಿಲ್ಲಿಸುತ್ತಿದ್ದಂತೆ ಕಬ್ಬಿಣದ ರಾಡು, ಕಲ್ಲುಗಳಿಂದ ದಾಳಿ ನಡೆಸಿ ಹರೀಶ್ ಅವರ ಬಳಿ ಇದ್ದ ₹ 2000 ನಗದು ಕಿತ್ತುಕೊಂಡಿದ್ದಾರೆ.

ADVERTISEMENT

ಹಿಂದಿನಿಂದ ವಾಹನಗಳು ಬರುತ್ತಿರುವುದನ್ನು ಗಮನಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ಹರೀಶ್ ಅವರು ತಕ್ಷಣವೇ ಈ ಬಗ್ಗೆ ಅರಸೀಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ತಕ್ಷಣವೇ ಅರಸೀಕೆರೆ ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿಗಳು ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಪೊಲೀಸರು ಜೀಪ್‌ನಲ್ಲಿ ದರೋಡೆಕೋರರನ್ನು ಹಿಂಬಾಲಿಸುತ್ತಿದ್ದ ವೇಳೆ ಆರೋಪಿಗಳು ಕೆಳಗೆ ಬಿದ್ದಿದ್ದಾರೆ. ಅವರನ್ನು ತಪ್ಪಿಸಲು ಯತ್ನಿಸಿದಾಗ, ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿಯಾಗಿದೆ.

ಈ ವೇಳೆ ರಾಮಚಂದ್ರಪ್ಪ ಹಾಗೂ ಮಹಾಂತೇಶ್ ಅವರಿಗೆ ಗಾಯವಾಗಿದ್ದರೂ ಆರೋಪಿಗಳನ್ನು ಹಿಡಿಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದರು. ಬಳಿಕ ಸಬ್ ಇನ್‌ಸ್ಪೆಕ್ಟರ್ ಎ.ಕಿರಣ್ ಕುಮಾರ್ ಅವರು ಗಾಯಾಳು ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಆ ಬಳಿಕ ತಂಡ ರಚಿಸಿಕೊಂಡು ಕ್ಷಿಪ್ರ ಕಾರ್ಯಾಚರಣೆ ನಡೆಸಿದಾಗ ಕೆರೆಗುಡ್ಡಹಳ್ಳಿ ದೇವಾಲಯದ ಸಮೀಪ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಡಿವೈಎಸ್‌ಪಿ ಹಾಲಮೂರ್ತಿ ರಾವ್ ಅವರನ್ನು ಒಳಗೊಂಡ ಸಿಪಿಐ ನಾಗರಾಜ್ ಎಂ.ಕಮ್ಮಾರ ಹಾಗೂ ಸಬ್ ಇನ್‌ಸ್ಪೆಕ್ಟರ್ ಎ.ಕಿರಣ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲ ಅದಾವತ್ ಪ್ರಶಂಸಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.