ದಾವಣಗೆರೆ: ‘ಕರಾವಳಿಯಲ್ಲಿ ನಡೆಯುತ್ತಿರುವ ಕೋಮುಗಲಭೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಕೋಮು ಪ್ರಚೋದನೆ ನಿಗ್ರಹಿಸುವ ಹೆಸರಿನಲ್ಲಿ ಸಂಘ ಪರಿವಾರದ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ‘ವಿಶೇಷ ಕಾರ್ಯಪಡೆ’ ರಚಿಸಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
‘ಕೋಮು ಸಂಘರ್ಷ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ದ್ವಿಮುಖ ನೀತಿಯಿಂದ ಗಲಭೆಗಳು ಸೃಷ್ಟಿಯಾಗುತ್ತಿವೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಡೆದುಕೊಂಡ ರೀತಿ ಸರಿಯಿಲ್ಲ. ಸುಹಾಸ್ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಹಿಂದೂಗಳ ಸಭೆ ಕರೆಯುವ ಬದಲು ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿ ತಾರತಮ್ಯ ನೀತಿ ಅನುಸರಿಸಿದ್ದಾರೆ’ ಎಂದು ದೂರಿದರು.
‘ಗೃಹ ಸಚಿವ ಜಿ. ಪರಮೇಶ್ವರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆದಿದೆ. ಈ ಆದೇಶವನ್ನು ರದ್ದುಪಡಿಸುವ ಮೂಲಕ ಹೈಕೋರ್ಟ್ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ’ ಎಂದು ಹೇಳಿದರು.
‘ಕನ್ನಡಕ್ಕೆ ಅವಮಾನ ಮಾಡಿದ ನಟ ಕಮಲ್ ಹಾಸನ್ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಕಮಲ್ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಮೌನವಾಗಿದೆ. ಕನ್ನಡಿಗರ ಕ್ಷಮೆ ಕೇಳದ ಕಮಲ್ ಹಾಸನ್ ವಿರುದ್ಧ ರಾಜ್ಯ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.