ADVERTISEMENT

ದೇಶದ ಮಣ್ಣಿನಲ್ಲಿದೆ ಅಧ್ಯಾತ್ಮಿಕ ಶಕ್ತಿ: ಕಲ್ಲಡ್ಕ ಪ್ರಭಾಕರ ಭಟ್ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 2:14 IST
Last Updated 7 ಸೆಪ್ಟೆಂಬರ್ 2025, 2:14 IST
<div class="paragraphs"><p> ಕಲ್ಲಡ್ಕ ಪ್ರಭಾಕರ ಭಟ್</p></div>

ಕಲ್ಲಡ್ಕ ಪ್ರಭಾಕರ ಭಟ್

   

ದಾವಣಗೆರೆ: ಭಾರತದ ಮಣ್ಣಿಗೆ ಅಧ್ಯಾತ್ಮಿಕ ಶಕ್ತಿ, ತಾಯಿಯ ಗುಣ ಇದೆ. ಕಲ್ಲು, ನದಿಯ ನೀರಿನಲ್ಲೂ ದೇವರನ್ನು ಕಾಣುವ ದೇಶ ನಮ್ಮದಾಗಿದೆ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅಭಿಪ್ರಾಯಪಟ್ಟರು. 

ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವತಿಯಿಂದ ಶನಿವಾರ ಆಯೋಜಿಸಿದ್ದ ರಾಣಿ ಅಬ್ಬಕ್ಕ ಜೀವನಗಾಥೆಯನ್ನು ತಿಳಿಸುವ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ADVERTISEMENT

ನದಿಗಳನ್ನು ತಾಯಿಯಂತೆ ಕಂಡು ಪೂಜಿಸುತ್ತೇವೆ. ಹಸುಗಳನ್ನು ಗೋಮಾತೆ ಎಂದು ಗೌರವಿಸುತ್ತೇವೆ. ಆದರೆ, ಈಚೆಗೆ ಪಾಶ್ಚಾತ್ಯ ಪದ್ಧತಿಯಿಂದ ಈ ನೆಲದ ಮೌಲ್ಯಗಳು ಮರೆಯಾಗುತ್ತಿವೆ ಎಂದು ಬೇಸರಿಸಿದರು. 

ವಸಾಹತುಶಾಹಿ ವಿರುದ್ಧ ಹೋರಾಡಿದ ಜಗತ್ತಿನ ಮೊದಲ ಮಹಿಳೆ ವೀರ ರಾಣಿ ಅಬ್ಬಕ್ಕ. ಅಂತಹ ಆದರ್ಶ ಮಹಿಳೆಯನ್ನು ಅನುಸರಿಸಬೇಕಾದ ದೇಶದ ನವ ಪೀಳಿಗೆಯು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವುದು ಸರಿಯಲ್ಲ ಎಂದರು.  

ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ಬದುಕುವ ಸನ್ಯಾಸಿ ಪರಂಪರೆ ಈ ದೇಶದ್ದು. ಈ ಪರಂಪರೆಯನ್ನು ನೆನಪಿಸುವುದೇ ಈ ರಥಯಾತ್ರೆಯ ಉದ್ದೇಶವಾಗಿದೆ. ರಥಯಾತ್ರೆಯು ಚಿತ್ರದುರ್ಗ, ತುಮಕೂರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಮಾರ್ಗವಾಗಿ ಮಂಗಳೂರು ತಲುಪಲಿದೆ. ಮತ್ತೊಂದು ರಥಯಾತ್ರೆ ಬೆಂಗಳೂರಿನಿಂದ ಹೊರಟು ಕೊಡಗು ಮಾರ್ಗವಾಗಿ ಮಂಗಳೂರು ತಲುಪಲಿದೆ’ ಎಂದು ತಿಳಿಸಿದರು. 

‘ಆರ್‌ಎಸ್‌ಎಸ್‌ಗೆ 100 ವರ್ಷ ತುಂಬಿದ ಪ್ರಯುಕ್ತ ಪಂಚ ಪರಿವರ್ತನೆ ಅಂಶಗಳನ್ನು ಪ್ರಚುರಪಡಿಸಲಾಗುತ್ತಿದೆ. ಜಾತಿ ಆಧಾರದ ಮೇಲೆ ತಾರತಮ್ಯ ಮಾಡದಿರುವುದು, ಕುಟುಂಬ ವ್ಯವಸ್ಥೆ ನಶಿಸದಂತೆ ತಡೆಯುವುದು, ಪರಿಸರ ಉಳಿಸಿ, ಬೆಳೆಸುವುದು, ನಾಗರಿಕ ಶಿಷ್ಟಾಚಾರ ಪಾಲಿಸುವುದು ಹಾಗೂ ಸ್ವದೇಶಿ ಚಿಂತನೆ ಅಳವಡಿಸಿಕೊಳ್ಳುವಂತೆ ತಿಳಿಸಲಾಗುತ್ತಿದೆ’ ಎಂದು ಹೇಳಿದರು. 

ಪದ್ಮಶ್ರೀ ಪುರಸ್ಕೃತೆ, ಕ್ಯಾನ್ಸರ್‌ ತಜ್ಞೆ ವಿಜಯಲಕ್ಷ್ಮಿ ದೇಶಮಾನೆ, ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಕಮಲೇಶ್ ಮಾತನಾಡಿದರು. ಎಬಿವಿಪಿ ಸಂಘಟನೆಯ ಪ್ರಮುಖರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.