ADVERTISEMENT

ಶುದ್ಧ ನೀರಿನ ಘಟಕ ಸುಸ್ಥಿತಿಯಲ್ಲಿಡಿ: ಸಚಿವ ಈಶ್ವರಪ್ಪ

ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2021, 16:18 IST
Last Updated 6 ಜನವರಿ 2021, 16:18 IST
ದಾವಣಗೆರೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಜಿಲ್ಲೆಯ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಿ. ಶೀಘ್ರದಲ್ಲೇ ಜಂಟಿ ಸದನ ಸಮಿತಿ ಪರಿಶೀಲನೆಗೆ ಬರಲಿದ್ದು, ಲೋಪವಾಗಿರುವುದು ಕಂಡುಬಂದರೆ ಶಿಸ್ತುಕ್ರಮ ಕೈಗೊಳ್ಳಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಜಿಲ್ಲೆಯಲ್ಲಿರುವ 791 ಶುದ್ಧ ನೀರಿನ ಘಟಕಗಳ ಪೈಕಿ 774 ಘಕಟಗಳು ಕಾರ್ಯನಿರ್ವಹಿಸುತ್ತಿವೆ ಎಂದು ಎಂದು ಅಧಿಕಾರಿಗಳು ನೀಡಿದ ಮಾಹಿತಿಯಿಂದ ಅಸಮಾಧಾನಗೊಂಡರು.

‘ರಾಜ್ಯದ ವಿವಿಧೆಡೆ ಶುದ್ಧ ನೀರಿನ ಘಟಕಗಳಲ್ಲಿ ಸಮಸ್ಯೆ ಇರುವ ಬಗ್ಗೆ ವಿಧಾನಸೌಧದಲ್ಲಿ ಗಂಭೀರವಾಗಿ ಚರ್ಚೆಯಾಗಿತ್ತು. ಈ ಬಗ್ಗೆ ಪರಿಶೀಲಿಸಲು ಮುಖ್ಯಮಂತ್ರಿಯವರು ಜಂಟಿ ಸದನ ಸಮಿತಿಯನ್ನು ರಚಿಸಿದ್ದಾರೆ. ಶೀಘ್ರದಲ್ಲೇ ಸಮಿತಿಯು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ. ನೀವು ನೀಡಿರುವ ದಾಖಲೆಯಲ್ಲಿ ಸರಿಯಾಗಿದೆ ಎಂದು ಹೇಳಿರುವ ಘಟಕ ಹಾಳಾಗಿರುವುದು ಸಮಿತಿಯ ಗಮನಕ್ಕೆ ಬಂದರೆ ನಿಮ್ಮನ್ನು ಸೇವೆಯಿಂದ ಅಮಾನತುಗೊಳಿಸುತ್ತಾರೆ. ಹೀಗಾಗಿ ಜಿಲ್ಲೆಯ ಅಧಿಕಾರಿಗಳೊಂದಿಗೆ ಜನಪ್ರತಿನಿಧಿಗಳೂ ಸ್ಥಳ ಪರಿಶೀಲಿಸಿ ಎಲ್ಲಾ ಘಟಕಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಅಧಿಕಾರಿಗಳು ಶೇ 10ರಷ್ಟು ಕಮಿಷನ್‌ ಪಡೆಯುವ ಸಲುವಾಗಿ ಕೆಲಸ ಮಾಡಿಸಬೇಡಿ. ಬಡವರಿಗೆ ನೀರು ಕೊಡುವ ಕೆಲಸವನ್ನೂ ಸರಿಯಾಗಿ ಮಾಡಿ’ ಎಂದು ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹ 11.17 ಕೋಟಿ ನಿಗದಿಯಾಗಿದ್ದರೂ ಕೇವಲ ₹ 2.26 ಕೋಟಿ ಖರ್ಚಾಗಿರುವುದಕ್ಕೆ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. 9 ಕಾಮಗಾರಿಗಳು ಪೂರ್ಣಗೊಂಡಿದ್ದು, 3 ಕಾಮಗಾರಿಗಳು ಮಾತ್ರ ಬಾಕಿ ಇವೆ. ಗುತ್ತಿಗೆದಾರರಿಗೆ ಹಣ ಪಾವತಿಯಾಗದೇ ಇರುವುದರಿಂದ ಆರ್ಥಿಕ ಪ್ರಗತಿ ಕುಂಠಿತವಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ನಾಗಪ್ಪ ವಿವರಣೆ ನೀಡಲು ಮುಂದಾದರು.

ಇದರಿಂದ ಸಿಟ್ಟಿಗೆದ್ದ ಸಚಿವರು, ‘ಕೆಲಸ ಮಾಡಿದರೂ ಗುತ್ತಿಗೆದಾರರು ಹಣ ಪಡೆದುಕೊಳ್ಳದೇ ಇರುವುದು ದಾವಣಗೆರೆಯಲ್ಲಿ ಮಾತ್ರ ಇರಬೇಕು. ಶಾಮನೂರು ಶಿವಶಂಕರಪ್ಪ, ಜಿ.ಎಂ. ಸಿದ್ದೇಶ್ವರ ಇಬ್ಬರೇ ಜಿಲ್ಲೆಯಲ್ಲಿ ದೊಡ್ಡ ಶ್ರೀಮಂತರಿದ್ದಾರೆ. ಅವರಿಗೇನೋ ಹಣ ಬೇಕಾಗಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಗುತ್ತಿಗೆದಾರರು ಕೆಲಸ ಮಾಡಿದ್ದರೆ ತಕ್ಷಣ ಬಿಲ್‌ ಹಣ ಪಾವತಿಸಿ ಎಂದೂ ಸೂಚಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ‘10 ವರ್ಷಗಳಿಂದ ಸಂತೆಮುದ್ದಾಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಇದೀಗ 175 ಹಳ್ಳಿಗಳನ್ನು ಒಳಗೊಳ್ಳುವ ಯೋಜನೆ ತಯಾರಾಗಿದೆ. ಆದಷ್ಟು ಬೇಗ ಈ ಯೋಜನೆಗೆ ಅನುಮೋದನೆ ನೀಡಬೇಕು’ ಎಂದು ಕೋರಿದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ‘ಸಂತೆಮುದ್ದಾಪುರ ಯೋಜನೆಯು 2–3 ಬಾರಿ ಪರಿಷ್ಕೃತವಾಗಿ ಈಗ ₹ 275 ಕೋಟಿ ವೆಚ್ಚದಲ್ಲಿ 175 ಹಳ್ಳಿಗಳಿಗೆ ನೀರು ಒದಗಿಸುವ ಯೋಜನೆ ಸಿದ್ಧವಾಗಿದೆ. ಈ ಬಗ್ಗೆ ಮುಖ್ಯ ಎಂಜಿನಿಯರ್‌ ಜೊತೆ ಚರ್ಚಿಸಲಾಗುವುದು’ ಎಂದು ಹೇಳಿದರು.

ಶಾಸಕ ಎಸ್.ವಿ.ರಾಮಚಂದ್ರ, ‘ಜಗಳೂರು ತಾಲ್ಲೂಕಿನ ಅನೇಕ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಎಂಜಿನಿಯರ್‌ ಕೆಲಸ ಮಾಡಬೇಕು’ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌.ವಿಜಯಕುಮಾರ್, ‘ಜಿಲ್ಲೆಯಲ್ಲಿ ಒಟ್ಟು 1,723 ಅಂಗನವಾಡಿ ಕೇಂದ್ರಗಳಿವೆ. ನಗರದಲ್ಲಿ 344 ಮತ್ತು ಗ್ರಾಮೀಣ ಭಾಗದಲ್ಲಿ 1,379 ಕೇಂದ್ರಗಳಿವೆ. ಈ ಪೈಕಿ ನಗರದಲ್ಲಿ 53 ಮತ್ತು ಗ್ರಾಮೀಣ ಭಾಗದಲ್ಲಿ 253 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಪ್ರಸಕ್ತ ಸಾಲಿನಲ್ಲಿ 250 ಸ್ವಂತ ಕಟ್ಟಡಗಳಿಗೆ ತಲಾ ₹ 50 ಸಾವಿರ ವೆಚ್ಚದಲ್ಲಿ ದುರಸ್ತಿ ಮಾಡಲು ಪಿಆರ್‌ಇಡಿ ಕ್ರಿಯಾಯೋಜನೆ ತಯಾರಿಸಿಕೊಡಬೇಕಾಗಿದೆ’ ಎಂದು ಮಾಹಿತಿ ನೀಡಿದರು.

ಸಚಿವರು ಮಾತನಾಡಿ, ‘ಶಾಸಕರು ಮತ್ತು ಸಂಸದರು ತಮ್ಮ ಅನುದಾನದಲ್ಲಿ ಅಥವಾ ದಾನಿಗಳಿಂದ ಹಣ ಸಂಗ್ರಹಿಸಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಬೇಕು. ನರೇಗಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ತಲಾ ₹ 5 ಲಕ್ಷ ಅನುದಾನದಲ್ಲಿ ಕಟ್ಟಡ ನಿರ್ಮಿಸಬೇಕು’ ಎಂದು ಸೂಚಿದರು.

ನರೇಗಾದಡಿ ಹರಿಹರ ಮತ್ತು ಜಗಳೂರಿನಲ್ಲಿ ಪ್ರಗತಿ ಕಡಿಮೆ ಆಗಿರುವ ಬಗ್ಗೆ ಪ್ರಧಾನ ಕಾರ್ಯದರ್ಶಿ ಅತೀಕ್‌ ಆಕ್ಷೇಪ ವ್ಯಕ್ತಪಡಿಸಿದರು. ಅರಣ್ಯ ಇಲಾಖೆಯಿಂದ ನರ್ಸರಿಗಳಲ್ಲಿ ಹೆಚ್ಚು ಸಸಿಗಳನ್ನು ಬೆಳೆಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಷ್ಟಿಸಬೇಕು. ಫಾರಂ, ರಸ್ತೆ ಬದಿ, ಹೆದ್ದಾರಿ ಪಕ್ಕದಲ್ಲಿ ಅರಣ್ಯೀಕರಣಕ್ಕೆ ಒತ್ತು ನೀಡಬೇಕು’ ಎಂದು ಸೂಚಿಸಿದರು.

ಶಾಸಕರಾದ ಎಸ್.ಎ.ರವೀಂದ್ರನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ ಕೆ.ವಿ, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಉಪ ಕಾರ್ಯದರ್ಶಿ ಆನಂದ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.