
ದಾವಣಗೆರೆ: ತ್ಯಾಜ್ಯವನ್ನು ದಹಿಸಿ ವಿದ್ಯುತ್ ಉತ್ಪಾದಿಸುವ ಘಟಕ, ಮನೆಯಲ್ಲೂ ಆಗಬಹುದಾದ ಮಾಲಿನ್ಯ ತಡೆಗೆ ರೂಪಿಸಿರುವ ವಿಧಾನ, ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿದ ಕೂಡಲೇ ಸಾಮಗ್ರಿಯನ್ನು ತಂದುಕೊಡುವ ರೊಬೊ, ಉತ್ಸಾಹದಿಂದ ತಮ್ಮ ಮಾದರಿಗಳನ್ನು ಆಸಕ್ತರಿಗೆ ವಿವರಿಸುತ್ತಿರುವ ವಿದ್ಯಾರ್ಥಿಗಳ ತಂಡ..
ಇಲ್ಲಿನ ಜಿಎಂ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸೈನ್ಸ್ ಪ್ರಾಜೆಕ್ಟ್ ಎಕ್ಸ್‌ಪೋದಲ್ಲಿ ಕಂಡ ದೃಶ್ಯಗಳಿವು. ಇಂತಹ ಹತ್ತಾರು ವೈವಿಧ್ಯಮಯ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಈ ಪೈಕಿ ಬಹುತೇಕ ಮಾದರಿಗಳು ಪರಿಸರ ಮಾಲಿನ್ಯ ತಡೆಗಟ್ಟುವ ಮಾರ್ಗೋಪಾಯಗಳ ಕೇಂದ್ರೀಕರಿಸಿ ತಯಾರಿಸಿದ್ದು ವಿಶೇಷ.
ಬಯೊಡಿಗ್ರೇಡಬಲ್ ಫೈಬರ್ ಮಲ್ಚಿಂಗ್ ಪ್ರಯೋಗವನ್ನು ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿ ವಿದ್ಯಾರ್ಥಿನಿಯರ ತಂಡ ಪ್ರಸ್ತುತಪಡಿಸಿತು. ಜಮೀನುಗಳಲ್ಲಿ ಕಳೆ ನಿಯಂತ್ರಣಕ್ಕೆ ಹೊದಿಸುವ ಪ್ಲಾಸ್ಟಿಕ್ ಹಾಳೆಯು, ಬೀಜೋತ್ಪಾದನೆಯ ವೇಗವನ್ನು ತಗ್ಗಿಸುವ ಜತೆಗೆ ಪ್ಲಾಸ್ಟಿಕ್ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಅದಕ್ಕೆ ಪರಿಹಾರವಾಗಿ, ಮಣ್ಣಿನಲ್ಲಿ ಸಹಜವಾಗಿ ಕೊಳೆಯುವ ಗುಣದ ಹಾಗೂ ಬೀಜೋತ್ಪಾದನೆಗೆ ಅಡ್ಡಿ ಮಾಡದ ಪರಿಸರ ಸ್ನೇಹಿ ‘ಬಯೊಡೀಗ್ರೇಡಬಲ್ ಫೈಬರ್ ಮಲ್ಚಿಂಗ್’ ವಿಧಾನವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಖಾನೆಗಳು ಉಗುಳುವ ರಾಸಾಯನಿಕಯುಕ್ತ ಹೊಗೆಯನ್ನು, ಅದು ಗಾಳಿಗೆ ಬಿಡುಗೆಯಾಗುವ ಮುನ್ನವೇ ಸಂಸ್ಕರಿಸಿ ಹೊರಬಿಡುವ ಮಾದರಿಯನ್ನು ಜಿಎಂಐಟಿಯ ವಿದ್ಯಾರ್ಥಿಗಳಾದ ಬಿ.ಆರ್. ಲೋಹಿತ್, ಶೇಖರಗೌಡ ಹಾಗೂ ವಿನಯ್ ತಂಡ ರೂಪಿಸಿತ್ತು. ಕಾರ್ಬನ್ ಆಧಾರಿತ ಗಾಳಿ ಶುದ್ಧೀಕರಿಸುವ ಈ ವ್ಯವಸ್ಥೆಯು, ವಾತಾವರಣಕ್ಕೆ ಶುದ್ಧ ಗಾಳಿಯನ್ನು ಬಿಡುಗಡೆ ಮಾಡಲಿದೆ. ಈ ಪ್ರಯೋಗವನ್ನು ಇನ್ನಷ್ಟು ಸುಧಾರಿಸಿದರೆ, ವಾಯುಮಾಲಿನ್ಯ ತಡೆಯುವಲ್ಲಿ ಮಹತ್ವದ ಹೆಜ್ಜೆ ಎಂಬುದು ವಿದ್ಯಾರ್ಥಿಗಳ ವಿಶ್ವಾಸ.
ತ್ಯಾಜ್ಯ ನಿರ್ವಹಣೆ ದೊಡ್ಡ ಸಮಸ್ಯೆಯಾಗಿರುವ ಈ ಹೊತ್ತಿನಲ್ಲಿ ಜಿಎಂಐಟಿ ವಿದ್ಯಾರ್ಥಿನಿಯರು ‘ವೇಸ್ಟ್ ಟು ವಾಟ್’ ಪರಿಕಲ್ಪನೆಯಡಿ ರಚಿಸಿರುವ ಮಾದರಿಯು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಿ, ಇಂಧನ ಸಮಸ್ಯೆಗೂ ಪರಿಹಾರ ನೀಡಿದೆ. ತ್ಯಾಜ್ಯವನ್ನು ಸುಟ್ಟಾಗ ಉಂಟಾಗುವ ಶಾಖದಿಂದ ವಿದ್ಯುತ್ ಉತ್ಪಾದಿಸಬಹುದು ಎಂಬುದು ಈ ಪ್ರಾತ್ಯಕ್ಷಿಕೆಯ ತಿರುಳು. ಆದರೆ ತಾಜ್ಯ ಉರಿದಾಗ ಬೂದಿಯ ಕಸ ಸಂಗ್ರಹವಾಗುತ್ತದೆ. ಇದಕ್ಕೂ ಪರಿಹಾರ ಹುಡುಕಲಾಗಿದೆ. ಬೂದಿಯಿಂದ ಇಂಕ್ ತಯಾರಿಸಿ, ತ್ಯಾಜ್ಯವೇ ಇಲ್ಲದಂತೆ ಮಾಡಬಹುದು ಎಂಬುದು ವಿದ್ಯಾರ್ಥಿಗಳ ಅಭಿಮತ.
ಜಗಳೂರಿನ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ತಯಾರಿಸಿದ್ದ ಚಂದ್ರಯಾನ ಮಾದರಿ, ಸಹ್ಯಾದ್ರಿ ಕಾಲೇಜಿನವರು ರೂಪಿಸಿದ್ದ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ, ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಕಾಲೇಜಿನ ವಿದ್ಯಾರ್ಥಿಗಳು ನಿರ್ಮಿಸಿದ್ದ ಪರಿಸರಸ್ನೇಹಿ ಮನೆ, ಕೊರೊನಾ ವೈರಸ್, ಋತುಚಕ್ರ, ಗಿಡಗಳಿಂದ ವಿದ್ಯುತ್ ತಯಾರಿಕೆ ಸೇರಿದಂತೆ ತರಹೇವಾರಿ ಪ್ರಾತ್ಯಕ್ಷಿಕೆಗಳು ಗಮನ ಸೆಳೆದವು. ಶಿವಮೊಗ್ಗ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಪದವಿ ಕಾಲೇಜು ವಿದ್ಯಾರ್ಥಿಗಳ 60 ತಂಡಗಳು ಭಾಗವಹಿಸಿ ತಮ್ಮ ವೈಜ್ಞಾನಿಕ ಕೌಶಲ ಪ್ರದರ್ಶಿಸಿದವು.
ಜಿಎಂಯು ಕುಲಪತಿ ಎಸ್.ಆರ್. ಶಂಕಪಾಲ್, ಉಪ ಕುಲಪತಿ ಎಚ್.ಡಿ. ಮಹೇಶಪ್ಪ ಎಕ್ಸ್‌ಪೋ ಉದ್ಘಾಟಿಸಿ, ಮಾದರಿಗಳನ್ನು ವೀಕ್ಷಿಸಿದರು.
ರೊಬೊ ಹವಾ..
ಜಿಎಂಐಟಿ ವಿದ್ಯಾರ್ಥಿಗಳಾದ ಸ್ನೇಹಾ ಡಿ.ಸಿ. ಚಿನ್ಮಯಿ ರಿತಿಕಾ ಶ್ರಾವ್ಯ ಹಾಗೂ ರುಚಿತಾ ಅವರ ತಂಡ ಅಭಿವೃದ್ಧಿಪಡಿಸಿದ ‘ಲೈನ್ ಫಾಲೋಯಿಂಗ್ ರೊಬೊಟ್’ ಪ್ರಾತ್ಯಕ್ಷಿಕೆಯು ವಿಜ್ಞಾನ ಆಸಕ್ತರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಗೊತ್ತುಪಡಿಸಿದ ಬಣ್ಣದ ಪಟ್ಟಿಯು (ಲೈನ್) ಸಾಗುವ ಮಾರ್ಗದಲ್ಲೇ ರೊಬೊಟ್ ಚಲಿಸುವಂತೆ ಮಾಡುವ ಈ ವಿಧಾನವು ಕಾರ್ಖಾನೆಗಳಲ್ಲಿ ಮಾನವ ಶ್ರಮವಿಲ್ಲದೇ ವಸ್ತುಗಳನ್ನು ಸಾಗಿಸಲು ನೆರವಾಗುತ್ತದೆ. ರೊಬೊಟ್ ತನ್ನ ಪಥವನ್ನು ಬಿಟ್ಟು ಆಚೀಚೆ ಕದಲದೇ ಗುರಿ ಮುಟ್ಟುವಂತೆ ಪ್ರೋಗ್ರಾಮಿಂಗ್ ಮಾಡಲಾಗಿದೆ.
ಮೃಗಾಲಯಗಳಲ್ಲಿ ಅಪಾಯಕಾರಿ ಪ್ರಾಣಿಗಳಿಗೆ ಆಹಾರವನ್ನು ತಲುಪಿಸಲು ಇಂತಹ ರೊಬೊಟ್‌ಗಳು ನೆರವಾಗುತ್ತವೆ ಎಂಬುದು ವಿದ್ಯಾರ್ಥಿನಿಯರ ವಿವರಣೆ. ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ತಂಡ ಪ್ರದರ್ಶಿಸಿದ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ರೊಬೊಟ್ ಮೊಬೈಲ್ ಫೋನ್ ನೀಡುವ ಸಂದೇಶಗಳನ್ನು ಪಾಲಿಸುತ್ತಾ ಕೆಲಸ ಮಾಡುತ್ತದೆ. ಮನೆಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಇಂತಹ ರೊಬೊಟ್‌ಗಳು ಉಪಯುಕ್ತವಾಗಲಿವೆ. ಅದರಲ್ಲೂ ವೃದ್ಧಾಶ್ರಮವಾಸಿಗಳು ರೋಗಿಗಳು ದೈಹಿಕವಾಗಿ ದುರ್ಬಲರಾದ ವ್ಯಕ್ತಿಗಳಿಗೆ ಅಗತ್ಯವಿರುವ ಔಷಧ ಊಟ ಮೊದಲಾದ ಸಾಮಗ್ರಿಗಳನ್ನು ತಲುಪಿಸಲು ಈ ರೊಬೊಟ್ ನೆರವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.