ADVERTISEMENT

ರಂಜಾನ್ ವಿಶೇಷ | ಉಪವಾಸದ ತಿಂಗಳಲ್ಲಿ ಒಬ್ಬ ಮಹಿಳೆಯ ಒಂದು ದಿನದ ವೃತ್ತಾಂತ

ರೋಜಾ: ದಣಿವರಿಯದ ಕಾಯಕದಲ್ಲಿ ಮಹಿಳೆಯರು

ಬಾಲಕೃಷ್ಣ ಪಿ.ಎಚ್‌
Published 29 ಮೇ 2019, 4:51 IST
Last Updated 29 ಮೇ 2019, 4:51 IST
ಉಪವಾಸ ಬಿಡುವ ಹೊತ್ತಿನ ಪ್ರಾರ್ಥನೆಯಲ್ಲಿ ಖಾಲಿದ ಖಾತೂನ್‌ ಮತ್ತು ಕುಟುಂಬದ ಸದಸ್ಯರು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ
ಉಪವಾಸ ಬಿಡುವ ಹೊತ್ತಿನ ಪ್ರಾರ್ಥನೆಯಲ್ಲಿ ಖಾಲಿದ ಖಾತೂನ್‌ ಮತ್ತು ಕುಟುಂಬದ ಸದಸ್ಯರು. ಪ್ರಜಾವಾಣಿ ಚಿತ್ರ: ಅನೂಪ್‌ ಆರ್‌. ತಿಪ್ಪೇಸ್ವಾಮಿ   

ದಾವಣಗೆರೆ: ರಂಜಾನ್‌ ಉಪವಾಸದ ಜತೆಗೆ ಪುರುಷರ ದುಡಿಮೆ ಕಾಣಿಸುತ್ತದೆ. ಮನೆಯೊಳಗಿದ್ದು, ಪ್ರಾರ್ಥನೆ ಜತೆಗೆ ಮನೆ ನಿರ್ವಹಿಸಲು ದಿನಪೂರ್ತಿ ಕೆಲಸ ಮಾಡುವ ಮಹಿಳೆಯರು ಹೊರಜಗತ್ತಿಗೆ ಗೊತ್ತಾಗುವುದಿಲ್ಲ.

ಈ ತಿಂಗಳನ್ನು ಮಹಿಳೆಯರು ಹೇಗೆ ನಿರ್ವಹಿಸುತ್ತಾರೆ ಎಂದು ಹುಡುಕಿಕೊಂಡು ‘ಪ್ರಜಾವಾಣಿ’ ಹೋದಾಗ ಅಹ್ಮದ್‌ನಗರ ಜಿ. ಖಲೀಲ್‌ ಉಲ್ಲಾ ಅವರ ಪತ್ನಿ ಖಾಲಿದಾ ಖಾತೂನ್‌ ದಣಿವರಿಯದ ಕೆಲಸಗಳನ್ನು ಬಿಚ್ಚಿಟ್ಟರು.

ಮಕ್ಕಳಿಂದ ರಂಜಾನ್ ಪ್ರಾರ್ಥನೆ

ಅವರು ನೀಡಿದ ಒಂದು ದಿನದ ವಿವರಣೆ ಹೀಗಿದೆ...

ADVERTISEMENT

ಮುಂಜಾನೆ ಮೂರು ಗಂಟೆಯ ಹೊತ್ತಿಗೆ ಏಳುತ್ತೇನೆ. ರಂಜಾನ್‌ ತಿಂಗಳಲ್ಲಿ ಮಾತ್ರ ಮಾಡುವ ವಿಶೇಷ ಪ್ರಾರ್ಥನೆಯಾದ ‘ತಹಜ್ಜ್‌ರ್‌’ ಮಾಡಿದ ಮೇಲೆ ಅಡುಗೆ ತಯಾರಿಯಲ್ಲಿ ತೊಡಗಿಕೊಳ್ಳುತ್ತೇನೆ. ತರಕಾರಿ, ಚಿಕನ್‌, ಮಟನ್‌ ಹೀಗೆ ಯಾವುದಾದರೂ ಒಂದು ಸಾರು ತಯಾರಿಸುತ್ತೇನೆ. ಪಲ್ಯ, ಚಪಾತಿ ಅಥವಾ ಮುದ್ದೆ, ಅನ್ನ ಮಾಡಬೇಕಾಗುತ್ತದೆ. ಇದೆಲ್ಲ ಮುಗಿಯುವ ಹೊತ್ತಿಗೆ ಬೆಳಿಗ್ಗೆ 4 ಆಗುತ್ತದೆ. ಅಷ್ಟು ಹೊತ್ತಿಗೆ ಮಕ್ಕಳನ್ನು ಎಬ್ಬಿಸುತ್ತೇನೆ. 4.30ಕ್ಕೆ ಆಹಾರ ಸೇವನೆ ಮುಗಿಯುತ್ತದೆ.

5.30ಕ್ಕೆ ಬೆಳಿಗ್ಗಿನ ಪ್ರಾರ್ಥನೆ ‘ಫಜರ್‌’ ಮುಗಿಸಿ ಕುರಾನ್‌ ಪಠಣ ಆರಂಭಿಸುತ್ತೇನೆ. ಸುಮಾರು ಒಂದೂವರೆ ಗಂಟೆಯಷ್ಟು ಹೊತ್ತು ಪಠಣ ಮಾಡಿದ ಮೇಲೆ ದೈನಂದಿನ ಕೆಲಸಗಳು ಆರಂಭಗೊಳ್ಳುತ್ತವೆ. ಬಟ್ಟೆ ಒಗೆಯುವುದು, ಪಾತ್ರೆ ತೊಳೆಯುವುದು ಮುಂತಾದ ಕೆಲಸಗಳು ಮುಗಿದ ಬಳಿಕ ಮತ್ತೆ ಸರಳವಾದ ಊಟ ತಯಾರಿಸುತ್ತೇನೆ. ಮನೆಯಲ್ಲಿ ಏಳು ವರ್ಷದೊಳಗಿನ ಮಕ್ಕಳು, ವೃದ್ಧರು, ಅನಾರೋಗ್ಯಪೀಡಿತರು ಇದ್ದರೆ ಅವರಿಗೆ ಊಟ ತಯಾರು ಮಾಡಬೇಕಾಗುತ್ತದೆ.

ಖಾತೂನ್

ಮಧ್ಯಾಹ್ನ 1.30ಕ್ಕೆ ‘ಜೋಹರ್‌’ ಪ್ರಾರ್ಥನೆ ಮುಗಿಸಿದ ಬಳಿಕ ಸ್ವಲ್ಪ ಹೊತ್ತು ಕುಳಿತುಕೊಳ್ಳುತ್ತೇನೆ. ಕೆಲವು ಮನೆಗಳಲ್ಲಿ ಮಹಿಳೆಯರು ವಿಶ್ರಾಂತಿಗಾಗಿ ಸ್ವಲ್ಪ ಹೊತ್ತು ಮಲಗುತ್ತಾರೆ. ನಾನು ಮಲಗುವುದಿಲ್ಲ. ಮಧ್ಯಾಹ್ನ 3ರ ನಂತರ ಮತ್ತೆ ಸಂಜೆಯ ತಿನಿಸುಗಳನ್ನು ಮಾಡಲು ತಯಾರಾಗಬೇಕು. ಉಪವಾಸ ಬಿಡುವ ಹೊತ್ತಿಗೆ ಬೇಕಾದ ಸಮೋಸಾ, ಬೋಂಡಾ, ಜ್ಯೂಸ್, ಖೀರ್‌, ಗಸೆಗಸೆ ಹಾಲು, ಬಾದಾಮಿ ಹಾಲು, ಖರ್ಜೂರ, ಹಣ್ಣುಗಳು ಹೀಗೆ ಅಂದಂದಿಗೆ ಯಾವುದು ಇರುತ್ತದೋ ಅದನ್ನು ಜೋಡಿಸಿ ಇಡುತ್ತೇನೆ. ರಾತ್ರಿಯ ಊಟವೂ ಇದೇ ಹೊತ್ತಿನಲ್ಲಿ ತಯಾರಿಸುತ್ತೇನೆ. ದೋಸೆ ಮಾಡುವುದಿದ್ದರೆ ಮಾತ್ರ ರಾತ್ರಿಯೇ ಹೊಯ್ದು ಕೊಡುತ್ತೇನೆ.

ಸಂಜೆ 5ಕ್ಕೆ ‘ಅಸರ್‌’ ಪ್ರಾರ್ಥನೆಯ ಮೊದಲು ಅಡುಗೆ ತಯಾರಿಯ ಕೆಲಸಗಳನ್ನು ಮುಗಿಸಿರುತ್ತೇನೆ. ಸಂಜೆ 6.ರಿಂದ 6.30ರ ವರೆಗೆ ನಮ್ಮ ನೆಮ್ಮದಿಗೆ, ಆರೋಗ್ಯಕ್ಕೆ, ಉಳಿದವರ ನೆಮ್ಮದಿ, ಆರೋಗ್ಯಕ್ಕಾಗಿ ಕುರಾನ್‌ ಮಂತ್ರ ಪಠಣಗಳನ್ನು ಮಾಡುತ್ತೇನೆ.

ಸಂಜೆ 6.30ರ ಪ್ರಾರ್ಥನೆ ಮಗ್‌ರಿಬ್‌ ಮುಗಿದ ಮೇಲೆ ಉಪವಾಸ ಬಿಡುವ ಹೊತ್ತು ಮಸೀದಿಗಳಿಂದ ಘೋಷಣೆ ಆಗುತ್ತದೆ. ನಾವು ಉಪವಾಸ ಬಿಡುತ್ತಿರುವುದನ್ನು ದೇವರಿಗೆ ಅರಿಕೆ ಮಾಡಿಕೊಳ್ಳುತ್ತೇವೆ. ಅದು ಹೀಗೆ ಇರುತ್ತದೆ.. ‘ಓ ದೇವರೇ ಈ ದಿನದ ಉಪವಾಸವನ್ನು ನೀನೇ ಕೊಟ್ಟಿರುವ ಈ ಪದಾರ್ಥಗಳನ್ನು ಸ್ವೀಕರಿಸುವ ಮೂಲಕ ಮುಗಿಸುತ್ತಿದ್ದೇನೆ. ನನ್ನ ಈ ಪ್ರಕ್ರಿಯೆಯನ್ನು ನೀನು ಸ್ವೀಕರಿಸು. ನಿನ್ನ ಕೃಪೆ ನಮ್ಮೆಲ್ಲರ ಮೇಲೆ ಇರಲಿ’ ಎಂದು ಹೇಳಿದ ಮೇಲೆ ಉಪವಾಸ ಕೈಬಿಡುತ್ತೇನೆ. ಸಂಜೆ ಲಘು ಆಹಾರ ಸೇವಿಸಿದ ನಂತರ ಮತ್ತೊಮ್ಮೆ ಪ್ರಾರ್ಥನೆ ಮಾಡಿದ ಮೇಲೆ ಅವತ್ತು ರಾತ್ರಿಗೆ ಬಿರಿಯಾನಿ, ಚಪಾತಿ, ಮುದ್ದೆ, ಮೊಸರುಬುತ್ತಿ, ಆಶ್‌, ಮಟನ್‌, ಚಿಕನ್‌ ಊಟ ಇವುಗಳಲ್ಲಿ ಯಾವುದಾದರೂ ಒಂದು ಅಥವಾ ಬೇರೆ ಏನು ತಯಾರಿಸಿರುತ್ತೇನೋ ಅದನ್ನು ಎಲ್ಲರಿಗೂ ಬಡಿಸುತ್ತೇನೆ. ರಾತ್ರಿ 8.30ಕ್ಕೆ ‘ಇಶಾ’ ಪ್ರಾರ್ಥನೆ ಮುಗಿಯುತ್ತದೆ. ಇದಾದ ಬಳಿಕ ಮಸೀದಿಗೆ ‘ತರವಿ’ ಪ್ರಾರ್ಥನೆಗೆ ಹೋದ ಗಂಡಸರು ರಾತ್ರಿ 10 ಗಂಟೆ ಹೊತ್ತಿಗೆ ಮರಳುತ್ತಾರೆ. ರಾತ್ರಿ 10.30ರ ಹೊತ್ತಿಗೆ ಎಲ್ಲರೂ ಮಲಗುತ್ತಾರೆ. ನಾನೂ ಮಲಗುತ್ತೇನೆ.

‘ಆಶ್‌’ ಎಂಬ ವಿಶೇಷ ಆಹಾರ

ರಂಜಾನ್‌ ತಿಂಗಳಲ್ಲಿ ‘ಆಶ್‌’ಎಂಬ ವಿಶೇಷ ಆಹಾರವನ್ನು ತಯಾರಿಸಲಾಗುತ್ತದೆ. ಇದು ಪ್ರತಿದಿನ ಇರುವುದಿಲ್ಲ. ವಾರಕ್ಕೊಮ್ಮೆ ಮಾಡುತ್ತಾರೆ. ಗೋಧಿಗೆ ಚಿಕನ್ ಅಥವಾ ಮಟನ್‌ ಸೇರಿಸಿ ಉಳಿದ ಮಸಾಲೆಗಳನ್ನು ಹಾಕಿ ಬೇಯಲು ಇಡಲಾಗುತ್ತದೆ. ಹದವಾದ ಉರಿಯಲ್ಲಿ ಸುಮಾರು 4 ಗಂಟೆಗಳ ಕಾಲ ಒಲೆಯಲ್ಲಿ ಬೇಯುತ್ತದೆ. ಅದು ಸರಿಯಾಗಿ ಬೆಂದು ಗಂಜಿ ತರಹ ಆಗುತ್ತದೆ. ಉಪವಾಸ ಬಿಟ್ಟ ಮೇಲೆ ಹೆಚ್ಚು ತಿನ್ನಲು ಆಗುವುದಿಲ್ಲ. ಆದರೆ ‘ಆಶ್‌’ ಇದ್ದರೆ ಉಳಿದವುಗಳಿಗಿಂತ ಹೆಚ್ಚು ತಿನ್ನಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಖಲೀಲ್‌ ಉಲ್ಲಾ.

‘ಪತ್ನಿಯಿಂದಾಗಿ ನನಗೆ ನೆಮ್ಮದಿ’

‘ಮನೆಗೆ ಆಹಾರ ಸಾಮಗ್ರಿ, ಹಣ್ಣು ಹಂಪಲು ಮುಂತಾದವುಗಳನ್ನು ತಂದು ಹಾಕುವುದು ದೊಡ್ಡ ಕೆಲಸವಲ್ಲ. ಯಾರಿಗೂ ಕೊರತೆಯಾಗದಂತೆ, ನೋವಾಗದಂತೆ ನಿರ್ವಹಿಸುವುದು ಸವಾಲು. ಮುಂಜಾನೆ 3ರಿಂದ ರಾತ್ರಿ 10.30ರ ವರೆಗೆ ಮನೆಯನ್ನು ಅವಳೊಬ್ಬಳೇ ನಿರ್ವಹಿಸುತ್ತಾಳೆ. ಹಾಗಾಗಿ ನನಗೆ ನೆಮ್ಮದಿ’ ಎಂದು ಖಾಲಿದ ಖಾತೂನ್‌ ಅವರ ಬಗ್ಗೆ ಪತಿ ಖಲೀಲ್‌ ಉಲ್ಲಾ ಮೆಚ್ಚುಗೆಯ ನುಡಿಗಳನ್ನು ಆಡಿದರು.

ಖಲೀಲ್‌ ಉಲ್ಲಾ

ಮಕ್ಕಳು, ಸಂಬಂಧಿಕರು, ಸ್ನೇಹಿತರು ಹೀಗೆ ಇಫ್ತಾರ್‌ಗೆ ಯಾರಾದರೂ ಇರುತ್ತಾರೆ. ಯಾರಿದ್ದರೂ ಅಡುಗೆಯನ್ನು ಖಲೀದಾ ಒಬ್ಬಳೇ ಮಾಡುತ್ತಾಳೆ ಎಂದ ಅವರು, ‘ನಮ್ಮ ಮನೆಯಷ್ಟೇ ಅಲ್ಲ, ಎಲ್ಲಾ ಕಡೆ ಮಹಿಳೆಯರು ಚೆನ್ನಾಗಿ ನಿರ್ವಹಣೆ ಮಾಡುವ ಮನೆಗಳು ಇವೆ. ಅಲ್ಲಿ ನೆಮ್ಮದಿ ಇರುತ್ತದೆ. ನಾವು ಗಂಡಸರು ಮಾಡುವ ಕೆಲಸಗಳು ಎಲ್ಲರಿಗೂ ಗೊತ್ತಾಗುವ ರೀತಿಯಲ್ಲಿ ಇರುತ್ತದೆ. ಮಹಿಳೆಯರು ದಿನಪೂರ್ತಿ ಕೆಲಸ ಮಾಡಿದರೂ ಗೊತ್ತಾಗುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.