ADVERTISEMENT

ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ

ವಾಲ್ಮೀಕಿ ಸಮುದಾಯದವರಿಂದ ಅಹೋರಾತ್ರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2024, 6:34 IST
Last Updated 10 ಜನವರಿ 2024, 6:34 IST
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದ ಮದಕರಿ ನಾಯಕ ವೃತ್ತದ ಬಳಿ ಪ್ರತಿಭಟನಕಾರರನ್ನು ಮನವೊಲಿಸುತ್ತಿರುವ ಅಧಿಕಾರಿಗಳು
ಕಡರನಾಯ್ಕನಹಳ್ಳಿ ಸಮೀಪದ ಭಾನುವಳ್ಳಿ ಗ್ರಾಮದ ಮದಕರಿ ನಾಯಕ ವೃತ್ತದ ಬಳಿ ಪ್ರತಿಭಟನಕಾರರನ್ನು ಮನವೊಲಿಸುತ್ತಿರುವ ಅಧಿಕಾರಿಗಳು   

ಕಡರನಾಯ್ಕನಹಳ್ಳಿ: ಭಾನುವಳ್ಳಿ ಗ್ರಾಮದ ಮದಕರಿ ನಾಯಕ ವೃತ್ತದ ಸಮೀಪ ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಂಡಿದ್ದು, ಮಂಗಳವಾರ ಇಡೀ ದಿನ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವಿಷಯ ತಿಳಿದ ಗ್ರಾಮದ ನಾಯಕ ಸಮಾಜದವರು ಮದಕರಿ ವೃತ್ತದಲ್ಲಿ ಜಮಾಯಿಸಿ ಧರಣಿ ಕುಳಿತರು. ಇದರಿಂದ ಸಂಚಾರ ಮಧ್ಯಾಹ್ನ 3ಗಂಟೆ ವರೆಗೆ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು. ಹೆಚ್ಚುವರಿ ಎಸ್‌ಪಿ ವಿಜಯಕುಮಾರ್ ಸಂತೋಷ್, ಗ್ರಾಮೀಣ ಡಿವೈಎಸ್‌ಪಿ ಬಸವರಾಜ್ ನಾಯ್ಕ, ಹರಿಹರ ಪೊಲೀಸ್‌ ಇನ್‌ಸ್ಪೆಕ್ಟರ್ ದೇವಾನಂದ್, ಮಲೆಬೆನ್ನೂರು ಪಿಎಸ್‌ಐ ಪ್ರಭು ಡಿ. ಮತ್ತು ಕಂದಾಯ ಇಲಾಖೆಯ ಗ್ರೇಡ್ 2 ತಹಶೀಲ್ದಾರ್ ಶಶಿಧರಯ್ಯ, ಉಪವಿಭಾಗಾಧಿಕಾರಿ ದುರ್ಗಾ ಶ್ರೀ, ಕಂದಾಯ ನಿರೀಕ್ಷಕ ಎಚ್.ಎಲ್.ಆನಂದ್, ತಾಲ್ಲೂಕು ಪಂಚಾಯಿತಿ ಇ.ಒ. ರವಿ. ಪ್ರತಿಭಟನಕಾರರ ಜೊತೆ ಮಾತುಕತೆ ನಡೆಸಿ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾದರು.

ಕುರುಬ ಸಮುದಾಯ ಮತ್ತು ನಾಯಕ ಸಮಾಜದವರ ನಡುವೆ ಸಂಧಾನ ಸಭೆ ನಡೆದರೂ, ಫಲಪ್ರದವಾಗಲಿಲ್ಲ. ರಸ್ತೆಯಲ್ಲಿ ಧರಣಿ ಕೂಡುವ ಬದಲಾಗಿ ರಸ್ತೆಯ ಪಕ್ಕದಲ್ಲಿ ಶಾಮಿಯಾನ ಹಾಕಿಕೊಂಡು ಅಹೋರಾತ್ರಿ ಧರಣಿ ಮಾಡುವುದಾಗಿ ಪ್ರತಿಭಟನಕಾರರು ತಿಳಿಸಿದರು.

ADVERTISEMENT

ಪೊಲೀಸರು ವೃತ್ತದಲ್ಲಿ ಕಟ್ಟಿದ್ದ ಸಂಗೊಳ್ಳಿ ರಾಯಣ್ಣ ಹೆಸರಿನ ಧ್ವಜಗಳನ್ನು ಮತ್ತು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದರು. ತಾಲ್ಲೂಕಿನ ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡದಿರುವ ಬೇಸರವನ್ನು ಪ್ರತಿಭಟನಕಾರರು ವ್ಯಕ್ತಪಡಿಸಿದರು.

ರಾತ್ರೋರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಮಾಡಲಾಗಿದೆ. ಇದರ ಬಗ್ಗೆ ಮೊದಲೇ ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ 3 ತಿಂಗಳ ಹಿಂದೆಯೇ ಮನವಿ ನೀಡಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡ, ಗ್ರಾಮ ಪಂಚಾಯಿತಿ ಸದಸ್ಯ ಟಿ.ಧನ್ಯಕುಮಾರ್ ಒತ್ತಾಯಿಸಿದರು.

ಪರಿಶಿಷ್ಟರ ಮೇಲೆ ದೌರ್ಜನ್ಯ ಸಹಿಸಲಾಗದು. ಈ ಕೂಡಲೇ ಅಧಿಕಾರಿಗಳು ಪೋಲಿಸ್ ಇಲಾಖೆ ಪ್ರತಿಮೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು.
– ಕೆ.ಆರ್.ರಂಗಪ್ಪ, ನಾಯಕ ಸಮಾಜದ ಅಧ್ಯಕ್ಷ ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.