ಕಡರನಾಯ್ಕನಹಳ್ಳಿ: ‘ಸಮಾಜ ಧರ್ಮದ ತಳಹದಿಯ ಮೇಲೆ ನಿಂತಿದೆ. ಧರ್ಮ ಎಂದರೆ ದಯೆ, ಪ್ರಾಮಾಣಿಕ ದುಡಿಮೆ, ಸೇವೆ. ಇದೇ ಬದುಕಾಗಬೇಕು ಎಂಬುದೇ ಸತ್ಸಂಗದ ಸಾರ’ ಎಂದು ಗುರು ಸಿದ್ದಾಶ್ರಮದ ಯೋಗಾನಂದ ಶ್ರೀ ತಿಳಿಸಿದರು.
ಸಮೀಪದ ಯಲವಟ್ಟಿ ಗ್ರಾಮದ ಗುರು ಸಿದ್ದಾಶ್ರಮದಲ್ಲಿ ಬಾದಾಮಿ ಅಮಾವಾಸ್ಯೆಯ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
‘ಆಹಾರವು ಶರೀರದ ಸ್ವಾಸ್ಥ್ಯ ಕಾಪಾಡುತ್ತದೆ. ಆದರೆ ಮಿತ ಆಹಾರ, ಮಿತ ವ್ಯಾಯಾಮದಿಂದ ಉತ್ತಮ ದೇಹಾರೋಗ್ಯ ಸಾಧ್ಯ. ತ್ಯಾಗ ಮನೋಭಾವದಿಂದ ಮನಸು ಹಗುರವಾಗುತ್ತದೆ. ಕಾಯಕ ಕಾಯಕಲ್ಪ ನೀಡುತ್ತದೆ. ಕಾಯಕದಲ್ಲೇ ದೇವರನ್ನು ಕಾಣಬೇಕು’ ಎಂದು ಅಧ್ಯಾತ್ಮ ಚಿಂತಕ ಡಿ. ಸಿದ್ದೇಶ್ ತಿಳಿಸಿದರು.
ಅಮಾವಾಸ್ಯೆ ಸತ್ಸಂಗದ ಅಂಗವಾಗಿ ಕರ್ತೃ ಗದ್ದುಗೆಗೆ ಅಭಿಷೇಕ, ವಿಶೇಷ ಪೂಜೆ, ಪೂಜಾಲಂಕಾರ ಮಾಡಲಾಗಿತ್ತು. ನಂತರ ಯೋಗಾನಂದ ಶ್ರೀಗಳ ಕಿರೀಟ ಪೂಜೆ ನಡೆಯಿತು.
ಭಕ್ತರು ಅನ್ನಸಂತರ್ಪಣೆ ವ್ಯವಸ್ಥೆ ಮಾಡಿದ್ದರು. ಶಿವಭಜನಾ ಮಂಡಳಿ ಭಜನಾ ಹಾಡುಗಳನ್ನು ಪ್ರಸ್ತುತಪಡಿಸಿತು. ಹೊಳೆ ಸಿರಿಗೆರೆ, ಯಲವಟ್ಟಿ, ಕುಂಬಳೂರು, ಜಿಗಳಿ, ಕಡರನಾಯ್ಕನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.