ADVERTISEMENT

ಪಾಂಡೋಮಟ್ಟಿ | ವಚನ ಸಾಹಿತ್ಯದ ಕೊಡುಗೆ ಅಪಾರ: ಸಚಿವ ಸತೀಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 3:19 IST
Last Updated 19 ಜನವರಿ 2026, 3:19 IST
ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ನಡೆದ ಬಸವತತ್ವ ಸಮ್ಮೇಳನವನ್ನು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು
ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಭಾನುವಾರ ನಡೆದ ಬಸವತತ್ವ ಸಮ್ಮೇಳನವನ್ನು ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸ್ಪೀಕರ್ ಯು.ಟಿ. ಖಾದರ್ ಉದ್ಘಾಟಿಸಿದರು   

ಪಾಂಡೋಮಟ್ಟಿ(ಚನ್ನಗಿರಿ): ‘ಜನಪರ ಕಾಳಜಿಯನ್ನು ಹೊಂದಿರುವ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠ ಪ್ರತಿ ವರ್ಷ ಬಸವತತ್ವ ಸಮ್ಮೇಳನ ನಡೆಸಿಕೊಂಡು ಬಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಸ್ವಾಗತಾರ್ಹ’ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ತಾಲ್ಲೂಕಿನ ಪಾಂಡೋಮಟ್ಟಿ ಗ್ರಾಮದ ವಿರಕ್ತ ಮಠದಲ್ಲಿ ಸಂಗಮನಾಥ ಸ್ವಾಮೀಜಿ 64ನೇ ಹಾಗೂ ಚನ್ನಬಸವ ಸ್ವಾಮೀಜಿಗಳ 19ನೇ ವರ್ಷದ ಸ್ಮರಣೋತ್ಸವದ ಅಂಗವಾಗಿ ಭಾನುವಾರ ನಡೆದ ಬಸವತತ್ವ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಬಸವಣ್ಣ ಅವರು ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದರು. ಈ ನಾಡಿಗೆ ವಚನ ಸಾಹಿತ್ಯದ ಕೊಡುಗೆ ಅಪಾರವಾದದ್ಧು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ತ್ಯಾಗ, ಬಲಿದಾನ ಮಾಡಿದ ಮಹಾನ್ ವ್ಯಕ್ತಿಗಳ ಬಗ್ಗೆ ನೆನಪಿಸಿಕೊಳ್ಳಬಹುದು. ಈ ಭೂಮಿ ಇರುವವರೆಗೂ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಪ್ರಸ್ತುತ. ಸಂವಿಧಾನ ಇಲ್ಲದೇ ಯಾವ ಕಾರ್ಯವೂ ಆಗುವುದಿಲ್ಲ ಎಂದು ತಿಳಿಸಿದರು.

ADVERTISEMENT

ಈ ವೇಳೆ ಸಾಮಾಜಿಕ ಕಾರ್ಯಕರ್ತ ನಾಡೋಜ ವುಡೇ ಪಿ. ಕೃಷ್ಣ ಅವರಿಗೆ 2026ನೇ ವಿಶ್ವಗುರು ಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗುಳೇದಗುಡ್ಡದ ಗುರುಬಸವ ಪಟ್ಟಾದಾರ್ಯ ಸ್ವಾಮೀಜಿ, ಮಹಾರಾಷ್ಟ್ರ ಬೀಳೂರು ವಿರಕ್ತ ಮಠದ ರಾಜಯೋಗಿ ಗುರುಬಸವ ಸ್ವಾಮೀಜಿ, ಉತ್ತಂಗಿ ಸೋಮಶಂಕರ ಸ್ವಾಮೀಜಿ, ಸಿದ್ಧಯ್ಯನ ಕೋಟೆ ಬಸವಲಿಂಗ ಸ್ವಾಮೀಜಿ, ಮರೇಗುದ್ಧಿ ಗುರುಮಹಾಂತ ಸ್ವಾಮೀಜಿ, ತಿಪ್ಪಾಯಿಕೊಪ್ಪ ಮಹಾಂತ ಸ್ವಾಮೀಜಿ, ಬೆಟ್ಟದಹಳ್ಳಿ ಚಂದ್ರಶೇಖರ್ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಜೀವ ವೈವಿಧ್ಯಮಯ ನಿಗಮದ ಅಧ್ಯಕ್ಷ ವಡ್ನಾಳ್ ಜಗದೀಶ್, ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್, ರವಿ ಭೋಸರಾಜು, ಸಿ. ನಾಗರಾಜ್, ವೀರೇಶ್ ನಾಯ್ಕ ಉಪಸ್ಥಿತರಿದ್ದರು.

ಧಾರವಾಡದ ಹಿರಿಯ ಸಾಹಿತಿ ವೀರಣ್ಣ ರಾಜೂರು ಉಪನ್ಯಾಸ ನೀಡಿದರು. ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.

ಚನ್ನಗಿರಿ ತಾಲ್ಲೂಕು ಪಾಂಡೋಮಟ್ಟಿ ವಿರಕ್ತ ಮಠದಲ್ಲಿ ಭಾನುವಾರ ನಡೆದ ಬಸವತತ್ವ ಸಮ್ಮೇಳನದಲ್ಲಿ ನಾಡೋಜ ಡಾ. ವುಡೇ ಪಿ. ಕೃಷ್ಣ ಅವರಿಗೆ ವಿಶ್ವಗುರು ಬಸವ ಶ್ರೀಪ್ರಶಸ್ತಿ ನೀಡಿ ಗೌರವಿಸಲಾಯಿತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗುರುಬಸವ ಸ್ವಾಮೀಜಿ ಇದ್ದರು.
ಗುರುಗಳ ಮಾರ್ಗದರ್ಶನ ಅಗತ್ಯ
ಸಮಾಜಕ್ಕೆ ಪೂರಕವಾಗಿ ಜಾತಿ ಧರ್ಮಗಳನ್ನು ಬದಿಗಿಟ್ಟು ಕಾರ್ಯನಿರ್ವಹಿಸಬೇಕು. ಸಂವಿಧಾನದ ಅಡಿಯಲ್ಲಿ ನಾವೆಲ್ಲಾ ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಧರ್ಮ ಜಾತಿಯಲ್ಲಿ ಯಾವುದೇ ತಾರತಮ್ಯ ಮಾಡಲು ಹೋಗಬಾರದು. ಸಮಾಜಕ್ಕೆ ಗುರುಗಳ ಮಾರ್ಗದರ್ಶನ ಅಗತ್ಯವಾಗಿದ್ದು ಇಡೀ ಸಮಾಜಕ್ಕೆ ಗುರುಗಳು ದಿಕ್ಸೂಚಿಯಾಗಿರುತ್ತಾರೆ. ಸೋದರ ಸಮಾಜ ನಿರ್ಮಾಣ ಮಾಡುವ ಕಡೆಗೆ ನಾವೆಲ್ಲಾ ಹೆಜ್ಜೆ ಹಾಕೋಣ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.