ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ಸಮಗ್ರತೆಗೆ ಮಾರಕ: ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2019, 19:49 IST
Last Updated 21 ಜೂನ್ 2019, 19:49 IST
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಶುಕ್ರವಾರ ನಡೆದ ಮಹಾಯೋಗಿಗಳ ಸಂಗಮ ಕಾರ್ಯಕ್ರಮದಲ್ಲಿ ಬಿ.ಸಿ. ಉಮಾಪತಿ, ಸ್ಪೇನ್‌ನ ಯೋಗಿನಿ ಪಾವೊಲಾ, ಯೋಗಿ ಜಾರ್ಜ್ ಬಿದಾಂದೊ, ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಯೋಗ ಸಾಧಕ ಶಿವಾನಂದಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಇಬ್ರಾಹೀಂ ಸುತಾರಾ ಇದ್ದರು.
ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಆವರಣದಲ್ಲಿ ಶುಕ್ರವಾರ ನಡೆದ ಮಹಾಯೋಗಿಗಳ ಸಂಗಮ ಕಾರ್ಯಕ್ರಮದಲ್ಲಿ ಬಿ.ಸಿ. ಉಮಾಪತಿ, ಸ್ಪೇನ್‌ನ ಯೋಗಿನಿ ಪಾವೊಲಾ, ಯೋಗಿ ಜಾರ್ಜ್ ಬಿದಾಂದೊ, ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಯೋಗ ಸಾಧಕ ಶಿವಾನಂದಜಿ, ಇಳಕಲ್‌ನ ಗುರುಮಹಾಂತ ಸ್ವಾಮೀಜಿ, ಇಬ್ರಾಹೀಂ ಸುತಾರಾ ಇದ್ದರು.   

ಹರಿಹರ: ‘ಪ್ರತ್ಯೇಕ ವೀರಶೈವ ಲಿಂಗಾಯತ ಧರ್ಮದ ಚಿಂತನೆ ದೇಶ ಹಾಗೂ ಹಿಂದುತ್ವದ ಸಮಗ್ರತೆಗೆ ಮಾರಕ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದ ಆವರಣದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನಡೆದ ‘ಮಹಾಯೋಗಿಗಳ ಸಂಗಮ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ‘ವೀರಶೈವ ಸಮಾಜ ಹಿಂದೂ ಧರ್ಮದ ಅವಿಭಾಜ್ಯ ಅಂಗ. ಹಿಂದೂ ಸಮಾಜದ ಒಗ್ಗಟ್ಟಿನ ಮೇಲೆ ದೇಶದ ಭವಿಷ್ಯ ಅವಲಂಬಿತವಾಗಿದೆ’ ಎಂದು ಪ್ರತಿಪಾದಿಸಿದರು.

‘ಶೈವ, ವೈಷ್ಣವ, ವೀರಶೈವ, ಲಿಂಗಾಯತ ಸೇರಿ ಎಲ್ಲಾ ಸಮಾಜಗಳು ಅವಿಭಕ್ತ ಹಿಂದೂ ಸಮಾಜದ ಬಲಿಷ್ಠ ಅಂಗಗಳು. ಸಹೋದರ ಸಮಾಜವಾಗಿ ವೀರಶೈವ ಸಮಾಜ ಹಿಂದೂ ಧರ್ಮದಲ್ಲಿ ಶಾಶ್ವತವಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಏಕತೆಯ ಸಂಕೇತವಾದ ಶಿವ-ವಿಷ್ಣು ಹಿಂದೂ ದೇವತೆಗಳು. ಈ ದೇವರುಗಳ ಆರಾಧಕರು ಹಿಂದೂಗಳು. ವೀರಶೈವ ಸಮಾಜ ಶಿವನ ಆರಾಧಕರು ಈ ನೆಲೆಗಟ್ಟಿನ ಆಧಾರದ ಮೇಲೆ ವೀರಶೈವರು ಹಿಂದೂ ಧರ್ಮದವರು’ ಎಂದು ಪ್ರತಿಪಾದಿಸಿದರು.

ಸಮಾಜದ ಸಂಘಟನೆ ಮತ್ತೊಂದು ಸಂಘಟನೆಗೆ ಮಾರಕವಾಗದೇ, ಪೂರಕವಾಗಿರಬೇಕು. ಪಂಚಮಸಾಲಿ ಸಮಾಜ ತನ್ನ ಅಭಿವೃದ್ಧಿ ಹಾಗೂ ಅಸ್ತಿತ್ವಕ್ಕಾಗಿ ನಡೆಸುತ್ತಿರುವ ಹೋರಾಟದಲ್ಲಿ ಪೇಜಾವರ ಪೀಠ ಅಗತ್ಯ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು.

‘ಯೋಗ ವಿಶ‍್ವಕ್ಕೆ ಭಾರತ ನೀಡಿದ ಅತಿ ದೊಡ್ಡ ಕೊಡುಗೆ. ಭಾರತೀಯ ಸಂಸ್ಕೃತಿ ವಿಶ‍್ವವ್ಯಾಪಿಯಾಗಲು ಯೋಗ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಯೋಗ ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಮಾನಸಿಕ, ಭೌತಿಕ, ಆಧ್ಯಾತ್ಮಿಕ ಹಾಗೂ ದೈಹಿಕ ಶಕ್ತಿಗಾಗಿ ನಿರಂತರ ಯೋಗಾಭ್ಯಾಸ ಮಾಡಿ’ ಎಂದು ಕರೆ ನೀಡಿದರು.

ವೀರಶೈವ ಪಂಚಮಸಾಲಿ ಲಿಂಗಾಯತ ಪೀಠದ ವಚನಾನಂದ ಸ್ವಾಮೀಜಿ, ‘ತಾತ್ವಿಕ, ಸಾಮಾಜಿಕ ಹಾಗೂ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಪೀಠ ರಚನಾತ್ಮಕ ಹಾಗೂ ಕ್ರಿಯಾಶೀಲ ಸಂಘಟನೆಗಾಗಿ ಶ್ರಮಿಸುತ್ತಿದೆ. ಮಠದ ಕಾರ್ಯಕ್ಕೆ ಭಕ್ತರ ಸಹಕಾರ ಅಗತ್ಯ’ ಎಂದರು.

ಕೃಷಿ ಪ್ರಧಾನವಾದ ಪಂಚಮಸಾಲಿ ಸಮಾಜಕ್ಕೆ ಪೀಠದ ಆವರಣದಲ್ಲಿ ಆಧುನಿಕ ಕೃಷಿ ಪದ್ಧತಿಯನ್ನು ಪ್ರಾತ್ಯಕ್ಷಿಕೆಯಾಗಿ ಬಳಸುವ ಮೂಲಕ ಮಾರ್ಗದರ್ಶನ ನೀಡುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸೂಫಿ ಸಂತ ಇಬ್ರಾಹಿಂ ಸುತಾರ್‌, ‘ಯೋಗ ನೆಮ್ಮದಿ ಬದುಕಿನ ದಾರಿದೀಪ. ಪ್ರಸ್ತುತ ಮಾನವ ಆಧುನಿಕ ಜೀವನ ಶೈಲಿಯ ಒತ್ತಡದಿಂದ ರೋಗಗಳಿಂದ ಪೀಡಿತನಾಗಿದ್ದಾನೆ. ಯೋಗದ ನಿರಂತರ ಅಭ್ಯಾಸದಿಂದ ತಮ್ಮ ಬದುಕನ್ನು ಪೂರ್ಣ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯ’ ಎಂದರು.

ಪಶ್ಚಿಮ ಬಂಗಾಳದ 123 ವರ್ಷದ ಸ್ವಾಮಿ ಶಿವಾನಂದಜಿ, ಇಳಕಲ್‍ನ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಸ್ವಾಮೀಜಿ, ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ರಾಮಕೃಷ್ಣ ಗೌಡ, ಅರ್ಜೆಂಟಿನಾದ ಮಹಾಯೋಗಿ ಜಾರ್ಜ್‌ ಬಿದಾಂದೊ, ಪೀಠದ ಪ್ರಧಾನ ಟ್ರಸ್ಟಿ ಬಿ.ಸಿ. ಉಮಾಪತಿ, ಟ್ರಸ್ಟಿಗಳಾದ ಬಸವರಾಜ್‍ ದಿಂಡೂರು, ಬಾವಿ ಬೆಟ್ಟಪ್ಪ, ಚಂದ್ರಶೇಖರ್ ಪೂಜಾರ್, ಸಮಾಜದ ರಾಜ್ಯ ಘಟಕದ ಕಾರ್ಯದರ್ಶಿ ಬಿ.ಪಿ. ಪಾಟೀಲ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.