ADVERTISEMENT

Republic Day 2026: ಧ್ವಜಾರೋಹಣ ನೆರವೇರಿಸಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 4:36 IST
Last Updated 26 ಜನವರಿ 2026, 4:36 IST
   

ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ತೆರದ ಜೀಪಿನಲ್ಲಿ ಮೈದಾನದಲ್ಲಿ ಸಾಗಿದ ಸಚಿವರು, ಕವಾಯತು ಪರಿವೀಕ್ಷಣೆ ಮಾಡಿದರು. ಸ್ವಸ್ಥಾನಕ್ಕೆ ಮರಳಿದ ತಕ್ಷಣ ಗಣರಾಜ್ಯೋತ್ಸವ ಪರೇಡ್ ಆರಂಭವಾಯಿತು.

ಕವಾಯತಿನಲ್ಲಿ 22 ತಂಡಗಳು ಪಾಲ್ಗೊಂಡಿದ್ದವು. ಇದರಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಅರಣ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸೇರಿದಂತೆ 5 ಇಲಾಖಾ ತಂಡಗಳು. ಎನ್‌ಸಿಸಿ, ಶಾಲಾ ಹಾಗೂ ಕಾಲೇಜು ತಂಡಗಳಲ್ಲಿ ನೂರಾರು ವಿದ್ಯಾರ್ಥಿಗಳು ಹೆಜ್ಜೆ ಹಾಕಿ ಗಮನ ಸೆಳೆದರು.

ADVERTISEMENT

‘ಗಣರಾಜ್ಯೋತ್ಸವವನ್ನು ಹಬ್ಬದಂತೆ ಆಚರಿಸುವುದು ಮಾತ್ರವಲ್ಲದೇ, ಸಂವಿಧಾನ ನೀಡಿರುವ ಹಕ್ಕುಗಳನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಜಿಲ್ಲೆಯ ಅಭಿವೃದ್ಧಿಯೇ ನನ್ನ ಆದ್ಯತೆ. ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಸರ್ಕಾರ ಬದ್ಧವಾಗಿದೆ. ರೈತರ ರಕ್ಷಣೆ, ಯುವಜನರಿಗೆ ಉದ್ಯೋಗ ನೀಡುವುದೇ ಸರ್ಕಾರದ ಗುರಿ’ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.

‘2025-26ನೇ ಸಾಲಿನಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಡಿ ₹325 ಕೋಟಿ ವೆಚ್ಚದ 681 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗಲು ಬೆಂಬಲ ಬೆಲೆ ಯೋಜನೆಯಡಿ ನಾಲ್ಕು ಭತ್ತ ಖರೀದಿ ಕೇಂದ್ರ, ಐದು ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ವ್ಯತ್ಯಾಸದ ಮೊತ್ತವನ್ನು ರೈತರಿಗೆ ನೀಡಲಾಗುತ್ತಿದೆ’ ಎಂದರು.

‘ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ 11 ಸಾವಿರ ರೈತರಿಗೆ ₹42.27 ಕೋಟಿ ಪರಿಹಾರದ ಮೊತ್ತ ನೀಡಲಾಗಿದೆ. ಸುಸ್ಥಿರ ಕುಡಿಯುವ ನೀರು ಪೂರೈಕೆಗೆ ಒತ್ತು‌ ನೀಡಲಾಗಿದ್ದು, ಜಿಲ್ಲೆಯ 62 ಗ್ರಾಮಗಳು ದಿನದ 24 ಗಂಟೆ ಕುಡಿಯುವ ನೀರಿನ ಸೌಲಭ್ಯ ಪಡೆದುಕೊಂಡಿವೆ. ಗ್ರಾಮೀಣ ನೀರು ಪೂರೈಕೆಯಲ್ಲಿ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿ ಹೊರಹೊಮ್ಮಿದೆ. ಹೊಸ ಮರಳು ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದ್ದು, 19 ಮರಳು ಬ್ಲಾಕ್‌ಗಳನ್ನು ತೆರೆಯಲಾಗಿದೆ’ ಎಂದು ಹೇಳುದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪೂರ್ವ ವಲಯದ ಐಜಿಪಿ ಬಿ.ಆರ್.ರವಿಕಾಂತೇಗೌಡ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಿತ್ತೆ ಮಾಧವ ವಚನ ವಿಠ್ಠಲ ರಾವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.