
ದಾವಣಗೆರೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ನುಡಿ ನಮನ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಇತರರು ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆ: ದಾವಣಗೆರೆ ಜಿಲ್ಲೆ ಸೇರಿದಂತೆ ನಾಡಿನ ಔದ್ಯೋಗಿಕ ಏಳಿಗೆಗೆ ಶ್ರಮಿಸಿದ ಶಾಮನೂರು ಶಿವಶಂಕರಪ್ಪ ಅವರಿಗೆ ರಾಜ್ಯ ಸರ್ಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಿಸಬೇಕು ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಈಚೆಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ಸ್ಮರಣಾರ್ಥ ಶುಕ್ರವಾರ ಇಲ್ಲಿ ಏರ್ಪಡಿಸಿದ್ದ ‘ನುಡಿನಮನ’ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
‘ಶಿವಶಂಕರಪ್ಪ ಅವರ ಜನಾನುರಾಗಿ ಸತ್ಕಾರ್ಯ ಜನರ ಮನಸಿನಲ್ಲಿ ಹಸಿರಾಗಿದೆ. ದಾವಣಗೆರೆಗೆ ಹೊಸ ಆಯಾಮ ನೀಡಿದ ಅವರು ರಾಜ್ಯ ಸರ್ಕಾರ ಪ್ರದಾನ ಮಾಡುವ ಕರ್ನಾಟಕ ರತ್ನ ಪ್ರಶಸ್ತಿಗೆ ಅರ್ಹರು. ಈ ಪ್ರಸ್ತಾವವನ್ನು ಸಚಿವ ಸಂಪುಟದಲ್ಲಿಟ್ಟು ಕೂಡಲೇ ತೀರ್ಮಾನ ಕೈಗೊಳ್ಳಬೇಕು’ ಎಂದು ಪಕ್ಕದಲ್ಲೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.
‘ಶಿವಶಂಕರಪ್ಪ ಕಾಂಗ್ರೆಸ್‌ನಲ್ಲಿ ನಿಷ್ಠೆ ಇಟ್ಟುಕೊಂಡಿದ್ದರು. ಪಕ್ಷಾಂತರ ಮಾಡಲಾರದ ಆದರ್ಶ ವ್ಯಕ್ತಿತ್ವ ಅವರದಾಗಿತ್ತು. ಸಮುದಾಯದ ಹಿತಕ್ಕಾಗಿ ಪಕ್ಷ ಭೀತಿ ಬಿಟ್ಟು, ನೇರ ಹಾಗೂ ಸ್ಪಷ್ಟವಾಗಿ ಮಾತನಾಡುವ ಧೈರ್ಯ ಬೆಳೆಸಿಕೊಂಡಿದ್ದರು. ಬಹುದಿನಗಳ ಕಾಲ ಕಾಂಗ್ರೆಸ್ ಖಜಾಂಚಿ ಆಗಿ ಸಂಕಷ್ಟ ಕಾಲದಲ್ಲಿ ಪಕ್ಷಕ್ಕೆ ಬಲ ತುಂಬಿದ್ದಾರೆ’ ಎಂದರು.
ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್, ‘ಶಿವಶಂಕರಪ್ಪ ಅವರ ಅಗಲಿಕೆ ವ್ಯಕ್ತಿಗತ ನಷ್ಟವಷ್ಟೇ ಅಲ್ಲ, ಮೌಲ್ಯಾಧಾರಿತ ರಾಜಕಾರಣದ ಅಧ್ಯಾಯವೊಂದು ಮುಗಿದಂತೆ ಆಗಿದೆ’ ಎಂದರು.
ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಗೊಳಿಸಿದರು. ಉಜ್ಜನಿ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಸಚಿವರಾದ ಈಶ್ವರ ಖಂಡ್ರೆ, ಆರ್.ಬಿ. ತಿಮ್ಮಾಪುರ, ಎಸ್.ಎಸ್. ಮಲ್ಲಿಕಾರ್ಜುನ್, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ ಹಾಜರಿದ್ದರು.
ಶಾಮನೂರು ಶಿವಶಂಕರಪ್ಪ ಅವರು ನನಗೆ ಹಿರಿಯಣ್ಣನಂತೆ ಇದ್ದರು. ಪಕ್ಷದ ಹಂಗು ತೊರೆದು ನನ್ನೊಂದಿಗೆ ಬೆಂಬಲವಾಗಿ ನಿಂತ ಅವರ ಧೈರ್ಯ ದೊಡ್ಡದು
–ಬಿ.ಎಸ್. ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.