ADVERTISEMENT

ಹರಿಹರ | ರಸ್ತೆ ದುರಸ್ತಿಗೆ ಆಗ್ರಹ: ಕರವೇ, ಆಟೋ ಚಾಲಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 6:49 IST
Last Updated 30 ಅಕ್ಟೋಬರ್ 2025, 6:49 IST
ಹರಿಹರದಲ್ಲಿ ಮಂಗಳವಾರ ಕರವೇ  ಹಾಗೂ ಅಟೋ ಚಾಲಕ– ಮಾಲಕರ ಸಂಘದಿಂದ ರಸ್ತೆ ದುರಸ್ತಿಗಾಗಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಎಂ.ಪಿ. ನಾಗಣ್ಣ ಅವರಿಗೆ ಮನವಿ ಸಲ್ಲಿಸಿದರು
ಹರಿಹರದಲ್ಲಿ ಮಂಗಳವಾರ ಕರವೇ  ಹಾಗೂ ಅಟೋ ಚಾಲಕ– ಮಾಲಕರ ಸಂಘದಿಂದ ರಸ್ತೆ ದುರಸ್ತಿಗಾಗಿ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಪೌರಾಯುಕ್ತ ಎಂ.ಪಿ. ನಾಗಣ್ಣ ಅವರಿಗೆ ಮನವಿ ಸಲ್ಲಿಸಿದರು   

ಹರಿಹರ: ನಗರದಲ್ಲಿ ಗುಂಡಿ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಪಡಿಸಲು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಹಾಗೂ ಆಟೋ ಚಾಲಕರು ಮತ್ತು ಮಾಲಿಕರ ಸಂಘದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಶಿವಮೊಗ್ಗ ರಸ್ತೆಯ ಪಕ್ಕೀರಸ್ವಾಮಿ ಮಠದಿಂದ ನಗರಸಭೆವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಾರ್ಗದುದ್ದಕ್ಕೂ ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಯ ವಿರುದ್ಧ ಘೋಷಣೆ ಕೂಗಿದರು. ನಂತರ ನಗರಸಭೆ ಅಧ್ಯಕ್ಷೆ ಹಾಗೂ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಇತಿಹಾಸ ಪ್ರಸಿದ್ಧಿ ಪಡೆದಿರುವ ಹರಿಹರವು ನಾಲ್ಕೂ ದಿಕ್ಕುಗಳಿಂದ ರಾಜ್ಯವನ್ನು ಸಂಪರ್ಕಿಸುವ ಜಂಕ್ಷನ್ ಪ್ರದೇಶವಾಗಿದೆ. ನಿತ್ಯ ಸಾವಿರಾರು ವಾಹನಗಳು, ಅಸಂಖ್ಯಾತ ಜನ ನಗರದ ಮೂಲಕ ಸಂಚರಿಸುತ್ತಾರೆ. ಆದರೆ ಇಲ್ಲಿನ ರಸ್ತೆಗಳು ಗುಂಡಿಮಯವಾಗಿದ್ದು, ಜನ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಕರವೇ ತಾಲ್ಲೂಕು ಘಟಕ ಅಧ್ಯಕ್ಷ ವೈ. ರಮೇಶ್ ಮಾನೆ ಆಕ್ರೋಶ ಹೊರ ಹಾಕಿದರು.

ADVERTISEMENT

ರಸ್ತೆ ಗುಂಡಿಗಳ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ನಗರಸಭೆ ಅಥವಾ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯೆ ಪ್ರವೇಶಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ, ರಸ್ತೆ ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ನಿತ್ಯ ಗುಂಡಿಗಳಿಂದ ಪಾದಚಾರಿಗಳು, ವೃದ್ಧರು, ಅಂಗ ವಿಕಲರು, ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಕರವೇ ನಗರ ಘಟಕ ಅಧ್ಯಕ್ಷ ಪ್ರೀತಮ್ ಬಾಬು ಹೇಳಿದರು.

ರಸ್ತೆಗಳ ಅಭಿವೃದ್ಧಿ, ನಿರ್ವಹಣೆಗೆ ಕೋಟಿಗಟ್ಟಲೆ ಅನುದಾನ ಬಿಡುಗಡೆ ಆಗುತ್ತದೆ. ಆದರೆ ಆ ಅನುದಾನದ ಹೇಗೆ ಆಗುತ್ತಿದೆ. ಯಾರ ಜೇಬುಗಳಿಗೆ ಸೇರುತ್ತಿದೆ ಎಂದು ತಿಳಿಯುತ್ತಿಲ್ಲ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆಗಳು ರಸ್ತೆ ದುರಸ್ತಿ ಮಾಡದಿದ್ದರೆ ಈ ಎರಡೂ ಕಚೇರಿಗಳ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದೆಂದು ಕರವೇ ಮುಖಂಡ ಬಿ. ಮಗ್ದುಮ್ ಎಚ್ಚರಿಸಿದರು.

ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಮುಚ್ಚಲು ₹ 30 ಲಕ್ಷ ಮೀಸಲಿಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಮನವಿ ಸ್ವೀಕರಿಸಿದ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮತ್ತು ಪೌರಾಯುಕ್ತ ನಾಗಣ್ಣ ಎಂ.ಪಿ. ಭರವಸೆ ನೀಡಿದರು.

ಕರವೇ ಪದಾಧಿಕಾರಿಗಳಾದ ಸೈಯದ್ ಮುಬಷೀರ್, ವಿನಾಯಕ, ಶಂಕರ್ ದುರುಗೋಜಿ, ಅಲಿ ಅಕ್ಬರ್, ಅಟೋ ಚಾಲಕರ ಮತ್ತು ಮಾಲಿಕರ ಸಂಘದ ಪದಾಧಿಕಾರಿಗಳಾದ ಸಿದ್ದಲಿಂಗಸ್ವಾಮಿ, ಮೊಹನ ಗೌಡ್ರು, ಕೇಶವ್, ಮಂಜಣ್ಣ, ತಿಪ್ಪೇಶ್, ನಜೀರ್ ಸಾಬ್, ಶೇಖ್ ಅಲ್ತಾಫ್, ಚಂದ್ರಪ್ಪ, ಹನುಮಂತಪ್ಪ, ರೈತ ಸಂಘದ ಗೀತಾ ಹಾಗೂ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.