ದಾವಣಗೆರೆ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ‘ವಿಶಿಷ್ಟ ಮನೆ ಸಂಖ್ಯೆ’ಯ (ಯುಎಚ್‌ಐಡಿ) ಜಾಡು ಹಿಡಿದು ಮನೆ ಗುರುತಿಸುವಲ್ಲಿ ಎದುರಾದ ಸವಾಲುಗಳಿಂದಾಗಿ ನಗರ ಪ್ರದೇಶ ಸಮೀಕ್ಷೆಯ ಪ್ರಗತಿಯಲ್ಲಿ ಹಿಂದೆ ಉಳಿದಿದೆ.
ದಾವಣಗೆರೆ ಹಾಗೂ ಹರಿಹರ ನಗರಗಳಲ್ಲಿಯೇ ಸಮೀಕ್ಷೆಗೆ ಹಿನ್ನಡೆ ಉಂಟಾಗಿದೆ. ನಿರೀಕ್ಷಿತ ಪ್ರಗತಿ ಕಾಣದಿರುವ ಸಮೀಕ್ಷೆಯ ಕುರಿತು ಅವಲೋಕನ ನಡೆಸಿದ ಅಧಿಕಾರಿಗಳು, ಈ ಎರಡು ನಗರಗಳತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದಾರೆ.
ಗ್ರಾಮೀಣ ಪ್ರದೇಶವೇ ಹೆಚ್ಚಾಗಿರುವ ಜಗಳೂರು, ಚನ್ನಗಿರಿ, ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳಲ್ಲಿ ಸಮೀಕ್ಷೆ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಬಿಟ್ಟುಹೋಗಿರುವ ಮನೆಗಳನ್ನು ಗುರುತಿಸಿ ಸಮೀಕ್ಷೆಗೆ ಒಳಪಡಿಸುವ ಪ್ರಕ್ರಿಯೆಗೆ ಮಂಗಳವಾರ ಚಾಲನೆ ಸಿಕ್ಕಿದೆ. ಮುಂದಿನ ಮೂರು ದಿನಗಳಲ್ಲಿ ಈ ತಾಲ್ಲೂಕುಗಳ ಸಮೀಕ್ಷೆ ಪೂರ್ಣಗೊಳ್ಳುವ ಭರವಸೆ ಮೂಡಿದೆ.
ಜಿಲ್ಲೆಯಲ್ಲಿ 4.91 ಲಕ್ಷ ಮನೆಗಳಿಗೆ ‘ವಿಶಿಷ್ಟ ಮನೆ ಸಂಖ್ಯೆ’ಯ ಚೀಟಿ ಅಂಟಿಸಲಾಗಿದೆ. ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಆಧರಿಸಿ ‘ಬೆಸ್ಕಾಂ’ ಸಿಬ್ಬಂದಿ ಯುಎಚ್‌ಐಡಿ ಚೀಟಿಗಳನ್ನು ಅಂಟಿಸಿದ್ದರು. ಇದರ ಆಧಾರದ ಮೇರೆಗೆ ಸಮೀಕ್ಷಕರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ‘ಆ್ಯಪ್’ನಲ್ಲಿ ಎದುರಾದ ತಾಂತ್ರಿಕ ಸಮಸ್ಯೆಯಿಂದ ಮರು ಹಂಚಿಕೆ ಮಾಡಿ ನಕ್ಷೆಗಳನ್ನು ಬದಲಿಸಲಾಗಿತ್ತು. ಈ ಸವಾಲುಗಳನ್ನು ಎದುರಿಸಿದ ಸಮೀಕ್ಷಕರು ಗ್ರಾಮೀಣ ಪ್ರದೇಶದಲ್ಲಿ ನಿಗದಿತ ಕಾಲಮಿತಿಯಲ್ಲಿ ಪ್ರಗತಿ ಸಾಧಿಸಿದ್ದಾರೆ.
‘ಯುಎಚ್‌ಐಡಿಗೆ ‘ಜಿಯೊ ಟ್ಯಾಗಿಂಗ್’ ಕಡ್ಡಾಯಗೊಳಿಸಲಾಗಿತ್ತು. ‘ಬೆಸ್ಕಾಂ’ ಸಿಬ್ಬಂದಿ ಈ ಚೀಟಿಗಳನ್ನು ಮನೆಗಳಿಗೆ ಅಂಟಿಸುವಾಗ ‘ಜಿಯೊ ಟ್ಯಾಗಿಂಗ್’ ಮಾಡುವಲ್ಲಿ ಸಮಸ್ಯೆಯುಂಟು ಮಾಡಿದ್ದಾರೆ. ತಾಂತ್ರಿಕ ಸಮಸ್ಯೆಯ ನೆಪಗಳನ್ನು ಮುಂದಿಟ್ಟುಕೊಂಡು ಆಫ್‌ಲೈನ್‌ನಲ್ಲಿ ಚೀಟಿಗಳನ್ನು ಅಂಟಿಸಿದ್ದಾರೆ. ಇದರಿಂದ ಸಮೀಕ್ಷಕರಿಗೆ ಮನೆ ಹುಡುಕುವಲ್ಲಿ ಸಮಸ್ಯೆ ಉಂಟಾಗಿದೆ’ ಎಂದು ಮೂಲಗಳು ವಿವರಿಸಿವೆ.
35,000 ವಾಣಿಜ್ಯ ಕಟ್ಟಡ:
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ 35,000 ಯುಎಚ್‌ಐಡಿಗಳು ವಾಣಿಜ್ಯ ಕಟ್ಟಡಗಳೆಂಬುದು ಖಚಿತವಾಗಿದೆ. ವಿದ್ಯುತ್ ಮೀಟರ್‌ನ ಆರ್.ಆರ್. ಸಂಖ್ಯೆ ಆಧರಿಸಿ ಯುಎಚ್‌ಐಡಿ ಚೀಟಿ ಅಂಟಿಸಿದ್ದರಿಂದ ಸಮೀಕ್ಷೆಯಲ್ಲಿ ತೊಡಕು ಎದುರಾಗಿದೆ.
‘ವಾಣಿಜ್ಯ ಉದ್ದೇಶದ ಸಾವಿರಾರು ಕಟ್ಟಡಗಳು ಪತ್ತೆಯಾಗಿವೆ. ಹಾಸ್ಟೆಲ್, ಸರ್ಕಾರಿ ಕಟ್ಟಡ, ಅಂಗನವಾಡಿ ಕೇಂದ್ರಗಳಿಗೂ ಯುಎಚ್‌ಐಡಿ ಅಂಟಿಸಲಾಗಿದೆ. ಇದರಿಂದ ನಗರ ವ್ಯಾಪ್ತಿಯಲ್ಲಿ ಸಮೀಕ್ಷೆಯ ಪ್ರಗತಿಯಲ್ಲಿ ಹಿನ್ನಡೆ ಉಂಟಾಗಿದೆ. ಇಂತಹ ಯುಎಚ್‌ಐಡಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ಅ.8ರಿಂದ ಆರಂಭವಾಗಲಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಸ್ಥಳೀಯ ಸಂಸ್ಥೆಯಲ್ಲಿ ಸಮೀಕ್ಷೆ:
ಸಮೀಕ್ಷಕರಿಂದ ಬಿಟ್ಟು ಹೋಗಿರುವ ಕುಟುಂಬಗಳ ವಿವರವನ್ನು ಮತ್ತೊಂದು ಹಂತದ ಸಮೀಕ್ಷೆಯಿಂದ ನೋಂದಾಯಿಸುವ ಕಾರ್ಯವನ್ನು ಜಿಲ್ಲಾಡಳಿತ ಕೈಗೆತ್ತಿಕೊಂಡಿದೆ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಯಲ್ಲಿ ಸಮೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ. ಜನರು ಇಲ್ಲಿಗೆ ಧಾವಿಸಿ ಸಮೀಕ್ಷೆಗೆ ಒಳಪಡುವ ಅವಕಾಶ ನೀಡಲಾಗಿದೆ. ಮಂಗಳವಾರ ಮಹಾನಗರ ಪಾಲಿಕೆಗೆ ಧಾವಿಸಿ 10ಕ್ಕೂ ಹೆಚ್ಚು ಜನರು ಸಮೀಕ್ಷೆಗೆ ಒಳಗಾಗಿದ್ದಾರೆ.
ಸಮೀಕ್ಷೆಯಿಂದ ಯಾರೊಬ್ಬರೂ ಹೊರಗೆ ಉಳಿಯಬಾರದು ಎಂಬುದು ಸರ್ಕಾರದ ಉದ್ದೇಶ. ಸ್ವಯಂ ಪ್ರೇರಿತವಾಗಿ ಆನ್‌ಲೈನ್ ಮೂಲಕವೂ ಸಮೀಕ್ಷೆಗೆ ಒಳಪಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದಕ್ಕೂ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.
ನಗರ ಪ್ರದೇಶದ ಜನರು ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಮೂತ್ರ ವಿಸರ್ಜನೆಗೂ ಕಷ್ಟಪಡುವ ಪರಿಸ್ಥಿತಿ ಎದುರಾಗಿದೆ. ಆಲೋಚನೆ ಮಾಡಿ ನೀರು ಕುಡಿಯುತ್ತಿದ್ದೇನೆಸಮೀಕ್ಷಕಿ ದಾವಣಗೆರೆ
ಸಮೀಕ್ಷೆ ಪೂರ್ಣಗೊಳಿಸಿದರೂ ಹಂಚಿಕೆ ಮಾಡಿದ ಮನೆಗಳು ಬಾಕಿ ಇವೆ ಎಂಬುದಾಗಿ ‘ಆ್ಯಪ್’ ತೋರಿಸುತ್ತಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸುವ ಬದಲು ಒತ್ತಡ ಹೇರಲಾಗುತ್ತಿದೆಸಮೀಕ್ಷಕ ಹರಿಹರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.