ADVERTISEMENT

ದಾವಣಗೆರೆ| ಶಾಲಾ ಅಂಗಳದಲ್ಲಿ ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:00 IST
Last Updated 14 ಜನವರಿ 2026, 7:00 IST
ದಾವಣಗೆರೆಯ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಅಂಗವಾಗಿ ರಾಶಿ ಪೂಜೆ ನೆರವೇರಿಸಲಾಯಿತು
ದಾವಣಗೆರೆಯ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಅಂಗವಾಗಿ ರಾಶಿ ಪೂಜೆ ನೆರವೇರಿಸಲಾಯಿತು   

ದಾವಣಗೆರೆ: ಅಂಗಳದಲ್ಲಿ ರಾಶಿ ಹಾಕಿದ್ದ ರಾಗಿ, ಭತ್ತ ಪೂಜೆಗೆ ಸಿದ್ಧವಾಗಿದ್ದವು. ಸೀರೆ, ಪಂಚೆಯುಟ್ಟು ಗ್ರಾಮೀಣ ಸೊಗಡಿನಲ್ಲಿ ಕಂಗೊಳಿಸುತ್ತಿದ್ದ ವಿದ್ಯಾರ್ಥಿಗಳು ಭತ್ತ ಕುಟ್ಟುತ್ತಿದ್ದರು. ರಾಗಿ ಬೀಸಿ ಮುದ್ದೆಗೆ ಹಿಟ್ಟು ಸಿದ್ಧಪಡಿಸುವಲ್ಲಿ ತಲ್ಲೀನರಾಗಿದ್ದರು. ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದರು..

ಇಂತಹದೊಂದು ಅಪರೂಪದ ದೃಶ್ಯ ನಗರದ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಕಂಡುಬಂದಿತು. ಅಪ್ಪಟ ಹಳ್ಳಿ ಪರಿಸರದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗೋ ಪೂಜೆಗೆ ಮಲೆನಾಡು ಗಿಡ್ಡ ತಳಿಯ ಹಸುಗಳು ಸಾಕ್ಷಿಯಾದವು.

ಸಂಕ್ರಾಂತಿಯ ಅಂಗವಾಗಿ ಶಾಲೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ರಂಗೋಲಿ ಬಿಡಿಸಿ ಚಿತ್ತಾರ ಮೂಡಿಸಲಾಗಿತ್ತು. ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನ ಗರಿಗಳು ಹಬ್ಬವನ್ನು ಕಳೆಗಟ್ಟುವಂತೆ ಮಾಡಿದ್ದವು. ಗೋ ಪೂಜೆ, ಆಹಾರ ತಯಾರಿಕೆ, ರಾಶಿ ಪೂಜೆಯಂತಹ ಸುಗ್ಗಿ ಹಬ್ಬಗಳು ಸಡಗರವನ್ನು ಹೆಚ್ಚಿಸಿದವು.

ADVERTISEMENT

ಸಾಂಪ್ರದಾಯಿಕ ಉಡುಪು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು ಲಗುಬಗೆಯಿಂದ ಓಡಾಡುತ್ತಿದ್ದರು. ಬಳಿ ಪಂಚೆ, ಬಿಳಿ ಜುಬ್ಬಾ ಧರಿಸಿ ಪರಂಪರೆಯ ಹಿರಿಮೆಯನ್ನು ಸಾರಿದರು. ನೇಗಿಲ ನೊಗಕ್ಕೆ ಎತ್ತುಗಳು ಹೂಡಿ ಉಳಿಮೆ ಮಾಡಿದ ಪರಿ ಮೆಚ್ಚುವಂತಿತ್ತು. ಗುಡಿಸಲು, ಎತ್ತಿನ ಗಾಡಿ ಆಕರ್ಷಕವಾಗಿದ್ದವು.

ಶಾಲೆಯ ಪ್ರವೇಶ ದ್ವಾರದ ಬಳಿ ಗೋ ಪೂಜೆ ನೆರವೇರಿಸುವ ಮೂಲಕ ಸಂಕ್ರಾಂತಿಯ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಮೆಕ್ಕೇಜೋಳ, ಭತ್ತ, ಕಡೆಲೆಕಾಳು, ಹೆಸರು ಕಾಳು, ಗೋಧಿ, ಬೆಲ್ಲ, ಅಡಿಕೆ, ಸಬ್ಬಕ್ಕಿ, ಸಿರಿಧಾನ್ಯ, ಕೆಂಪಕ್ಕಿ ಸೇರಿ ಹಲವು ಧಾನ್ಯಗಳ ರಾಶಿಗೆ ನಮಿಸಲಾಯಿತು.

ಹಸುಗಳಿಗೆ ಅಕ್ಕಿ, ಬೆಲ್ಲ ಮತ್ತು ಬಾಳೆಹಣ್ಣು ತಿನ್ನಿಸಲಾಯಿತು. ಪಂಚಾಯಿತಿ ಕಟ್ಟೆ, ನೇಗಿಲಯೋಗಿ, ಬಳೆಗಾರ ವೇಷಧಾರಿಗಳು ಕಣ್ಮನ ಸೆಳೆದರು. ಪೂಜೆಯ ನಂತರ ಎಲ್ಲರಿಗೂ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು. ಮಕ್ಕಳು ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ದಾವಣಗೆರೆಯ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಸಂಭ್ರಮದಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು
ದಾವಣಗೆರೆಯ ಬನಶಂಕರಿ ಶಾಮನೂರು ಬಡಾವಣೆಯ ಮಯೂರ್ ಗ್ಲೋಬಲ್ ಶಾಲೆಯಲ್ಲಿ ಮಂಗಳವಾರ ಸಂಕ್ರಾಂತಿ ಸಂಭ್ರಮದಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು
ಗ್ರಾಮೀಣ ಆಚರಣೆಗಳು ಆಧುನಿಕತೆಯ ಭರಾಟೆಯಲ್ಲಿ ಕಣ್ಮರೆಯಾಗುತ್ತಿವೆ. ಇವುಗಳನ್ನು ಮುಂದಿನ ತಲೆಮಾರಿಗೆ ದಾಟಿಸಬೇಕು. ಇದಕ್ಕೆ ಸಂಕ್ರಾಂತಿಯನ್ನು ಶಾಲಾ ಆವರಣದಲ್ಲಿ ಆಚರಿಸಲಾಗಿದೆ
ಬಿ.ಎನ್. ಮಲ್ಲೇಶ್ ಆಡಳಿತಾಧಿಕಾರಿ ಮಯೂರ್ ಗ್ಲೋಬಲ್ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.