ADVERTISEMENT

ಸಂಕ್ರಾಂತಿಯ ಸಡಗರ ಹೆಚ್ಚಿಸಿದ ಹರಜಾತ್ರೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2023, 5:15 IST
Last Updated 15 ಜನವರಿ 2023, 5:15 IST
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರದಿಂದ ಆರಂಭವಾದ ಹರಜಾತ್ರೆ ಹಿನ್ನೆಲೆಯಲ್ಲಿ ನಡೆದ ಪೂರ್ಣಕುಂಭ ಮೆರವಣಿಗೆ ಜನಮನ ಸೆಳೆಯಿತು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರದಿಂದ ಆರಂಭವಾದ ಹರಜಾತ್ರೆ ಹಿನ್ನೆಲೆಯಲ್ಲಿ ನಡೆದ ಪೂರ್ಣಕುಂಭ ಮೆರವಣಿಗೆ ಜನಮನ ಸೆಳೆಯಿತು.   

ಹರಿಹರ: ಸೂರ್ಯ ತನ್ನ ಪಥವನ್ನು ಉತ್ತರಕ್ಕೆ ಬದಲಿಸುವ ಸಂಕ್ರಾಂತಿಯ ಸಂದರ್ಭದಲ್ಲಿ ಇಲ್ಲಿನ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದಲ್ಲಿ ಶನಿವಾರದಿಂದ ಆರಂಭವಾದ ಹರಜಾತ್ರೆ ವಿಶೇಷ ಅನುಭಾವವನ್ನು ನೀಡಿತು. ಬೆಳಿಗ್ಗೆ 9ಕ್ಕೆ ಗುರುಪೀಠದಿಂದ 1 ಕಿ.ಮೀ. ದೂರದಲ್ಲಿರುವ ಬೈಪಾಸ್ ವೃತ್ತದಿಂದ ನೂರಾರು ಮಹಿಳೆಯರು ತಲೆ ಮೇಲೆ ಪೂರ್ಣಕುಂಭ, ರೊಟ್ಟಿ, ಬುತ್ತಿ ಹೊತ್ತು ನಡೆಸಿದ ಮೆರವಣಿಗೆ ಹೆದ್ದಾರಿಯ ಸೊಬಗನ್ನು ವೃದ್ಧಿಸಿತ್ತು.

ಮೆರವಣಿಗೆಯಲ್ಲಿ ವಚನಾನಂದ ಸ್ವಾಮೀಜಿ, ಸಮುದಾಯದ ಮುಖಂಡರಾದ ಜಿ.ಪಿ. ಪಾಟೀಲ್, ಬಿ.ಸಿ. ಉಮಾಪತಿ, ಬಾವಿ ಬೆಟ್ಟಪ್ಪ, ಬಸವರಾಜ ದಿಂಡೂರು, ಪ್ರಕಾಶ್ ಪಾಟೀಲ್, ಚಂದ್ರಶೇಖರ್ ಪೂಜಾರ್ ಸಾಗಿದರು.

ದಾಸೋಹ: ಪೀಠದ ಆವರಣದಲ್ಲಿ ಬೆಳಿಗ್ಗೆ 8ರಿಂದ ಅನ್ನ ದಾಸೋಹ ಆರಂಭವಾಯಿತು. ಬೆಳಿಗ್ಗೆ ಉಪ್ಪಿಟ್ಟು, ಕೇಸರಿಬಾತ್, ಮಧ್ಯಾಹ್ನಕ್ಕೆ ಸಂಕ್ರಾಂತಿ ಸ್ಪೆಷಲ್ ಖಡಕ್ ರೊಟ್ಟಿ, ಕಾಳುಪಲ್ಯ, ಗೋಧಿ ಪಾಯಸ, ಅನ್ನ, ಸಾಂಬಾರ್ ವಿತರಿಸಲಾಯಿತು.

ADVERTISEMENT

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಗದಗ, ಹಾವೇರಿ, ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿ ನಾಡಿನ ವಿವಿಧೆಡೆಯಿಂದ ಭಕ್ತರು ಬಂದಿದ್ದರು. ಸಂಜೆ ನಾಡಿನ ವಿವಿಧ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ರತ್ನ ಕಾರ್ಯಕ್ರಮದ ಮುನ್ನ ನಗರದ ರಾಘವೇಂದ್ರ ಮಠದ ಸಮೀಪದ ತುಂಗಭದ್ರ ನದಿ ದಡದಲ್ಲಿ ನಿರ್ಮಾಣ ಹಂತದಲ್ಲಿರುವ ತುಂಗಭದ್ರಾರತಿ ಕಾಮಗಾರಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.