ದಾವಣಗೆರೆ: ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಕೊಲೆ, ದರೋಡೆ, ಮನೆ ಕಳವುಗಳಂತಹ ಅಪರಾಧ ಪ್ರಕರಣಗಳು ಏರಿಕೆ ಕಂಡಿಲ್ಲ. ಆದರೆ, ಸಮಾಜವನ್ನು ತಲ್ಲಣಕ್ಕೆ ದೂಡುವ ಗಲಭೆ, ಕೋಮುಗಲಭೆ ಹಾಗೂ ಧಾರ್ಮಿಕ ಕಲಹ ಹೆಚ್ಚಾಗಿವೆ. ಬ್ಯಾಂಕ್‌ಗಳಲ್ಲಿ ಅಡವಿಟ್ಟ ಚಿನ್ನಕ್ಕೂ ಭದ್ರತೆ ಇಲ್ಲ ಎಂಬ ಆತಂಕವನ್ನು ಮೂಡಿಸಿದೆ.
ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ (ಎಸ್‌ಬಿಐ) ಗ್ರಾಹಕರು ಅಡವಿಟ್ಟ 17 ಕೆ.ಜಿ ಚಿನ್ನಾಭರಣ ಕಳವು ಮಾಡಿದ್ದು ತಲ್ಲಣ ಮೂಡಿಸಿತ್ತು. 2024ರಲ್ಲಿ ನಡೆದ ಅತಿ ದೊಡ್ಡ ದರೋಡೆ ಪ್ರಕರಣ ಇದಾಗಿತ್ತು. ಈ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಈವರೆಗೆ ಸಾಧ್ಯವಾಗಿಲ್ಲ. ದಾವಣಗೆರೆ ನಗರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟ ಹಾಗೂ ಚನ್ನಗಿರಿ ಪೊಲೀಸ್ ಠಾಣೆಯ ಬಳಿ ನಡೆದ ಗಲಾಟೆಗಳು ಜಿಲ್ಲೆಯಲ್ಲಿ ಅಪರಾಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಯ ಸೂಚಕದಂತಿವೆ.
2022ರಲ್ಲಿ ಧಾರ್ಮಿಕ ಕಲಹ, ಕೋಮುಗಲಭೆಯಂಥ 9 ಪ್ರಕರಣ ದಾಖಲಾಗಿದ್ದವು. 2023ರಲ್ಲಿ ಇವು ನಿಯಂತ್ರಣಕ್ಕೆ ಬಂದಿದ್ದವು. 2024ರಲ್ಲಿ ಈ ಪ್ರಕರಣಗಳು ಬಹುತೇಕ ದ್ವಿಗುಣಗೊಂಡಿವೆ. ಗಲಭೆ ಪ್ರಕರಣಗಳಲ್ಲಿ ಕೂಡ ಏರಿಕೆ ಕಂಡಿದೆ. 2023ರಲ್ಲಿ 155 ಪ್ರಕರಣ ದಾಖಲಾಗಿದ್ದರೆ, 2024ರಲ್ಲಿ 173 ಗಲಭೆ ಪ್ರಕರಣ ದಾಖಲಾಗಿವೆ.
2023ಕ್ಕೆ ಹೋಲಿಸಿದರೆ ಸೈಬರ್ ಅಪರಾಧ ಪ್ರಕರಣಗಳು ಮಾತ್ರ ಹೆಚ್ಚಾಗಿವೆ. ಕೊಲೆ ಕಳವು ರೀತಿಯ ಅಪರಾಧ ಪ್ರಕರಣ ಕಡಿಮೆಯಾಗಿವೆ. ಕಾನೂನು ಮತ್ತು ಸುವ್ಯವಸ್ಥೆ ಬಿಗಿಗೊಂಡಿದೆ.ಉಮಾ ಪ್ರಶಾಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಸಿವಿಲ್ ವಿವಾದಗಳ ಕಾರಣಕ್ಕೂ ಇಂತಹ ಗಲಭೆಗಳು ಸಂಭವಿಸುತ್ತವೆ. ಕಾನೂನು ಸುವ್ಯವಸ್ಥೆಯಲ್ಲಿ ಇವುಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಕೋಮುಗಲಭೆಗೆ ಸಂಬಂಧಿಸಿದಂತೆ ಚನ್ನಗಿರಿ ಮತ್ತು ದಾವಣಗೆರೆಯಲ್ಲಿ ಪ್ರತ್ಯೇಕವಾಗಿ ತಲಾ 6 ಪ್ರಕರಣ ದಾಖಲಿಸಲಾಗಿತ್ತು. ಹೀಗಾಗಿ, ಪ್ರಕರಣಗಳ ಸಂಖ್ಯೆ ಹೆಚ್ಚಿರುವಂತೆ ಗೋಚರವಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
2024ರಲ್ಲಿ 27 ಜನರು ಕೊಲೆಯಾಗಿದ್ದಾರೆ. 86 ಕೊಲೆ ಯತ್ನಗಳು ನಡೆದಿವೆ. ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆಯ ಪರಿಣಾಮವಾಗಿ ಸರಗಳವು ಘಟನೆಗಳು ನಿಯಂತ್ರಣಕ್ಕೆ ಬಂದಿವೆ. 182 ಮನೆಕಳವು ಪ್ರಕರಣಗಳಲ್ಲಿ 31 ಕೃತ್ಯಗಳು ಹಗಲು ಹೊತ್ತು ನಡೆದಿದ್ದು ಆತಂಕಕಾರಿಯಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಜಿಲ್ಲೆಯಲ್ಲಿ 63 ಪ್ರಕರಣ ದಾಖಲಾಗಿವೆ.
ಸೈಬರ್ ಅಪರಾಧ ಏರಿಕೆ:
ಅಂತರ್ಜಾಲ ಬಳಕೆ ಹೆಚ್ಚಾಗುತ್ತಿದ್ದಂತೆ ಸೈಬರ್ ಅಪರಾಧಗಳ ಸಂಖ್ಯೆಯೂ ಏರಿಕೆ ಕಾಣುತ್ತಿದೆ. ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. 2022ರಲ್ಲಿ 91, 2023ರಲ್ಲಿ 93 ಸೈಬರ್ ಅಪರಾಧ ಪ್ರಕರಣ ದಾಖಲಾಗಿದ್ದವು. ಕಳೆದ ವರ್ಷ 139 ಸೈಬರ್ ಅಪರಾಧಗಳು ನಡೆದಿವೆ.
ಆನ್‌ಲೈನ್ ಮೂಲಕ ಹಣ ವರ್ಗಾವಣೆಯತ್ತ ಜನರ ಒಲವು ಹೆಚ್ಚಾಗಿದೆ. ಇದನ್ನೇ ದಾಳವಾಗಿ ಮಾಡಿಕೊಂಡ ಸೈಬರ್ ವಂಚಕರು ಜನರನ್ನು ಮೋಸದ ಬಲೆಗೆ ತಳ್ಳುತ್ತಿದ್ದಾರೆ. ಮೊಬೈಲ್ ಫೋನ್‌ಗೆ ಸಂದೇಶ ಕಳುಹಿಸಿ, ಸಾಮಾಜಿಕ ಜಾಲತಾಣದಲ್ಲಿ ಕೊಡುಗೆ ಬಂದಿದೆ ಎಂಬುದಾಗಿ ನಂಬಿಸಿ ಹಾಗೂ ಒಟಿಪಿ ಪಡೆದು ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ದೋಚುತ್ತಿದ್ದಾರೆ.
ಅಪಘಾತ ಇಳಿಮುಖ
ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳು 2023ಕ್ಕೆ ಹೋಲಿಸಿದರೆ ಇಳಿಕೆ ಕಂಡಿವೆ. 2023ರಲ್ಲಿ 1089 ಅಪಘಾತ ಪ್ರಕರಣಗಳಲ್ಲಿ 293 ಜನರು ಮೃತಪಟ್ಟಿದ್ದರು. 2024ರಲ್ಲಿ ಸಂಭವಿಸಿದ 1029 ಅಪಘಾತ ಪ್ರಕರಣಗಳಲ್ಲಿ 283 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಸಂಭವಿಸುವ ಸಾವಿನ ಪ್ರಮಾಣ ಕೂಡ ಕಡಿಮೆಯಾಗಿದೆ. ಗಾಯಗೊಂಡವರ ಸಂಖ್ಯೆಯೂ ಇಳಿಮುಖವಾಗಿದೆ.
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ರಸ್ತೆ ಅಪಘಾತಗಳು ಕಡಿಮೆ ಪ್ರಮಾಣದಲ್ಲಿ ದಾಖಲಾಗಿವೆ. ಜಿಲ್ಲೆಯಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ರಾಜ್ಯ ಹೆದ್ದಾರಿಯ ವ್ಯಾಪ್ತಿ ಕೂಡ ದೊಡ್ಡದಿದೆ. ಅಪಘಾತ ವಲಯಗಳನ್ನು ಪತ್ತೆ ಮಾಡಿದ ಪೊಲೀಸ್ ಇಲಾಖೆಯು ಕೈಗೊಂಡ ಕೆಲ ಮುನ್ನೆಚ್ಚರಿಕೆ ಕ್ರಮಗಳು ಫಲಪ್ರದವಾಗಿರುವಂತೆ ಕಾಣುತ್ತಿದೆ.
ಮಹಿಳೆಯರ ನಾಪತ್ತೆ ಕಳವಳಕಾರಿ
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ 611 ಮಹಿಳೆಯರು ನಾಪತ್ತೆಯಾಗಿದ್ದಾರೆ. ಪ್ರತಿ ವರ್ಷವೂ ಈ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಕಳವಳಕಾರಿಯಾಗಿದೆ. 2022ರಲ್ಲಿ 431 ಮಹಿಳೆಯರು ನಾಪತ್ತೆಯಾಗಿದ್ದರು. ಎರಡು ವರ್ಷಗಳಲ್ಲಿ ನಾಪತ್ತೆ ಪ್ರಕರಣ ಗಣನೀಯವಾಗಿ ಏರಿಕೆ ಕಂಡಿದ್ದು ಆತಂಕಕಾರಿಯಾಗಿದೆ. ಪುರುಷರ ನಾಪತ್ತೆ ಪ್ರಕರಣದಲ್ಲಿ ದೊಡ್ಡ ವ್ಯತ್ಯಾಸವೇನೂ ಆಗಿಲ್ಲ. ಪತ್ತೆಯಾದವರಲ್ಲಿ ಮಹಿಳೆಯರಿಗಿಂತ ಪುರುಷರ ಪ್ರಮಾಣ ಹೆಚ್ಚಾಗಿದೆ.
‘ಪ್ರೀತಿ ಪ್ರೇಮ ಕೌಟುಂಬಿಕ ಕಲಹದಿಂದ ಮನೆತೊರೆಯುವ ಯುವತಿಯರು ಹಾಗೂ ಮಹಿಳೆಯರಲ್ಲಿ ಬಹುತೇಕರು ಪತ್ತೆಯಾಗಿದ್ದಾರೆ. ಪತ್ತೆಯಾಗದೇ ಇರುವ ಇನ್ನೂ ಕೆಲವರು ಏನಾದರು ಎಂಬುದು ಈವರೆಗೆ ಗೊತ್ತಾಗಿಲ್ಲ’ ಎನ್ನುತ್ತವೆ ಪೊಲೀಸ್ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.