ADVERTISEMENT

ವೀರಶೈವ ಧರ್ಮದ ತತ್ವ ತ್ರಯಗಳ ಪರಿಪಾಲನೆಯಿಂದ ಸುಖ, ಶಾಂತಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:04 IST
Last Updated 9 ನವೆಂಬರ್ 2025, 6:04 IST
ಹರಿಹರದಲ್ಲಿ ಲಿಂ.ಉಜ್ಜಯಿನಿ ಸಿದ್ಧಲಿಂಗ ಶ್ರೀಗಳ ತಪಸ್ಸು, ಸಾಧನೆಯ ಶತಮಾನೋತ್ಸವ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು
ಹರಿಹರದಲ್ಲಿ ಲಿಂ.ಉಜ್ಜಯಿನಿ ಸಿದ್ಧಲಿಂಗ ಶ್ರೀಗಳ ತಪಸ್ಸು, ಸಾಧನೆಯ ಶತಮಾನೋತ್ಸವ ಸಮಾರಂಭವನ್ನು ಶಾಸಕ ಬಿ.ಪಿ.ಹರೀಶ್ ಉದ್ಘಾಟಿಸಿದರು   

ಹರಿಹರ: ‘ವೀರಶೈವ ಧರ್ಮದ ತತ್ವ ತ್ರಯಗಳ ಪರಿಪಾಲನೆಯಿಂದ ಸುಖ, ಶಾಂತಿ ಪ್ರಾಪ್ತವಾಗುವುದು’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. 

ನಗರದಲ್ಲಿ ಶನಿವಾರ ಮಹಾತಪಸ್ವಿ ಫೌಂಡೇಶನ್ ಆಯೋಜಿಸಿದ್ದ ಲಿಂ.ಉಜ್ಜಯಿನಿ ಸಿದ್ಧಲಿಂಗ ಶ್ರೀಗಳ ತಪಸ್ಸು, ಸಾಧನೆಯ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. 

‘ಪರಿಪಕ್ವ ಸಮಾಜ ನಿರ್ಮಾಣ ಕಾರ್ಯವೇ ನಿಜವಾದ ಧರ್ಮವೆಂದರಿತು ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸಿ ಸನ್ಮಾರ್ಗಕ್ಕೆ ಕರೆತಂದ ಲಿಂ.ಉಜ್ಜಯಿನಿ ಸಿದ್ಧಲಿಂಗ ಶ್ರೀ ಯುಗಪುರುಷರಾಗಿದ್ದರು’ ಎಂದರು. 

ADVERTISEMENT

‘ಅಂತರಂಗ, ಬಹಿರಂಗ ಶುದ್ಧಿಯಿಂದ ಬದುಕಿಗೆ ಶ್ರೇಯಸ್ಸು ದೊರಕುವುದು. ಶಿವಾಗಮಗಳ ಧರ್ಮ ಸಾಹಿತ್ಯವನ್ನು ಜನರ ಮನೆ, ಮನಗಳಿಗೆ ತಲುಪಿಸಲು ಗಟ್ಟಿ ಹೆಜ್ಜೆಯನ್ನಿಟ್ಟರು. ಜೀವನದ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಆದರ್ಶ ಸಂಸ್ಕಾರ ಮತ್ತು ಸದ್ವಿಚಾರ ಬೋಧಿಸಿ ಅವರಲ್ಲಿ ಸ್ಫೂರ್ತಿ ಮತ್ತು ಚೈತನ್ಯ ಶಕ್ತಿಯನ್ನು ಹೆಚ್ಚಿಸಿದರು’ ಎಂದು ಹೇಳಿದರು. 

‘ಮನುಷ್ಯನಲ್ಲಿ ದೈವಿ ಗುಣ ಹಾಗೂ ಅಸುರಿ ಗುಣ ಎರಡೂ ಇವೆ. ಸಂಸಾರ ಸಾಗರದಿಂದ ಪಾರು ಮಾಡಿ ಸುಖ ಸಾಗರದತ್ತ ಕರೆದುಕೊಂಡು ಹೋಗುವ ಗುಣಗಳು ದೈವೀ ಗುಣಗಳು. ದುಃಖದ ಕಡಲಿನಲ್ಲಿ ಮುಳುಗಿಸಿ ಬಿಡುವ ಗುಣಗಳು ಅಸುರೀ ಗುಣಗಳಾಗಿವೆ. ದೈವೀ ಗುಣಗಳ ಸಂವರ್ಧನೆಗಾಗಿ ನಿತ್ಯ ಶ್ರಮಿಸಿ ಜಗದ ಜನರಿಗೆ ಶಾಂತಿ ಸಾಮರಸ್ಯ ಕ್ರಿಯಾಶೀಲ ವ್ಯಕ್ತಿತ್ವ ರೂಪಿಸಿದವರು ಉಜ್ಜಯಿನಿ ಸಿದ್ಧಲಿಂಗ ಶ್ರೀಗಳು’ ಎಂದರು. 

‘ಮನುಷ್ಯನು ಮಾನವತೆಯಿಂದ ದೈವತ್ವಕ್ಕೆ ಏರುವುದು ಸುಲಭವಲ್ಲ. ಇದಕ್ಕಾಗಿ ಶ್ರಮ, ಪ್ರಯತ್ನ ಇರಬೇಕಾಗುತ್ತದೆ. ಅನೇಕ ಆಧ್ಯಾತ್ಮಿಕ ವಿಭೂತಿ ಪುರುಷರನ್ನು ಇತಿಹಾಸದಲ್ಲಿ ಕಾಣುತ್ತೇವೆ. ಅಂಥ ಸಿದ್ಧಿ ಪುರುಷರಲ್ಲಿ ಲಿಂ. ಉಜ್ಜಯಿನಿ ಸಿದ್ಧಲಿಂಗ ಶ್ರೀಗಳು ಒಬ್ಬರು’ ಎಂದು ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಹೇಳಿದರು. 

‘ಉದಾತ್ತವಾದ ಜೀವನ ಮೌಲ್ಯಗಳನ್ನು ಪರಿಪಾಲಿಸಿ ಜನ ಸಮುದಾಯದ ಶ್ರೇಯಸ್ಸಿಗೆ ನಿರಂತರ ಶ್ರಮಿಸಿದರು. ಭಕ್ತ ಸಂಕುಲದ ಒಳಿತಿಗಾಗಿ ತಪಗೈದ ಸಿದ್ಧಿ ಪುರುಷರ ಶತಮಾನೋತ್ಸವ ಆಚರಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ’ ಎಂದು ಅವಧೂತ ಕವಿ ಗುರುರಾಜ ಗುರೂಜಿ ಆಶಯ ನುಡಿಗಳನ್ನಾಡಿದರು. 

ಮಹಾತಪಸ್ವಿ ಫೌಂಡೇಶನ್ ಉಪಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಹಾ.ಮಾ.ನಾಗಾರ್ಜುನ ಪ್ರಾಸ್ತಾವಿಕ ನುಡಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ, ಡಿ.ಜಿ.ಶಿವಾನಂದಪ್ಪ, ಜಗದೀಶ್ ಬಣಕಾರ್, ಎ.ಬಿ.ಸಿ. ವಿಜಯಕುಮಾರ್ ಹಾಜರಿದ್ದರು. 

ಮಹಾತಪಸ್ವಿ ಗುರುಕುಲ ಸಾಧಕರಿಂದ ವೇದಘೋಷ, ಸೃಷ್ಟಿ ಶೆಲ್ಲಿಕೇರಿ ಮತ್ತು ಪರಮೇಶ್ವರ ಕತ್ತಿಗೆ ಸಂಗಡಿಗರಿಂದ ಭಕ್ತಿಗೀತೆ, ಹುಬ್ಬಳ್ಳಿಯ ಆರಾಧನಾ ತಿರ್ಲಾಪುರ ಅವರಿಂದ ಭರತನಾಟ್ಯ ನಡೆಯಿತು. ಐಶ್ವರ್ಯ ಸ್ವಾಗತಿಸಿದರು. ಪ್ರೊ.ಎ.ಎಂ.ರಾಜಶೇಖರಯ್ಯ, ಪಿ.ಬಿ.ಕೊಟ್ರೇಶಪ್ಪ ನಿರೂಪಿಸಿದರು.

ಗ್ರಂಥ ಬಿಡುಗಡೆ

ಪ್ರೊ.ಎಸ್.ಎಂ.ಗಂಗಾಧರಯ್ಯ ಮಹಾತಪಸ್ವಿ ಫೌಂಡೇಶನ್‌ನ 10 ವರ್ಷದ ಅಭಿಯಾನದ ಸಮಗ್ರ ನೋಟ ಗ್ರಂಥ ಬಿಡುಗಡೆಗೊಳಿಸಿದರು.  ದಾವಣಗೆರೆ ಅಶ್ವಿನಿ ಆಯುರ್ವೇದ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ.ಯು.ಎಂ.ಜ್ಞಾನೇಶ್ವರ ಅವರಿಗೆ ‘ಆಯುರ್ ತಪೋ ಜ್ಞಾನ ರತ್ನ’ ಪ್ರಶಸ್ತಿಯನ್ನು ರಂಭಾಪುರಿ ಶ್ರೀ ಪ್ರದಾನ ಮಾಡಿದರು.  ಆವರಗೊಳ್ಳ ಹಿರೇಮಠದ ಓಂಕಾರ ಶಿವಾಚಾರ್ಯರು ಕಣ್ವಕುಪ್ಪಿ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯರು ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯರು ಪುಣ್ಯಕೋಟಿ ಮಠದ ಜಗದೀಶ್ವರ ನುಡಿನಮನ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.