ADVERTISEMENT

ಮಣ್ಣು–ನೀರಿನ ರಕ್ಷಣೆಗಾಗಿ 500 ಮೀ. ತಡೆಗೋಡೆ: ಗುಡ್ಡದ ಭೂಮಿಯಲ್ಲಿ ಸಮೃದ್ಧ ಬೆಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:09 IST
Last Updated 8 ಅಕ್ಟೋಬರ್ 2025, 5:09 IST
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯ ರೈತ ಕೆ.ಎಚ್.ನಿಂಗಪ್ಪ ತಮ್ಮ ತೋಟದ ಮಣ್ಣಿನ ರಕ್ಷಣೆಗಾಗಿ ನಿರ್ಮಿಸಿರುವ 500 ಮೀಟರ್ ಉದ್ದದ ಕಲ್ಲಿನ ಗೋಡೆ
ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯ ರೈತ ಕೆ.ಎಚ್.ನಿಂಗಪ್ಪ ತಮ್ಮ ತೋಟದ ಮಣ್ಣಿನ ರಕ್ಷಣೆಗಾಗಿ ನಿರ್ಮಿಸಿರುವ 500 ಮೀಟರ್ ಉದ್ದದ ಕಲ್ಲಿನ ಗೋಡೆ   

ಬಸವಾಪಟ್ಟಣ: ಕೇವಲ ಬಂಡೆಗಳಿಂದ ಆವರಿಸಿದ್ದ ಇಳಿಜಾರಿನ ಗುಡ್ಡದ ಬದಿಯ ನಾಲ್ಕು ಎಕರೆ ಭೂಮಿಯನ್ನು ಸಮತಟ್ಟು ಮಾಡಿ, ಮಣ್ಣು ನೀರು ವ್ಯರ್ಥ ಆಗದಂತೆ ತಡೆಗೋಡೆ ನಿರ್ಮಿಸಿ ಅಡಿಕೆ ತೋಟ ಮಾಡಿರುವ ದಾಗಿನಕಟ್ಟೆಯ ರೈತ ಕೆ.ಎಚ್‌.ನಿಂಗಪ್ಪ ಅವರ ಸಾಹಸದ ಕೃಷಿ ಕಾಯಕ ಇತರ ರೈತರಿಗೆ ಆದರ್ಶ ಪ್ರಾಯವಾಗಿದೆ.

‘ನಮ್ಮ ತಂದೆಯ ಕಾಲದಲ್ಲಿ ನನಗೆ ದೊರೆತ ನಾಲ್ಕು ಎಕರೆ ಭೂಮಿ ಗುಡ್ಡದ ಇಳಿಜಾರು ಪ್ರದೇಶದಲ್ಲಿದೆ. ಅದರ ತುಂಬಾ ದೊಡ್ಡ ಬಂಡೆಗಳೇ ತುಂಬಿದ್ದವು. ಯಾವ ರೀತಿಯಲ್ಲಿಯೂ ಹೊಲದ ಉಳುಮೆ ಸಾಧ್ಯವಿರಲಿಲ್ಲ. ಅಲ್ಲದೇ ಮಳೆ ಬಂದಾಗ ಹೊಲದಲ್ಲಿರುವ ಮಣ್ಣು ಸಂಪೂರ್ಣ ಕೊಚ್ಚಿಕೊಂಡು ಹೋಗಿ ಭೂ ಸವಕಳಿ ಉಂಟಾಗುತ್ತಿತ್ತು’ ಎಂದು ತಮ್ಮ ಜಮೀನಿನ ಸ್ಥಿತಿ ವಿವರಿಸುವರು ನಿಂಗಪ್ಪ.

‘ಹೊಲದಲ್ಲಿರುವ ಬಂಡೆಗಳನ್ನು ತೆರವುಗೊಳಿಸಿದರೆ ಭೂ ಸವೆತ ತಡೆಗಟ್ಟಬಹುದೆಂದು ಗ್ರಾಮದ ಹಿರಿಯರು ಸಲಹೆ ನೀಡಿದರು. ಆದರೆ ಮಧ್ಯಮ ವರ್ಗದ ರೈತನಾದ ನನಗೆ ಅದು ಸುಲಭದ ಕಾರ್ಯವಾಗಿರಲಿಲ್ಲ. ಆದರೂ ಹಿರಿಯರ ಮಾತಿನಲ್ಲಿ ನಂಬಿಕೆ ಇಟ್ಟು ಕಾರ್ಯಾರಂಭ ಮಾಡಿದೆ. ಜೆ.ಸಿ.ಬಿ. ಯಂತ್ರಗಳನ್ನು ಬಳಸಿ ಬಂಡೆಗಳನ್ನು ತೆರವುಗೊಳಿಸುವುದು. ಆ ಬಂಡೆಗಳನ್ನು ಒಡೆದು ಅದರಿಂದಲೇ ಹೊಲದ ಕೆಳಭಾಗದಲ್ಲಿ ಗೋಡೆ ನಿರ್ಮಿಸುವುದಕ್ಕೆ ಭಾರೀ ಪ್ರಮಾಣದ ಹಣದ ಅವಶ್ಯಕತೆ ಇತ್ತು’.

ADVERTISEMENT

‘ಬ್ಯಾಂಕ್‌ಗಳು, ಸಹಕಾರ ಸಂಘಗಳು ಫಸಲು ಬೆಳೆಯಲು ಸಾಲ ನೀಡುತ್ತವೆ. ಹೊಲವನ್ನು ಸಮತಟ್ಟು ಮಾಡಲು ಸಾಲ ಕೊಡುವುದಿಲ್ಲ. ಆದರೂ ಹಿಡಿದ ಪ್ರಯತ್ನ ಬಿಡದೇ 2019– 20ರಲ್ಲಿ ₹ 24 ಲಕ್ಷ ವೆಚ್ಚದಲ್ಲಿ ಬಂಡೆಗಳನ್ನು ತೆರವುಗೊಳಿಸಿ, ಹೊಲವನ್ನು ಸಮತಟ್ಟು ಮಾಡಿ, 500 ಮೀಟರ್‌ ಉದ್ದ, ಐದು ಅಡಿ ಎತ್ತರ ಮತ್ತು ಒಂದು ಮೀಟರ್‌ ಅಗಲದ ಕಲ್ಲಿನ ಗೋಡೆ ನಿರ್ಮಿಸಿ, ಮಣ್ಣು ಮತ್ತು ನೀರು ಕೊಚ್ಚಿಹೋಗದಂತೆ ತಡೆದು ಹೊಲವನ್ನು ಸಿದ್ಧಪಡಿಸಿದೆ’ ಎಂದು ಆತ್ಮವಿಶ್ವಾಸದ ನಗೆ ಬೀರಿದರು.

‘ಹೊಲದ ಇನ್ನೊಂದು ಭಾಗದಲ್ಲಿ 18 ಅಡಿ ಎತ್ತರದ ಕಲ್ಲಿನ ಗೋಡೆ ಕಟ್ಟಿ ಮಣ್ಣು ನೀರನ್ನು ತಡೆಯುವ ಕೆಲಸ ಮಾಡಿದ್ದೇನೆ. ವಿದ್ಯುತ್‌ ಸಂಪರ್ಕ ಪಡೆದು ನೀರಿನ ಸರಬರಾಜು ಮಾಡಿದ್ದು, ನಂತರ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದೇನೆ. ಕೃಷಿ ಇಲಾಖೆಯ ನೆರವಿನಿಂದ ಕೃಷಿ ಹೊಂಡವನ್ನು ನಿರ್ಮಿಸಿಕೊಂಡಿದ್ದು, ಸತತವಾಗಿ ನೀರು ಹಾಯಿಸುತ್ತಿದ್ದೇನೆ. ಅಡಿಕೆ ಗಿಡಗಳು ಈಗ ಕಾಯಿ ಬಿಡಲಾರಂಭಿಸಿವೆ. ಅಡಿಕೆಯೊಂದಿಗೆ ತೋಟದ ಸುತ್ತಲೂ ತೆಂಗು, ಮಾವು, ಪೇರಲೆ, ತೇಗ ಮತ್ತು ಮಹಾಗನಿ ಗಿಡಗಳನ್ನು ಸಹ ಹಾಕಿದ್ದು, ಸ್ವಲ್ಪಭಾಗದಲ್ಲಿ ಏಲಕ್ಕಿ ಗಿಡಗಳನ್ನೂ ಬೆಳೆಸಿದ್ದೇನೆ. ಈ ಎಲ್ಲ ಗಿಡಗಳೂ ಚೆನ್ನಾಗಿ ಬೆಳೆಯುತ್ತಿವೆ. ಅಲ್ಲದೇ ಮೂರು ವರ್ಷಗಳ ಅಡಿಕೆ ಗಿಡಗಳ ಮಧ್ಯದಲ್ಲಿ ತೊಗರಿ ಬೆಳೆಯನ್ನೂ ಬೆಳೆದಿದ್ದೇನೆ’ ಎಂದು ಮಾಹಿತಿ ನೀಡಿದರು.

ಬಸವಾಪಟ್ಟಣ ಸಮೀಪದ ದಾಗಿನಕಟ್ಟೆಯ ರೈತ ಕೆ.ಎಚ್.ನಿಂಗಪ್ಪ ಅಡಿಕೆ ಫಸಲಿನೊಂದಿಗೆ
ತೋಟದ ಅಂಚಿನಲ್ಲಿ ಬೆಳೆಸಿರುವ ಗ್ಲೀರಿಸೀಡಿಯ ಗೊಬ್ಬರದ ಗಿಡಗಳು
ಸೌರಭ್‌ ಸಹಾಯಕ ಕೃಷಿ ಅಧಿಕಾರಿ
ದೊಡ್ಡ ಪ್ರಮಾಣದ ಕಾರ್ಯ ಕೈಗೊಂಡು ಯಶಸ್ವಿಯಾಗಿದ್ದಾರೆ. ಕೃಷಿ ಇಲಾಖೆಯಿಂದ ಅವರಿಗೆ ಪ್ರಸಕ್ತ ವರ್ಷ ಆತ್ಮ ಯೋಜನೆಯ ಅಡಿಯಲ್ಲಿ ತಾಲ್ಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನೀಡಲಾಗಿದೆ
ಎನ್‌.ಲತಾ, ಕೃಷಿ ಅಧಿಕಾರಿ ಬಸವಾಪಟ್ಟಣ
50 ವರ್ಷದ ನಿಂಗಪ್ಪ ಉತ್ಸಾಹಿ ರೈತರಾಗಿದ್ದು ತೋಟದ ಬೆಳೆಗಳು ಅವುಗಳ ಪಾಲನೆ ಪೋಷಣೆ ಬಗ್ಗೆ ಆಗಾಗ ಮಾರ್ಗದರ್ಶನ ನೀಡುತ್ತಿದ್ದೇವೆ
ಸೌರಭ್‌ ಸಹಾಯಕ ಕೃಷಿ ಅಧಿಕಾರಿ
ಸಾವಯವ ಕೃಷಿಯನ್ನು ಅವಲಂಬಿಸಿದ್ದು ಹಸುಗಳ ಗಂಜಲ ಸಗಣಿ ಬೆಲ್ಲ ಮತ್ತು ಕಡಲೆ ಹಿಟ್ಟು ಬಳಸಿ ಜೀವಾಮೃತ ತಯಾರಿಸಿ ಗಿಡಗಳಿಗೆ ನಿರಂತರವಾಗಿ ಹಾಕುತ್ತಿದ್ದೇನೆ. ಅಲ್ಲದೇ ತೋಟದ ಸುತ್ತಲೂ ಗ್ಲೀರಿಸೀಡಿಯ ಎಂಬ ಗೊಬ್ಬರದ ಗಿಡಗಳನ್ನು ಬೆಳೆಸಿದ್ದು ಎರಡು ತಿಂಗಳಿಗೊಮ್ಮೆ ಕತ್ತರಿಸಿ ಗಿಡಗಳ ಬದಿಗೆ ಅದರ ಸೊಪ್ಪನ್ನು ಹಾಕುತ್ತಿದ್ದೇನೆ. ಒಮ್ಮೆಯೂ ರಾಸಾಯನಿಕ ಗೊಬ್ಬರ ಬಳಕೆ ಮಾಡಿಲ್ಲ. ಕೃಷಿ ಇಲಾಖೆಯು ಸಮಗ್ರ ಕೃಷಿಗೆ ಅನುವಾಗಲು ₹ 60000 ಪ್ರೋತ್ಸಾಹ ಧನ ಮತ್ತು ತೋಟದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲು ₹ 45000 ಸಹಾಯ ಧನ ನೀಡಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿ ಸೂಕ್ತ ಸಲಹೆ ಸಹಕಾರ ನೀಡುತ್ತಿದ್ದಾರೆ.
ನಿಂಗಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.