ADVERTISEMENT

‘ಸೋಮೇಶ್ವರೋತ್ಸವ’ದಲ್ಲಿ ಎಸ್‌ಪಿಬಿ ಗಾಯನ

ನಾಳೆಯಿಂದ ಮೂರು ದಿವಸ ವಿವಿಧ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 10:50 IST
Last Updated 9 ಜನವರಿ 2020, 10:50 IST
ಎಸ್‌.ಪಿ.ಬಾಲಸುಬ್ರಹ್ಮಣ್ಯಂ
ಎಸ್‌.ಪಿ.ಬಾಲಸುಬ್ರಹ್ಮಣ್ಯಂ   

ದಾವಣಗೆರೆ: ಇಲ್ಲಿನ ಸೋಮೇಶ್ವರ ವಿದ್ಯಾಲಯದಲ್ಲಿ ಜ.10ರಿಂದ 12ರವರೆಗೆ ‘ಸೋಮೇಶ್ವರೋತ್ಸವ–2020’ ಕಾರ್ಯಕ್ರಮ ನಡೆಯಲಿದ್ದು, ಜ.12ರಂದು ನಡೆಯುವ ಸಂಗೀತೋತ್ಸವದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಂ.ಡಿ. ಪಲ್ಲವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಸೋಮೇಶ್ವರ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕೆ.ಎಂ. ಸುರೇಶ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.10ರಂದು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ.ಭೀಮೇಶ್ವರ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ. ಎಚ್. ಶಿವಯೋಗಿ ಸ್ವಾಮಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಪಾಲ್ಗೊಳ್ಳುವರು’ ಎಂದು ಹೇಳಿದರು.

ವೀರಶೈವ–ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಎನ್‌.ಇ. ನಟರಾಜ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ, ಪತ್ರಿಕೋದ್ಯಮ ವಿಭಾಗದ ರ‍್ಯಾಂಕ್ ವಿಜೇತೆ ಕೆ.ಎಂ. ನಂದಿನಿ ಅವರಿಗೆ ‘ಸೋಮೇಶ್ವರ ಸಿರಿ’ ಗೌರವ ಪ್ರದಾನ ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

ಜ.11ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಡಾ.ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಉಪನ್ಯಾಸ ನೀಡುವರು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ 2018ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವರು ಎಂದು ಮಾಹಿತಿ ನೀಡಿದರು.

‘ಶ್ರೀಸತ್ಯ ಸಾಯಿ ವಿದ್ಯಾನಿಕೇತನ ಸಂಸ್ಥೆಯ ಮುಖ್ಯ ಶಿಕ್ಷಕ ಜಗನ್ನಾಥ ನಾಡಿಗೇರ್ ಅವರಿಗೆ ‘ಶಿಕ್ಷಣ ಸಿರಿ’ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ತೇಜಸ್ವಿನಿ ಪವಾರ್ ಅವರಿಗೆ ₹25 ಸಾವಿರ ನಗದು ಪುರಸ್ಕಾರ ನೀಡಲಾಗುವುದು’ ಎಂದು ಹೇಳಿದರು.

‘ಜ.12ರಂದು ನಡೆಯುವ ಸಂಗೀತೋತ್ಸವ ನಡೆಯಲಿದ್ದು, ಜಗಳೂರು ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ಎಸ್.ಎ. ರವೀಂದ್ರನಾಥ್ ಉದ್ಘಾಟಿಸುವರು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಶಿಕ್ಷಕಿ ಗಾಯತ್ರಿ, ಪ್ರಾಂಶುಪಾಲರಾದ ಪ್ರಭಾವತಿ, ಹರೀಶ್‌ಬಾಬು, ಪ್ರಭಾಕರ್ ಎಚ್‌.ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.