ADVERTISEMENT

ಸಿದ್ದರಾಮಯ್ಯ ಬೆನ್ನಿಗೆ ನಿಲ್ಲದ ಶಾಮನೂರು ಶಿವಶಂಕರಪ್ಪ: ವಿನಯ್‌ ಕುಮಾರ್‌ ಆರೋಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:13 IST
Last Updated 10 ಆಗಸ್ಟ್ 2024, 16:13 IST
ವಿನಯ್‌ಕುಮಾರ್ ಜಿ.ಬಿ
ವಿನಯ್‌ಕುಮಾರ್ ಜಿ.ಬಿ   

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೊಡ್ಡ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ಕಳಂಕ ಅಂಟಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲದೇ ಇಬ್ಬಂದಿತನ ಪ್ರದರ್ಶಿಸಿದೆ ಎಂದು ಲೋಕಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿ ಜಿ.ಬಿ.ವಿನಯ್‌ ಕುಮಾರ್‌ ಆರೋಪಿಸಿದರು.

‘ಲೋಕಸಭಾ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ್‌ ಗೆಲುವಿಗೆ ಸಿದ್ದರಾಮಯ್ಯ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಪಸಂಖ್ಯಾತರು, ದಲಿತರು ಮತ್ತ ಹಿಂದುಳಿದ (ಅಹಿಂದ) ವರ್ಗದ ಮತಗಳು ಕಾಂಗ್ರೆಸ್‌ಗೆ ಬರುವಂತೆ ಮಾಡಿದ್ದಾರೆ. ಅಹಿಂದ ವರ್ಗದ ಬೆಂಬಲದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸುವ ಶಾಮನೂರು ಕುಟುಂಬ ಬಳಿಕ ನಿರ್ಲಕ್ಷ್ಯ ತೋರುತ್ತಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಮುಖ್ಯಮಂತ್ರಿ ವಿಚಾರದಲ್ಲಿ ರಾಜ್ಯಪಾಲರು ನಡೆದುಕೊಳ್ಳುತ್ತಿರುವ ರೀತಿಯ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಲು ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ಅವಕಾಶವಿತ್ತು. ಅವರು ಬೇರೆ ವಿಚಾರಗಳನ್ನು ಮಂಡಿಸಲು ಈ ಸಮಯ ಬಳಸಿಕೊಂಡರೇ ಹೊರತು ಸಿದ್ದರಾಮಯ್ಯ ಪರ ಮಾತನಾಡಲಿಲ್ಲ. ಮೈಸೂರಿನಲ್ಲಿ ಕಾಂಗ್ರೆಸ್‌ ವತಿಯಿಂದ ನಡೆದ ಜನಾಂದೋಲನ ಸಮಾವೇಶದಲ್ಲಿ ಶಾಮನೂರು ಶಿವಶಂಕರಪ್ಪ ಪಾಲ್ಗೊಳ್ಳಲಿಲ್ಲ. ದಾವಣಗೆರೆಯಲ್ಲಿ ನಡೆದ ಪ್ರತಿಭಟನೆಯಿಂದ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ದೂರವೇ ಉಳಿದಿದ್ದರು’ ಎಂದರು.

ADVERTISEMENT

‘ಶಾಮನೂರು ಕುಟುಂಬ ‘ಅಹಿಂದ’ ವರ್ಗದ ಪರ ಧೋರಣೆ ಹೊಂದಿಲ್ಲ. ತಮ್ಮ ಜಾತಿ, ಮಠಕ್ಕೆ ಸಂಬಂಧಿಸಿದ ವಿಚಾರದಲ್ಲಿ ಧ್ವನಿಯತ್ತಲು ಅವರಿಗೆ ಸಮಯ ಸಿಗುತ್ತಿದೆ. ಆದರೆ, ‘ಅಹಿಂದ’ ನಾಯಕ ಸಿದ್ದರಾಮಯ್ಯ ಪರ ಈವರೆಗೆ ಯಾವ ಹೇಳಿಕೆಯನ್ನೂ ನೀಡಲಿಲ್ಲ. ಈ ವಾಸ್ತವವನ್ನು ದಾವಣಗೆರೆಯ ಮತದಾರರು ಅರ್ಥ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಸ್ವಾಭಿಮಾನಿ ಬಳಗದ ಮುಖಂಡರಾದ ಅಯ್ಯಣ್ಣ, ಸಾದಿಕ್‌, ಶರತ್‌ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.