ADVERTISEMENT

‘ಭಾಷೆ ಸಂಸ್ಕೃತಿಯ ಪ್ರತಿನಿಧಿ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 14:53 IST
Last Updated 31 ಅಕ್ಟೋಬರ್ 2020, 14:53 IST
ದಾವಣಗೆರೆಯಲ್ಲಿ ಕನ್ನಡ ಕುವರ, ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶನಿವಾರ  ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಉದ್ಘಾಟಿಸಿದರು
ದಾವಣಗೆರೆಯಲ್ಲಿ ಕನ್ನಡ ಕುವರ, ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶನಿವಾರ  ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಉದ್ಘಾಟಿಸಿದರು   

ದಾವಣಗೆರೆ: ಭಾಷೆ ಅಂದರೆ ಮಾತನಾಡುವ ಮಾಧ್ಯಮವಷ್ಟೇ ಅಲ್ಲ. ಸಂಸ್ಕೃತಿಯ ಪ್ರತಿನಿಧಿ. ಪ್ರತಿಭಾಷೆಗೂ ಅದರದ್ದೇ ಆದ ಇತಿಹಾಸ ಇದೆ. ಭಾಷೆ ಹೇಗೆ ಬಳಸಬೇಕು ಎಂಬುದನ್ನಷ್ಟೇ ಕಲಿಯುವುದಲ್ಲ. ಒಂದು ಪರಂಪರೆಯ ವಾಹಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿಯಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಹೇಳಿದರು.

ಕನ್ನಡ ಕುವರ, ಕುವರಿ ಜಿಲ್ಲಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಶನಿವಾರ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಮಾತೃಭಾಷೆಯನ್ನು ಬಿಟ್ಟು ಇನ್ನೊಂದು ಭಾಷೆಯನ್ನು ಕಲಿಯುತ್ತೇವೆ ಎಂದರೆ ನಮ್ಮ ಸಂಸ್ಕ್ರತಿಯ ಒಂದೊಂದೇ ಅಂಶಗಳನ್ನು ಕಳೆದುಕೊಳ್ಳುವತ್ತ ಸಾಗುತ್ತಿದ್ದೇವೆ ಎಂದರ್ಥ. ಆಂಗ್ಲ ಮಾಧ್ಯಮದ ಬೋರ್ಡ್‌ ಕಂಡರೆ ಸಾಕು. ಅಲ್ಲಿಯ ಶಿಕ್ಷಕರು ಹೇಗಿದ್ದಾರೆ. ಗುಣಮಟ್ಟ ಹೇಗಿದೆ ಎಂಬುದನ್ನೆಲ್ಲ ನೋಡದೇ ನೇರವಾಗಿ ಮಕ್ಕಳನ್ನು ಸೇರಿಸುವಷ್ಟು ಆಂಗ್ಲಮಾಧ್ಯಮದ ಮೋಹ ಪೋಷಕರಿಗೆ ಬಂದಿ ಬಿಟ್ಟಿದೆ ಎಂದು ವಿಷಾದಿಸಿದರು.

ADVERTISEMENT

ಒಂದು ಭಾಷೆಯಾಗಿ ಇಂಗ್ಲಿಷ್‌ ಈಗ ಅನಿವಾರ್ಯ. ಆದರೆ ಮಾಧ್ಯಮವಾಗಿ ಅಲ್ಲ. ಕನ್ನಡದ ಅನ್ನ, ಗಾಳಿ, ಸೇವಿಸಿ, ನೌಕರಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆಆಂಗ್ಲ ಮಾಧ್ಯಮವನ್ನು ಅಪ್ಪಿಕೊಳ್ಳುವುದು ಸರಿಯಲ್ಲ. ಬದುಕು ಅಂದರೆ ಹೊಟ್ಟೆಪಾಡು ಮಾತ್ರವಲ್ಲ. ಆತ್ಮಗೌರವವೂ ಇರಬೇಕು ಎಂದರು.

ಜನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ, ‘ಕನ್ನಡವನ್ನು ಅನ್ನದ ಭಾಷೆಯನ್ನಾಗಿ, ಉದ್ಯೋಗದ ಭಾಷೆಯನ್ನಾಗಿ ಬೆಳೆಸುವ ಕೆಲಸವನ್ನು ಎಲ್ಲರೂ ಮಾಡಬೇಕು. ಹಲವು ಭಾಷೆಗಳ ಮಿತಿಯ ನಡುವೆ ಅತ್ಯುತ್ತಮ ಕೆಲಸಗಳಾಗಬೇಕು’ ಎಂದು ತಿಳಿಸಿದರು.

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ. ಎಂ.ಜಿ. ಈಶ್ವರಪ್ಪ ಅವರನ್ನು ಸಿದ್ಧಗಂಗಾ ವಿದ್ಯಾಸಂಸ್ಥೆ, ಕಲಾಕುಂಚ ಸಂಸ್ಥೆಗಳು ಗೌರವಿಸಿದವು.

ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷೆ ಹೇಮಾ ಶಾಂತಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ, ಪತ್ರಕರ್ತ ಹಳೇಬೀಡು ರಾಮಪ್ರಸಾದ್‌, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೋಜ, ಕಲಾಕುಂಚದ ಸಾಲಿಗ್ರಾಮ ಗಣೇಶ್‌ ಶೆಣೈ, ಕೆ.ಎಚ್‌. ಮಂಜುನಾಥ್‌, ಬೇಲೂರು ಸಂತೋಷ್‌ ಕುಮಾರ್‌ ಶೆಟ್ಟಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.