ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ: ಜೀವಜಲದ ಪೋಲು

ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಕೋಟ್ಯಂತರ ರೂಪಾಯಿಯ ಜಲಸಿರಿ ಯೋಜನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 5:17 IST
Last Updated 11 ಜುಲೈ 2021, 5:17 IST
ಹರಿಹರದ ಮಹಾತ್ಮ ಗಾಂಧಿ ಕೊಳೆಗೇರಿ ಪ್ರದೇಶದ ಬಳಿಯ ನೀರಿನ ಟ್ಯಾಂಕ್‍ನಿಂದ ಹರಿದು ಬರುತ್ತಿರುವ ಜಲರಾಶಿ.
ಹರಿಹರದ ಮಹಾತ್ಮ ಗಾಂಧಿ ಕೊಳೆಗೇರಿ ಪ್ರದೇಶದ ಬಳಿಯ ನೀರಿನ ಟ್ಯಾಂಕ್‍ನಿಂದ ಹರಿದು ಬರುತ್ತಿರುವ ಜಲರಾಶಿ.   

ಹರಿಹರ: ಜಲಸಿರಿ ಯೋಜನೆಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ನಗರದ ಒಂದು ಭಾಗದಲ್ಲಿ ಲಕ್ಷಾಂತರ ಲೀಟರ್‍ ಜೀವಜಲ ಪೋಲಾಗುಗುತ್ತಿದ್ದರೆ, ಮತ್ತೊಂದು ಭಾಗದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ.

ನಗರದ ಮಹಾತ್ಮ ಗಾಂಧಿ ಕೊಳೆಗೇರಿ ಪ್ರದೇಶದ 5 ಲಕ್ಷ ಲೀಟರ್‍ ಸಾಮರ್ಥ್ಯದ ಓವರ್‍ ಹೆಡ್‍ ಟ್ಯಾಂಕ್‍ಗೆ ಹೆಚ್ಚುವರಿ ನೀರು ಹರಿಸುವುದರಿಂದ ಟ್ಯಾಂಕ್‍ ತುಂಬಿ ನಿತ್ಯ ಲಕ್ಷಾಂತರ ಲೀಟರ್ ‍ನೀರು ಅಪವ್ಯಯವಾಗುತ್ತಿದೆ. ಭಾರತ್‍ ಆಯಿಲ್‍ ಮಿಲ್‍ ಕಾಂಪೌಂಡ್‍, ಬಾತಿ ಶಿವನಾಗಪ್ಪ ಕಾಂಪೌಂಡ್‍ ಹಾಗೂ ಅವಲಕ್ಕೆ ಬಡಾವಣೆಯ ಪ್ರದೇಶಗಳಿಗೆ ನೀರು ಸರಬರಾಜಾಗದೆ ಜನ ಪರದಾಡುವಂತಾಗಿದೆ.

ನಗರಸಭೆ ಸದಸ್ಯ ದಾದಾ ಖಲಂದರ್‍ ಮಾತನಾಡಿ, ನಗರದ 25ನೇ ವಾರ್ಡ್‌ಗೆ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್‍ ಕಳೆದ 3-4 ತಿಂಗಳಿನಿಂದ ತುಂಬಿ ಹರಿಯುತ್ತಿದೆ. ಟ್ಯಾಂಕ್‍ನಿಂದ ಬೀಳುವ ನೀರು ಶುದ್ಧ ಕುಡಿಯುವ ನೀರಿನ ಘಟಕದ ಚಾವಣಿ ಮೇಲೆ ಬೀಳುವುದರಿಂದ ಘಟಕ ಕುಸಿಯುವ ಆತಂಕ ಸೃಷ್ಟಿಯಾಗಿದೆ ಎಂದು ದೂರಿದರು.

ADVERTISEMENT

ಈ ಬಗ್ಗೆ ನಗರಸಭೆ ಹಾಗೂ ಜಲಸಿರಿ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ, ಕ್ರಮ ಜರುಗಿಸಿಲ್ಲ. ಅಪವ್ಯಯವಾಗುವ ನೀರನ್ನು ಅಗತ್ಯ
ವಿರುವ ಪ್ರದೇಶಕ್ಕೆ ಸರಬರಾಜು ಮಾಡುವ ಮೂಲಕ ನೀರು ಪೋಲಾಗದಂತೆ ತಡೆಬೇಕು ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಎಚ್‍.ಎಸ್‍. ರಾಘವೇಂದ್ರ, ‘ನಮ್ಮ ಭಾಗದಲ್ಲಿ ಕಳೆದೆರಡು ತಿಂಗಳುಗನಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಜಲಸಿರಿ ಪೈಪ್‍ಲೈನ್‍ ಅಳವಡಿಕೆಯಾಗಿದೆ. ಆದರೂ, ಸಮರ್ಪಕವಾಗಿ ನೀರು ಸಿಗದೆ ಪರದಾಡುವಂತಾಗಿದೆ’ ಎಂದು ದೂರಿದರು.

ನಗರಸಭೆ ಎಂಜಿನಿಯರ್‍ ಮಂಜುನಾಥ್‍, ‘ನಗರದ ನೀರು ಸರಬರಾಜು ವ್ಯವಸ್ಥೆಯನ್ನು ಜಲಸಿರಿ ಯೋಜನೆ ನಿರ್ವಹಿಸುತ್ತಿರುವ ಕೆಯುಐಡಿಎಫ್‍ಸಿಗೆ ವರ್ಗಾಯಿಸಲಾಗಿದೆ. ನಿರ್ವಹಣೆಯನ್ನು ವಿಯೋಲಿಯಾ ಸಂಸ್ಥೆಗೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ಜಲಸಿರಿ ಯೋಜನೆ ನಿರ್ವಹಿಸುತ್ತಿರುವ ವಿಯೋಲಿಯಾ ಸಂಸ್ಥೆಯ ಅಧಿಕಾರಿ ಪ್ರವೀಣ್‍ ಕೋಟಾ ಮಾತನಾಡಿ, ‘ನೀರು ಶುದ್ಧೀರಣದ ನಿರ್ವಹಣೆಯ ಗುತ್ತಿಗೆ ಪಡೆದಿರುವ ಚೇತನ್‍ ಸುರಾ ಸಂಸ್ಥೆಯವರು ನೀರು ನಿಯಂತ್ರಣ ವಾಲ್‍ಗಳನ್ನು ತೆಗೆದಿರುವ ಕಾರಣ ಹಾಗೂ ಟ್ಯಾಂಕ್ ಸಾಮರ್ಥ್ಯ ಕಡಿಮೆ ಇರುವ ಕಾರಣ ನೀರು ಪೋಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಟ್ಯಾಂಕ್‍ಗಳಿಗೆ ನೀರು ಹಾಯಿಸುವ ಪೈಪ್‍ಗಳಿಗೆ ಸ್ವಯಂ ನಿಯಂತ್ರಿತ ವಾಲ್‍ಗಳನ್ನು ಅಳವಡಿಸಿದ್ದು, ಟ್ಯಾಂಕ್‍ ಭರ್ತಿಯಾದ ಕೂಡಲೇ ನೀರಿನ ಸರಬರಾಜು ನಿಲ್ಲುತ್ತದೆ. ವಾಲ್‍ಗಳ ಅಳವಡಿಕೆ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕೋಟ್‌ಗಳು...

ಟ್ಯಾಂಕ್‍ನಿಂದ ಹೊರ ಬರುವ ನೀರು ರಭಸವಾಗಿ ಹರಿಯುತ್ತದೆ. ಚಿಕ್ಕ ಮಕ್ಕಳು ಕುತೂಹಲದಿಂದ ನೀರಿನಲ್ಲಿ ಆಟವಾಡಲು ಹೋದಾಗ ಅಪಾಯ ಸಂಭವಿಸುವ ಸಾಧ್ಯತೆಗಳಿವೆ.

ದಾದಾ ಖಲಂದರ್‍, ನಗರಸಭೆ ಸದಸ್ಯ, ಹರಿಹರ

ನಗರದ ಒಂದು ಭಾಗದಲ್ಲಿ ನೀರು ಅಪವ್ಯಯವಾಗುತ್ತಿದೆ. ನಮ್ಮ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಎಚ್‍.ಎಸ್‍. ರಾಘವೇಂದ್ರ, ನಾಮ ನಿರ್ದೇಶಿತ ಸದಸ್ಯ, ನಗರಸಭೆ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.