ADVERTISEMENT

ಕಾಂಗ್ರೆಸ್‌ನಿಂದ ಅರ್ಜಿ ಹಲವು: ಶಾಮನೂರು ಕಡೆಗೆ ಒಲವು

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ: ಬಿಜೆಪಿಯಲ್ಲಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ

ಬಾಲಕೃಷ್ಣ ಪಿ.ಎಚ್‌
Published 11 ಜನವರಿ 2023, 6:30 IST
Last Updated 11 ಜನವರಿ 2023, 6:30 IST
ಅಂಕಿಅಂಶ
ಅಂಕಿಅಂಶ   

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಹಾಲಿ ಶಾಸಕರಲ್ಲದೇ ಮತ್ತೂ ಐವರು ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಈ ರೀತಿ ಅರ್ಜಿ ಸಲ್ಲಿಸುವ ಕ್ರಮ ಇಲ್ಲದಿದ್ದರೂ ಆಕಾಂಕ್ಷಿಗಳು ಮಾತ್ರ ಹೆಚ್ಚಿನ ಸಂಖ್ಯೆಯಲ್ಲೇ ಇದ್ದಾರೆ. ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಎಷ್ಟೇ ಇದ್ದರೂ ದಕ್ಷಿಣದಿಂದ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್‌ ಎ‌ಂಬುದು ಪಕ್ಷದೊಳಗೆ ಹರಿದಾಡುತ್ತಿದೆ. ಬಿಜೆಪಿಯಲ್ಲಿ ಬಿ ಫಾರ್ಮ್‌ ಯಾರಿಗೆ ಸಿಗಲಿದೆ ಎಂಬುದು ಇನ್ನೂ ನಿಗೂಢವಾಗಿದೆ.

ಶಾಮನೂರು ಶಿವಶಂಕರಪ್ಪ ಅಲ್ಲದೇ ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವೀರಣ್ಣ ಕೂಡ ಉಮೇದುವಾರಿಕೆ ಸಲ್ಲಿಸಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಹೆಚ್ಚಿರುವುದರಿಂದ ಆ ಸಮುದಾಯದಿಂದ ನಾಲ್ವರು ಸ್ಪರ್ಧೆಯ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಇಬ್ರಾಹಿಂ ಕಲೀವುಲ್ಲಾ, ಸಾದಿಕ್‌ ಪೈಲ್ವಾನ್‌, ಸೈಯದ್‌ ಖಾಲಿದ್‌ ಅಹ್ಮದ್‌, ಮಹಮ್ಮದ್‌ ಇಕ್ಬಾಲ್‌ ಟಿಕೆಟ್‌ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು.

ಶಾಮನೂರು ಶಿವಶಂಕರಪ್ಪ ಅವರಿಗೆ 92 ವರ್ಷ ವಯಸ್ಸಾಗಿದೆ, ಹುಮ್ಮಸ್ಸು ಕಡಿಮೆಯಾಗಿಲ್ಲ. ಅವರು ಸ್ಪರ್ಧಿಸದೇ ತಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುತ್ತಾರೆ ಎಂಬ ವದಂತಿ ಹಿಂದೊಮ್ಮೆ ಹರಡಿತ್ತು. ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಅವರು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು. ‘ನಾನೇ ಸ್ಪರ್ಧಿಸುತ್ತೇನೆ. ನಮ್ಮ ಕುಟುಂಬದಿಂದ ಹೆಣ್ಣುಮಕ್ಕಳು ಸ್ಪರ್ಧಿಸಲ್ಲ’ ಎಂದು ಈ ವದಂತಿಗೆ ಶಾಮನೂರು ಶಿವಶಂಕರಪ್ಪ ಆಗ ತೆರೆ ಎಳೆದಿದ್ದರು.

ADVERTISEMENT

ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸೋತಿರುವ ಯಶವಂತರಾವ್‌ ಜಾಧವ್‌ ಬಿಜೆಪಿಯಿಂದ ಮತ್ತೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಅವರೊಂದಿಗೆ ಶ್ರೀನಿವಾಸ ದಾಸಕರಿಯಪ್ಪ ಸಹ ಟಿಕೆಟ್‌ ದೊರೆಯುವ ಉತ್ಸಾಹದೊಂದಿಗೆ ಓಡಾಡುತ್ತಿರುವ ಇನ್ನೊಬ್ಬ ಆಕಾಂಕ್ಷಿ. ಸ್ಲಂ ಬೋರ್ಡ್‌ ಎಂಜಿನಿಯರ್‌ ಆಗಿ ಸ್ವಯಂ ನಿವೃತ್ತಿ ಹೊಂದಿರುವ, ಸಂಘ ಪರಿವಾರದೊಂದಿಗೆ ನಿಕಟ ಸಂಪರ್ಕದಲ್ಲಿರುವ ಆನಂದಪ್ಪ ಸಹ ಸ್ಪರ್ಧೆಯ ಇರಾದೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಮಾಜಿ ಮೇಯರ್‌ ಬಿ.ಜಿ. ಅಜಯ್‌ ಕುಮಾರ್‌ ಅವರೂ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಎಪಿಎಂಸಿ ಮಾಜಿ ಅಧ್ಯಕ್ಷ ಕೋಳೆನಹಳ್ಳಿ ಸತೀಶ್‌ ಹಿಂದೆ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಈಗ ಬಿಜೆಪಿಯಿಂದ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ. ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ಮತ್ತೊಬ್ಬ ಆಕಾಂಕ್ಷಿ.

ಅಮಾನುಲ್ಲಾ ಖಾನ್‌ ಕಣಕ್ಕೆ: ದಕ್ಷಿಣ ಕ್ಷೇತ್ರದಿಂದ ಜೆ. ಅಮಾನುಲ್ಲಾ ಖಾನ್‌ ಜೆಡಿಎಸ್‌ನಿಂದ ಕಣಕ್ಕಿಳಿಯಲು ಸಿದ್ಧರಾಗಿದ್ದಾರೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಐದು
ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಆ ಪೈಕಿ ಅಮಾನುಲ್ಲಾ ಖಾನ್‌ ಕೂಡ
ಒಬ್ಬರು.

ಅಲ್ಲದೇ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್), ಆಮ್‌ ಆದ್ಮಿ ಪಾರ್ಟಿ (ಎಎಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಪ್ರಜಾಕೀಯ, ಎಸ್‌ಡಿಪಿಐ ಮತ್ತಿತರ ಪಕ್ಷಗಳು ತಮ್ಮ ಅಭ್ಯರ್ಥಿ ಕಣಕ್ಕಿಳಿಸಲು ತಯಾರಿ ನಡೆಸುತ್ತಿವೆ. ಚುನಾವಣೆ ಘೋಷಣೆಯಾಗುವ ಹೊತ್ತಿಗೆ ಸಿಪಿಐ, ಸಿಪಿಎಂನಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆ ಇರುವುದರಿಂದ ಈ ‘ಪ್ರತಿಷ್ಠಿತ’ ಕ್ಷೇತ್ರದಲ್ಲಿ ಸ್ಪರ್ಧಿಗಳ ಸಂಖ್ಯೆ ಸಹಜವಾಗಿಯೇ ಅಧಿಕವಾಗುವ ಸಾಧ್ಯತೆ ಇದೆ.

ಶಾಮನೂರು ಶಿವಶಂಕರಪ್ಪ ಸ್ಪರ್ಧಿಸದಿದ್ದರೆ ನಮಗೆ ಟಿಕೆಟ್‌ ನೀಡಿ ಎಂದು ಉಳಿದವರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಶಿವಶಂಕರಪ್ಪನವರೇ ಸ್ಪರ್ಧಿಸಿ, ಗೆಲುವು ಸಾಧಿಸಲಿದ್ದಾರೆ.

- ಎಚ್‌.ಬಿ. ಮಂಜಪ್ಪ, ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಪರ ಅಲೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗಿಂತ ಅಧಿಕ ಮತಗಳು ಸಿಕ್ಕಿದ್ದವು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

- ವೀರೇಶ್‌ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಜೆಡಿಎಸ್‌ ಈ ಬಾರಿ ಜಿಲ್ಲೆಯಲ್ಲಿ ಕನಿಷ್ಠ ಮೂರು ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಅದರಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರವೂ ಒಂದು. ಅಮಾನುಲ್ಲಾ ಖಾನ್‌ ಗೆಲುವು ಸಾಧಿಸಲಿದ್ದಾರೆ.

- ಬಿ. ಚಿದಾನಂದಪ್ಪ, ಜೆಡಿಎಸ್‌, ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.