
ಹೊನ್ನಾಳಿ: ‘ಶೈಕ್ಷಣಿಕ ಕ್ಷೇತ್ರದಲ್ಲಿ ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಬೇಕು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದೇಶಕ ಜಿ. ಕೊಟ್ರೇಶ್ ಹೇಳಿದರು.
ಪಟ್ಟಣದ ಟಿಬಿ ವೃತ್ತದ ಬಳಿ ಇರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
‘ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ, ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ, ಉಚಿತ ಪಠ್ಯಪುಸ್ತಕಗಳು ಸೇರಿದಂತೆ ಅನೇಕ ಸೌಲಭ್ಯಗಳಿವೆ’ ಎಂದರು.
ಮುಖ್ಯ ಶಿಕ್ಷಕರಿಗೆ ತರಾಟೆ:
ಶಾಲಾ ಪ್ರಾರಂಭೋತ್ಸವ ಎಂದು ತಿಳಿದಿದ್ದರೂ ಶಾಲಾ ಕಟ್ಟಡ, ಕೊಠಡಿಗಳಿಗೆ ತಳಿರು ತೋರಣ ಕಟ್ಟದೇ ಯಾವುದೇ ಅಲಂಕಾರ ಮಾಡದೇ ಇರುವುದನ್ನು ಕಂಡ ಉಪ ನಿರ್ದೇಶಕರು ಮುಖ್ಯ ಶಿಕ್ಷಕರ ವಿರುದ್ಧ ಕೆಂಡಾಮಂಡಲವಾದರು.
‘ಬೇಸಿಗೆ ರಜೆ ಕಳೆದು ಶಾಲೆಗಳು ಪುನರ್ ಆರಂಭಂಗೊಳ್ಳುವ ಈ ಹೊತ್ತಿನಲ್ಲೂ ಶಾಲೆಯನ್ನು ಮಕ್ಕಳ ಸ್ವಾಗತಕ್ಕೆ ಸಜ್ಜು ಮಾಡಿಲ್ಲ, ಗ್ರಾಮಾಂತರ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿ ಮಾವಿನ ಎಲೆ, ಬಾಳೆಕಂಬ ಹಾಗೂ ಹೂವುಗಳಿಂದ ಶೃಂಗರಿಸಿದ್ದಾರೆ. ಪಟ್ಟಣದಲ್ಲಿದ್ದುಕೊಂಡು ನೀವು ತಳಿರುತೋರಣ ಕಟ್ಟಿಲ್ಲ ಏಕೆ’ ಎಂದು ಪ್ರಶ್ನಿಸಿದರು.
ಬಿಇಒ ಕಚೇರಿ ಪಕ್ಕದ ಆವರಣದಲ್ಲಿಯೇ ಇರುವ ಈ ಶಾಲೆಗೆ ಈ ಸ್ಥಿತಿ ಉಂಟಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ದೀಪದ ಬುಡದಲ್ಲಿ ಕತ್ತಲು ಎನ್ನುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ನಿರ್ಲಕ್ಷ್ಯದ ಬಗ್ಗೆ ನೋಟಿಸ್ ನೀಡಿ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಬಿಇಒಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.