ADVERTISEMENT

ದಾವಣಗೆರೆ | ಶಾಮನೂರು ಶಿವಶಂಕರಪ್ಪ ನುಡಿನಮನ ನಾಳೆ: ಮೂರು ವೇದಿಕೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 4:35 IST
Last Updated 25 ಡಿಸೆಂಬರ್ 2025, 4:35 IST
ದಾವಣಗೆರೆಯ ಕಲ್ಲೇಶ್ವರ ಮಿಲ್ ಸಮೀಪದಲ್ಲಿ ಆಯೋಜಿಸಿದ ನುಡಿನಮನ ಕಾರ್ಯಕ್ರಮದ ಸಿದ್ಧತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬುಧವಾರ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕಲ್ಲೇಶ್ವರ ಮಿಲ್ ಸಮೀಪದಲ್ಲಿ ಆಯೋಜಿಸಿದ ನುಡಿನಮನ ಕಾರ್ಯಕ್ರಮದ ಸಿದ್ಧತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬುಧವಾರ ಪರಿಶೀಲಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಇತ್ತೀಚೆಗೆ ನಿಧನರಾದ ಶಾಮನೂರು ಶಿವಶಂಕರಪ್ಪ ಅವರ ನುಡಿನಮನ ಕಾರ್ಯಕ್ರಮವನ್ನು ಆನೆಕೊಂಡದ ಕಲ್ಲೇಶ್ವರ ರೈಸ್‌ಮಿಲ್‌ ಸಮೀಪದಲ್ಲಿ ಡಿ.26ರಂದು ಹಮ್ಮಿಕೊಳ್ಳಲಾಗಿದೆ. 100 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ಕಾರ್ಯಕ್ರಮಕ್ಕೆ ಬೃಹತ್‌ ಪೆಂಡಾಲ್‌ ನಿರ್ಮಾಣ ಮಾಡಲಾಗುತ್ತಿದ್ದು, ಮೂರು ವೇದಿಕೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. 40 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ನಗರದ ಹಲವೆಡೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ನಾಡಿನ ಮಠಾಧೀಶರು, ರಾಜ್ಯಸಭಾ ಸದಸ್ಯ ಎಚ್‌.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿ ಅನೇಕರು ಆಗಮಿಸಲಿದ್ದಾರೆ.

‘ಡಿ. 26ರಂದು ಬೆಳಿಗ್ಗೆ 10.15ಕ್ಕೆ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಎರಡು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಶಿವಶಂಕರಪ್ಪ ಅವರ ಪುತ್ರ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದರು.

ADVERTISEMENT

‘ರಾಜ್ಯಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಶಾಮನೂರು ಶಿವಶಂಕರಪ್ಪ ಅವರ ಪುತ್ಥಳಿ ಅನಾವರಣಗೊಳಿಸಲಿದ್ದಾರೆ. 1972ರಿಂದಲೂ ಖರ್ಗೆ ಹಾಗೂ ಶಿವಶಂಕರ‌ಪ್ಪ ಅವರ ಒಡನಾಟ ಉತ್ತಮವಾಗಿತ್ತು. ಅಯೋಧ್ಯೆಯ ಶ್ರೀರಾಮ ಮಂದಿರದ ಶ್ರೀರಾಮ ಮೂರ್ತಿ ಕೆತ್ತನೆ ಮಾಡಿದ ಮೈಸೂರಿನ ಅರುಣ್‌ ಯೋಗಿರಾಜ್‌ ಪುತ್ಥಳಿ ನಿರ್ಮಿಸಿದ್ದಾರೆ. ಇದನ್ನು ಪ್ರತಿಷ್ಠಾಪನೆ ಮಾಡುವ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ’ ಎಂದು ವಿವರಿಸಿದರು.

‘ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಶಾಮನೂರು ಶಿವಶಂಕರಪ್ಪ ಅವರ ಜೀವನ ಕುರಿತ ಕಿರುಹೊತ್ತಿಗೆ ಲೋಕಾರ್ಪಣೆ ಮಾಡಲಿದ್ದಾರೆ. ಶಿವಶಂಕರಪ್ಪ ಜೀವನ ಆಧರಿಸಿದ ‘ಅಮೃತ ಪುರುಷ’ ಸಾಕ್ಷ್ಯಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರ ಜೊತೆಗಿನ ಸಾಂಗತ್ಯದ ಕುರಿತು ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ’ ಎಂದು ತಿಳಿಸಿದರು.

‘ಪಂಚಪೀಠಾಧೀಶರು, ನಾಡಿನ ಎಲ್ಲ ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಬೆಂಗಳೂರಿನ ರವೀಂದ್ರ ಸೊರಗಾವಿ ಮತ್ತು ತಂಡದಿಂದ ವಚನ ಗಾಯನ ಪ್ರಸ್ತುತಪಡಿಸಲಿದ್ದಾರೆ. ಹಳೆ ದಾವಣಗೆರೆಯ ಬಹುತೇಕ ಜನರೊಂದಿಗೆ ಶಿವಶಂಕರಪ್ಪ ಅವರು ಒಡನಾಟ ಇಟ್ಟುಕೊಂಡಿದ್ದರು. ಅಂದಾಜು 40,000ದಿಂದ 50,000 ಜನರು ಬರುವ ನಿರೀಕ್ಷೆ ಇದ್ದು, ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಥಣಿ ವೀರಣ್ಣ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ‘ಧೂಡಾ’ ಅಧ್ಯಕ್ಷ ದಿನೇಶ್‌ ಕೆ. ಶೆಟ್ಟಿ, ಕಾಂಗ್ರೆಸ್‌ ಮುಖಂಡರಾದ ಎ. ನಾಗರಾಜ್‌, ಅಯೂಬ್‌ ಪೈಲ್ವಾನ್‌, ನಂದಿಗಾವಿ ಶ್ರೀನಿವಾಸ್‌, ಮುದೇಗೌಡರ ಗಿರೀಶ್‌ ಹಾಜರಿದ್ದರು.

ಜಿಲ್ಲೆಯ ಎಲ್ಲ ಜನರಿಗೆ ಆಹ್ವಾನ ನೀಡಲಾಗಿದೆ. ಆಹ್ವಾನ ಪತ್ರಿಕೆಗಳನ್ನು ಮನೆ–ಮನೆಗಳಿಗೆ ತಲುಪಿಸಲಾಗಿದೆ. ಎಲ್ಲರೂ ಆಗಮಿಸಿ ನುಡಿನಮನದಲ್ಲಿ ಪಾಲ್ಗೊಳ್ಳಬೇಕು
ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಂಸದೆ
ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಶಿವಶಂಕರಪ್ಪ ಬೆಳೆದ ಪರಿ ವಿಸ್ಮಯ ಮೂಡಿಸಿದೆ. ರಾಜಕೀಯ ಶಿಕ್ಷಣ ಸಮಾಜ ಸೇವೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ
ಅಣಬೇರು ರಾಜಣ್ಣ ಉಪಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
25000ಕ್ಕೂ ಹೆಚ್ಚು ಆಸನ
ಕಲ್ಲೇಶ್ವರ ಮಿಲ್‌ ಹಿಂಭಾಗದ 100 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. 25000ಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮಠಾಧೀಶರು ಗಣ್ಯರು ಸಾರ್ವಜನಿಕರಿಗೆ ಪ್ರತ್ಯೇಕ ಊಟದ ವ್ಯವಸ್ಥೆ ಇದೆ. ಕಾರ್ಯಕ್ರಮ ಸ್ಥಳದಲ್ಲಿ ಊಟಕ್ಕೆ 90 ಕೌಂಟರ್‌ಗಳನ್ನು ತೆರೆಯಲಾಗಿದೆ. ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್‌ ಸಮುದಾಯ ಭವನ ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪ ಹಾಗೂ ಪಿ.ಬಿ. ರಸ್ತೆಯ ಅಭಿನವ ರೇಣುಕ ಮಂದಿರದಲ್ಲಿಯೂ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಸಂಚಾರ ಮಾರ್ಗ ಬದಲಾವಣೆ
ನುಡಿನಮನ ಕಾರ್ಯಕ್ರಮಕ್ಕೆ ಗಣ್ಯರು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುವುದರಿಂದ ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ನಿಲುಗಡೆಗೂ ಪೊಲೀಸರು ಸ್ಥಳ ಗುರುತಿಸಿದ್ದಾರೆ. ಹರಪನಹಳ್ಳಿ ಕಡೆಯಿಂದ ಬರುವ ವಾಹನಗಳು ಬಸಾಪುರ ಎಪಿಎಂಸಿ ಜಾನುವಾರು ಮಾರುಕಟ್ಟೆ ಮೂಲಕ ಪಿ.ಬಿ. ರಸ್ತೆ ಸಂಪರ್ಕಿಸಬೇಕು. ಜಗಳೂರು ರಸ್ತೆಯಲ್ಲಿ ಸಂಚರಿಸುವ ವಾಹನಗಳು ಅಣಜಿ ಆನಗೋಡು ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಬೇಕು. ಬಸಾಪುರ ರಸ್ತೆಯ ವಿನಾಯಕ ಗೋದಾಮು ಸಮೀಪ ಸಾರ್ವಜನಿಕ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.