
ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿ ನಾಲ್ಕು ಜಿಂಕೆ ಸಾವು
ದಾವಣಗೆರೆ: ತಾಲ್ಲೂಕಿನ ಇಂದಿರಾ ಪ್ರಿಯದರ್ಶಿನಿ ಕಿರು ಮೃಗಾಲಯದಲ್ಲಿನ ನಾಲ್ಕು ಜಿಂಕೆಗಳ ಸಾವಿಗೆ ‘ಹೆಮರಾಜಿಕ್ ಸೆಪ್ಟಿಸೆಮಿಯಾ’ ಸಾಂಕ್ರಾಮಿಕ ಕಾಯಿಲೆ ಕಾರಣ ಎಂಬುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ.
ಜ.16ರಿಂದ ಜ.18ರ ಮೂರು ದಿನಗಳಲ್ಲಿ ನಾಲ್ಕು ಚುಕ್ಕೆ ಜಿಂಕೆಗಳು ಮೃತಪಟ್ಟಿದ್ದವು. ಮೃತ ಜಿಂಕೆಗಳ ದೇಹದ ಮಾದರಿಗಳನ್ನು ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಪ್ರಯೋಗಾಲಯದ ವರದಿ ಬುಧವಾರ ಅರಣ್ಯ ಇಲಾಖೆಯ ಅಧಿಕಾರಿಗಳ ಕೈಸೇರಿದೆ.
‘ಮೃಗಾಲಯದ ಜಿಂಕೆಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿವೆ ಎಂಬುದು ಪ್ರಯೋಗಾಲಯದ ವರದಿಯಿಂದ ಖಚಿತವಾಗಿದೆ. ರೋಗಲಕ್ಷಣಗಳನ್ನು ಗಮನಿಸಿ ಉಳಿದ ಜಿಂಕೆಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ಮುಂದುವರಿಸಲಾಗುತ್ತಿದೆ. ಪಶು ವೈದ್ಯಕೀಯ ತಂಡ ಮೃಗಾಲಯದಲ್ಲಿ ಬೀಡುಬಿಟ್ಟಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಎನ್. ಹರ್ಷವರ್ಧನ್ ತಿಳಿಸಿದ್ದಾರೆ.
ಈ ನಡುವೆ ಮೃಗಾಲಯದ ವನ್ಯಜೀವಿಗಳಿಗೆ ನೀಡುತ್ತಿರುವ ನೀರು ಮತ್ತು ಆಹಾರ ಸುರಕ್ಷಿತವಾಗಿದೆ ಎಂಬುದು ಪ್ರಯೋಗಾಲಯದ ವರದಿಯಲ್ಲಿ ಖಚಿತವಾಗಿದೆ. ಜಿಂಕೆಗಳ ಮೃತದೇಹದ ಜೊತೆಗೆ ಮೃಗಾಲಯದ ವನ್ಯಜೀವಿಗಳಿಗೆ ನೀಡುತ್ತಿದ್ದ ನೀರು ಹಾಗೂ ಆಹಾರದ ಮಾದರಿಗಳನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.