ADVERTISEMENT

ಅಕ್ಟೋಬರ್‌ಗೆ ಸರ್ವಿಸ್‌ ರಸ್ತೆ ಪೂರ್ಣ: ಅಧಿಕಾರಿಗಳ ಭರವಸೆ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪರಿಶೀಲನೆ ಸಭೆಯಲ್ಲಿ ಸಂಸದರಿಗೆ ಅಧಿಕಾರಿಗಳ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 3:04 IST
Last Updated 24 ಫೆಬ್ರುವರಿ 2021, 3:04 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕುರಿತು ನಡೆದ ಸಭೆಯಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ ಮಾತನಾಡಿದರು   

ದಾವಣಗೆರೆ: ಚಿತ್ರದುರ್ಗದಿಂದ ಹರಿಹರದವರೆಗೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ಸರ್ವಿಸ್‌ ರಸ್ತೆಗಳ ನಿರ್ಮಾಣ ಕಾಮಗಾರಿಗಳನ್ನು ಅಕ್ಟೋಬರ್‌ ಒಳಗೆ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆ ಸಂಸ್ಥೆಯ ಪ್ರತಿನಿಧಿಗಳು ಮಂಗಳವಾರ ಸಂಸದರು ಮತ್ತು ಜಿಲ್ಲಾಧಿಕಾರಿಗೆ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ಭರವಸೆ ವ್ಯಕ್ತವಾಗಿದೆ.

ಮೂರು ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಮಾತ್ರ 15 ತಿಂಗಳುಗಳ ಅವಕಾಶ ಬೇಕು. ಉಳಿದ ಕಾಮಗಾರಿಗಳು 8 ತಿಂಗಳ ಒಳಗೆ ಮುಗಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ADVERTISEMENT

ಚಿಂದೋಡಿ ಲೀಲಾ ರಂಗಮಂಟಪದ ಬಳಿ ರಸ್ತೆ ಕಿರಿದಾಗಿದ್ದು, ವಾಹನ ಸವಾರರಿಗೆ ಗೊಂದಲ ವಾಗುವಂತಿದೆ. ಈ ಪ್ರದೇಶದಲ್ಲಿ 3 ವಿಂಡೋ ರಸ್ತೆ ನಿರ್ಮಾಣ ಮಾಡಿ ರಾಷ್ಟ್ರೀಯ ಹೆದ್ದಾರಿಯಿಂದ ನೇರ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಬೇಕು. ಸರ್ವಿಸ್‌ ರಸ್ತೆಯಲ್ಲಿ ಹೈ ಟೆನ್ಶನ್‌ ವಿದ್ಯುತ್‌ ಲೈನ್‌ ಇರುವುದರಿಂದ ನಿತ್ಯ ಅಪಘಾತವಾಗುತ್ತಿದೆ. ಎಚ್‌ಟಿ ಲೈನ್‌ಅನ್ನು ಕೂಡಲೇ ಸ್ಥಳಾಂತರಿಸಬೇಕು. ಬನಶಂಕರಿ ಬಡಾವಣೆ ಬಳಿ ರಸ್ತೆ ವಿಸ್ತರಣೆಗೆ 2019ರಲ್ಲಿ ಅನುಮತಿ ನೀಡಿದ್ದರೂ ಇನ್ನೂ ಆಗಿಲ್ಲ. ಮಲ್ಲಶೆಟ್ಟಿಹಳ್ಳಿ, ಕಲ್ಪನಹಳ್ಳಿ ಬಳಿಯ ಹೈಟೆನ್ಷನ್ ವಿದ್ಯುತ್ ಮಾರ್ಗ ಸ್ಥಳಾಂತರ ಮಾಡಬೇಕು. ಹದಡಿ ರಸ್ತೆಯಲ್ಲಿ ವೃತ್ತ ನಿರ್ಮಿಸಬೇಕು. ಹೊಸ ಕುಂದುವಾಡ ಹತ್ತಿರ ಮೇಲ್ಸೇತುವೆ ನಿರ್ಮಿಸಬೇಕು. ದಾವಣಗೆರೆ ನಗರಕ್ಕೆ ಬರುವಲ್ಲಿ ಉತ್ತಮ ಸ್ವಾಗತ ಕಮಾನ್‌ ನಿರ್ಮಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು.

ಶಾಮನೂರು ಜಂಕ್ಷನ್‌ ಅಗಲಗೊಳಿಸಬೇಕು. ಲಕ್ಕಮಕ್ಕನಹಳ್ಳಿ, ಸಿರಿಗೆರೆಯಲ್ಲಿ ರಸ್ತೆ ಕೆಳಗೆ, ಚರಂಡಿ ಮೇಲೆ ಆಗಿದೆ. ಸರಿಪಡಿಸಬೇಕು. ಹೆಬ್ಬಾಳ್‌ನಲ್ಲಿ ಚರಂಡಿ ಅಗಲಗೊಳಿಸಬೇಕು. ಕಲಪನಹಳ್ಳಿ, ಮಲ್ಲಶೆಟ್ಟಿಹಳ್ಳಿಯಲ್ಲಿ ನೀರಿನ ಪೈಪ್‌ಲೈನ್‌ ಅಳವಡಿಸಲು ರಸ್ತೆಬದಿಯಲ್ಲಿ ಅವಕಾಶ ನೀಡಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಪಾಲಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನೀರಾವರಿ ಇಲಾಖೆ ಹೀಗೆ ಅಗತ್ಯ ಇರುವ ಇಲಾಖೆಗಳ ನಡುವೆ ಸಮನ್ವಯ ಸಭೆ ನಡೆಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಭಾಗೀಯ ಅಧಿಕಾರಿ ಸೂರ್ಯವಂಶಿ, ಕಾರ್ಯಪಾಲಕ ಎಂಜಿಂನಿಯರ್‌ ಮಲ್ಲಿಕಾರ್ಜುನ, ಇರ್ಕಾನ್‌ ಎಂಜಿನಿಯರ್‌, ನಗರಾಭಿವೃದ್ಧಿ ಯೋಜನಾಧಿಕಾರಿ ನಜ್ಮಾ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.