ಭಾನುವಳ್ಳಿ (ಕಡರನಾಯ್ಕನಹಳ್ಳಿ): ಗ್ರಾಮದ ಸಂಪರ್ಕ ರಸ್ತೆ ದಶಕಗಳಿಂದ ದುರಸ್ತಿ ಕಾಣದೆ ಹದಗೆಟ್ಟಿದೆ. ಇದರಿಂದ ಬೇಸತ್ತ ಗ್ರಾಮಸ್ಥರು ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ನೇತೃತ್ವದಲ್ಲಿ ರಸ್ತೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟಿಸಿದರು.
ನಂದಿಗುಡಿ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಾಮತೀರ್ಥ, ನಾಗೇನಹಳ್ಳಿ ಗ್ರಾಮದ ಮೂಲಕ ಹೆದ್ದಾರಿ ತಲುಪುತ್ತದೆ.
ಈ ರಸ್ತೆಯ ತುಂಬಾ ತಗ್ಗು ಗುಂಡಿಗಳು ತುಂಬಿಕೊಂಡಿವೆ. ಭಾನುವಳ್ಳಿ ಗ್ರಾಮದಲ್ಲಿ ರಸ್ತೆ ತುಂಬಾ ಹದಗೆಟ್ಟಿದೆ.
‘ಮಳೆಗಾಲದಲ್ಲಿ ಓಡಾಡಲು ತೀವ್ರ ತೊಂದರೆಯಾಗುತ್ತಿದೆ. ವಿದ್ಯಾರ್ಥಿಗಳು ಶಾಲೆಗೆ ತೆರಳಲು, ರೋಗಿಗಳು ಆಸ್ಪತ್ರೆಗೆ ತೆರಳಲು ಪ್ರಯಾಸ ಪಡಬೇಕಿದೆ ಎಂದು ಗ್ರಾಮ ರೈತ ಸಂಘದ ಅಧ್ಯಕ್ಷ ಎನ್.ಪ್ರಕಾಶ್ ಹೇಳಿದರು.
‘ಶೀಘ್ರವೇ ರಸ್ತೆ ಕಾಮಗಾರಿಗೆ ಸಂಬಂಧಪಟ್ಟವರು ಮುಂದಾಗಬೇಕು’ ಎಂದು ಅಂಬೇಡ್ಕರ್ ಯುವಕ ಸಂಘದ ಉಪಾಧ್ಯಕ್ಷ ಹಳದಪ್ಪರ ಸಂತೋಷ್, ಕಾರ್ಯದರ್ಶಿ ನಾಗೇಶ್, ಖಜಾಂಚಿ ಹರೀಶ್, ಸದಸ್ಯರಾದ ನವೀನ್, ಪ್ರವೀಣ್, ಸಚಿನ್, ಸ್ವಾಮಿ ನಿಂಗಪ್ಪ, ಹನುಮಂತಪ್ಪ, ರಾಜಪ್ಪ ಇದ್ದರು.
‘ರಸ್ತೆ ದುರಸ್ತಿಗೆ ಬೇಕಾಗುವಷ್ಟು ಅನುದಾನವಿಲ್ಲ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಬರುತ್ತದೆ. ಈ ಬಗ್ಗೆ ಇಲಾಖೆಗೆ ಮನವಿ ಮಾಡುತ್ತೇವೆ’ ಎಂದು ಭಾನುವಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಕಾಳಮ್ಮ ತಿಳಿಸಿದರು.
ಈ ರಸ್ತೆ ಕಾಮಗಾರಿಗೆ ಟೆಂಡರ್ ಆಗಿದೆ. ₹1.95 ಕೋಟಿ ಮೊತ್ತದ ಕಾಮಗಾರಿ ಇದಾಗಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ತುರ್ತಾಗಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಇಇ ಮರಿಸ್ವಾಮಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.