ADVERTISEMENT

ಬೀದಿಬದಿ ವ್ಯಾಪಾರಿಗಳಿಗೆ ಸ್ಥಳ ನಿಗದಿ ಮಾಡಿ

ಹೊನ್ನಾಳಿ ಪುರಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 4:35 IST
Last Updated 12 ಜುಲೈ 2025, 4:35 IST
ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು
ಹೊನ್ನಾಳಿ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು   

ಹೊನ್ನಾಳಿ: ಪಟ್ಟಣದ ಅಗಳ ಮೈದಾನದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಸೌಲಭ್ಯಗಳೊಂದಿಗೆ ಸ್ಥಳಾವಕಾಶ ಮಾಡಿಕೊಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ಸೂಚಿಸಿದರು.

ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ‘ಪಟ್ಟಣದ ಟಿ.ಎಂ. ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಏಕಮುಖ ನಿಲ್ದಾಣಕ್ಕೆ ವ್ಯವಸ್ಥೆ ಮಾಡಿದ್ದರಿಂದ ಬೀದಿಬದಿ ವ್ಯಾಪಾರಸ್ಥರು ಒಂದು ಕಡೆ ಕುಳಿತು ವ್ಯಾಪಾರ ಮಾಡಲು ಆಗುತ್ತಿಲ್ಲ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ನಿಗದಿ ಮಾಡಿಕೊಟ್ಟರೆ ಅವರು ತಮ್ಮ ದೈನಂದಿನ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗುತ್ತಾರೆ ಎಂದರು. ಪಟ್ಟಣದ ಅಗಳ ಮೈದಾನ ಖಾಲಿ ಇದ್ದು ಅಲ್ಲಿ ಅವರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು’ ಎಂದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

2019-20ನೇ ಸಾಲಿನಿಂದ 2023-24 ಸಾಲಿನವರೆಗೆ ಶೇ 24.10, ಶೇ 7.25  ಮತ್ತು ಶೇ 5ರ ಯೋಜನೆಯಡಿಯಲ್ಲಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ಫಲಾನುಭವಿಗಳ ಅಂತಿಮ ಪಟ್ಟಿಯನ್ನು ತಯಾರಿಸುವಂತೆ ಸೂಚಿಸಿದರು. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಾಗ, ಸದಸ್ಯರು ತಮ್ಮ ವಾರ್ಡಿನಲ್ಲಿರುವ ಎಸ್‌.ಸಿ ಹಾಗೂ ಎಸ್‌.ಟಿ. ನೈಜ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿ ಸವಲತ್ತುಗಳನ್ನು ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳುವುದಕ್ಕೆ ಸಭೆ ಒಪ್ಪಿಗೆ ನೀಡಿತು.

ADVERTISEMENT

ಕೇಂದ್ರ ಸರ್ಕಾರ ನಿವೇಶನ ರಹಿತರಿಗೆ ನಿವೇಶನ ಕೊಡುವ ಬಗ್ಗೆ ಹಾಗೂ ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಅನುದಾನ ನೀಡುವ ಬಗ್ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 15 ಕೊನೆ ದಿನ ಎಂದು ನಿಗದಿಪಡಿಸಿದ್ದು, ಸಮಯಾವಕಾಶ ತೀರ ಕಡಿಮೆ ಇರುವುದರಿಂದ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ರಾಜಸ್ವ ನಿರೀಕ್ಷಕರು ಶನಿವಾರ ಹಾಗೂ ಭಾನುವಾರ ರಜೆ ಹಾಕದೇ ಅರ್ಜಿ ಹಾಕುವವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮಾಡಿ ಕೊಡಬೇಕು. ಈ ಬಗ್ಗೆ ಸಭೆಯಲ್ಲಿ ಪ್ರಭಾರ ತಹಶೀಲ್ದಾರ್ ಸುರೇಶ್‍ ನಾಯ್ಕ ಸೂಚನೆ ನೀಡಬೇಕು ಎಂದು ಹೇಳಿದರು.

‘2025-26ನೇ ಸಾಲಿಗೆ ಕರೆಯಲಾಗಿದ್ದ ವಿವಿಧ ಬಾಬ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಕೆಲ ಬಿಡ್‍ದಾರರು ಕೇವಲ ಶೇ 25ರಷ್ಟು ಮಾತ್ರ ಮುಂಗಡ ಹಣ ಪಾವತಿಸಿದ್ದು, ಉಳಿದ ಬಾಕಿ ಮೊತ್ತವನ್ನು ಪಾವತಿಸದೇ ಉಳಿಸಿಕೊಂಡಿದ್ದಾರೆ. ಮೂರು ನೋಟಿಸ್ ಜಾರಿ ನೀಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ಅಧ್ಯಕ್ಷ ಎ.ಕೆ.ಮೈಲಪ್ಪ ಅವರು ಅಧಿಕಾರಿಗಳು, ಶಾಸಕರ ಗಮನಸೆಳೆದರು.

ಅದಕ್ಕೆ ಶಾಸಕರು ಜುಲೈ 31ರವರೆಗೆ ಬಾಕಿ ಹಣ ಕಟ್ಟಲು ಸಮಯಾವಕಾಶ ನೀಡುವಂತೆ ಸೂಚನೆ ನೀಡಿದರು. ಆಗಲೂ ಬಾಕಿ ಹಣ ನೀಡದೇ ಇದ್ದರೆ ಹಳೆಯ ಹರಾಜು ಪ್ರಕ್ರಿಯೆಯನ್ನು ವಜಾಗೊಳಿಸಿ ಹೊಸದಾಗಿ ಹರಾಜು ಪ್ರಕ್ರಿಯೆ ನಡೆಸುವಂತೆ ಸೂಚಿಸಿದರು. 

ಸಭೆಯಲ್ಲಿ ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಕೆ.ವಿ.ಶ್ರೀಧರ್, ರಂಗನಾಥ್, ಧರ್ಮಪ್ಪ, ಸುಮಾ ಮಂಜುನಾಥ್, ರಂಜಿತಾ ಚನ್ನಪ್ಪ, ಸುಮಾ ಸತೀಶ್, ರಾಜೇಂದ್ರಕುಮಾರ್, ಸವಿತಾ ಮಹೇಶ್, ಎಂ. ಸುರೇಶ್, ಅನುಚಂದ್ರು, ರಾಜಪ್ಪ ಬಾವಿಮನೆ, ತನ್ವೀರ್ ಆಹ್ಮದ್, ಹಾಗೂ ನಾಮನಿರ್ದೇಶಿತ ಸದಸ್ಯರು, ಮುಖ್ಯಾಧಿಕಾರಿ ಟಿ. ಲೀಲಾವತಿ ಉಪಸ್ಥಿತರಿದ್ದರು.

- ಅಭಿವೃದ್ಧಿಗೆ ಸದಸ್ಯರ ಸಹಕಾರವಿಲ್ಲ: ಬೇಸರ

ನಾನು ಶಾಸಕನಾಗಿ ಎರಡು ವರ್ಷ ಕಳೆದರೂ ಪುರಸಭೆಯ ಸದಸ್ಯರ ಮನೋಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ನಾನು ಪ್ರತಿ ಸಭೆಗೆ ನಿಮಗಿಂತ ಮುಂಚಿತವಾಗಿ ಬಂದು ಕಾಯುವುದೇ ಆಗಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಶಾಸಕ  ಶಾಂತನಗೌಡ ಬೇಸರ ವ್ಯಕ್ತಪಡಿಸಿದರು. ‘ನಾನು ಕಂಡಂತೆ ಪುರಸಭೆ ಸದಸ್ಯರು ಹಾಗೂ ಮುಖ್ಯಾಧಿಕಾರಿಗಳ ನಡುವೆ ಸಮನ್ವಯತೆ ಇಲ್ಲ. ಇದರಿಂದ ಗಂಡ– ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು ಎನ್ನುವ ಪರಿಸ್ಥಿತಿ ನನ್ನದಾಗಿದೆ. ನಾನು ಪಟ್ಟಣದ ಅಭಿವೃದ್ಧಿಗೆ ಕೆಲಸ ಮಾಡಲು ಕಾತುರನಾಗಿದ್ದೇನೆ. ಆದರೆ ನನಗೆ ಪುರಸಭೆ ಸದಸ್ಯರಿಂದ ಸಹಕಾರ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.