ADVERTISEMENT

ಹರಿಹರ | ಬೀದಿ ದೀಪಗಳಿಲ್ಲದ ಕತ್ತಲೆ ಸಾಮ್ರಾಜ್ಯ..!

ಪಾದಚಾರಿಗಳಿಗೆ, ಸಂಚಾರ ಕಷ್ಟ: ಅಪರಾಧ ಚಟುವಟಿಕೆಗೆ ಇಂಬು

ಇನಾಯತ್ ಉಲ್ಲಾ ಟಿ.
Published 18 ಅಕ್ಟೋಬರ್ 2025, 7:21 IST
Last Updated 18 ಅಕ್ಟೋಬರ್ 2025, 7:21 IST
ಹರಿಹರದ ಅಮರಾವತಿ ಬಳಿಯ ಮೇಲ್ಸೇತುವೆ ಬಳಿಯ ಬೀದಿ ದೀಪಗಳಲ್ಲಿ ಕೆಲವು ಬೆಳಗದೇ ಸ್ಥಗಿತಗೊಂಡಿರುವುದು
ಹರಿಹರದ ಅಮರಾವತಿ ಬಳಿಯ ಮೇಲ್ಸೇತುವೆ ಬಳಿಯ ಬೀದಿ ದೀಪಗಳಲ್ಲಿ ಕೆಲವು ಬೆಳಗದೇ ಸ್ಥಗಿತಗೊಂಡಿರುವುದು   

ಹರಿಹರ: ನಗರದ ಪ್ರಮುಖ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೇ ಕತ್ತಲೆ ಸಾಮ್ರಾಜ್ಯದ ದರ್ಶನವಾಗುತ್ತಿದೆ. ನಗರಸಭೆಯಿಂದ ಬೀದಿ ದೀಪಗಳ ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ ಎಂದು ಜನರು ಬೇಸರ ವ್ಯಕ್ತಪಡಿಸುವಂತಾಗಿದೆ.

ನಗರಕ್ಕೆ ಅಂಟಿಕೊಂಡಿರುವ ತುಂಗಭದ್ರಾ ನದಿಯ ಹೊಸ ಸೇತುವೆಯಾಗಲಿ ಪಕ್ಕದಲ್ಲಿರುವ ಹಳೆ ಸೇತುವೆ ಮೇಲಾಗಲಿ ಇರುವ ದೀಪಗಳಲ್ಲಿ ಒಂದೂ ಬೆಳಗುತ್ತಿಲ್ಲ. ಹೊಸ ಸೇತುವೆ ಮೇಲೆ ಸಂಚಾರ ಆರಂಭವಾದಾಗ 2 ವರ್ಷ ದೀಪಗಳು ಬೆಳಗುತ್ತಿದ್ದವು. ಆದರೆ,  1 ವರ್ಷದಿಂದ ಈ ಎರಡೂ ಸೇತುವೆಗಳ ಮೇಲಿನ ಅಂದಾಜು 50ಕ್ಕೂ ಹೆಚ್ಚು ದೀಪಗಳು ಉರಿಯುತ್ತಿಲ್ಲ. ವಾಹನಗಳು ಬಂದಾಗ ಬಂದ ಬೆಳಕು ಮಿಂಚಿನಂತೆ ಮಾಯವಾಗುತ್ತದೆ. ಹೀಗಾಗಿ ರಾತ್ರಿಯಾದೊಡನೆಯೇ ಎರಡೂ ಸೇತುವೆಗಳು ಕಗ್ಗತ್ತಲಲ್ಲಿ ಮುಳುಗುತ್ತವೆ.

ದಾವಣಗೆರೆ ಮಾರ್ಗದ ಅಮರಾವತಿ ಬಳಿಯ ರೈಲ್ವೆ  ಮೇಲ್ಸೇತುವೆ ಹಾಗೂ ಅದರ ಇಕ್ಕೆಲಗಳಲ್ಲಿರುವ ಸರ್ವಿಸ್ ರಸ್ತೆಗಳು ಕೂಡ ಕತ್ತಲುಮಯವಾಗಿವೆ.

ADVERTISEMENT

ಹಳೆ ಪಿ.ಬಿ.ರಸ್ತೆ ಮತ್ತು ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿಗಳು ಕೂಡುವ ನಗರದ ಮಧ್ಯಭಾಗದ ಗಾಂಧಿ ವೃತ್ತದಲ್ಲೂ ಬೀದಿ ದೀಪಗಳ ಕೊರತೆ ಇದೆ. ಈ ವೃತ್ತದ ಒಂದು ಬದಿಯಲ್ಲಿ ಹೈಮಾಸ್ಟ್ ದೀಪದ ವ್ಯವಸ್ಥೆ ಇದೆ. ಆದರೆ ಅದರ ಬೆಳಕು ಸರ್ಕಲ್‌ನ ಒಂದು ಮೂಲೆಗೆ ಸೀಮಿತವಾಗಿದ್ದು, ಉಳಿದ 3 ಮೂಲೆಗಳು ಕತ್ತಲಲ್ಲಿವೆ.

ನಗರದ ಹೊರವಲಯದ ಕೆ.ಎಚ್.ಬಿ. ಕಾಲೊನಿ, ಅಮರಾವತಿ ಕಾಲೊನಿ, ಜೈಭೀಮ ನಗರ, ಅಮರಾವತಿ, ಚಿಂತಾಮಣಿ ನಗರ, ಹರ್ಲಾಪುರ, ಆಶ್ರಯ ಕಾಲೊನಿ, ಗುತ್ತೂರು ಕಾಲೊನಿ, ಗುತ್ತೂರು, ದಾವಣಗೆರೆ ಮಾರ್ಗದ ಹಳೆ ಪಿ.ಬಿ.ರಸ್ತೆ, ಹೊಸ ಜೋಡಿ ರಸ್ತೆ, ವಿದ್ಯಾನಗರ ಸೇರಿದಂತೆ ನಗರದೊಳಗಿನ ಹಲವು ಬಡಾವಣೆಗಳಲ್ಲೂ ಬೀದಿದೀಪಗಳ ನಿರ್ವಹಣೆ ಹಳಿ ತಪ್ಪಿದೆ.

ಭಯದ ಸ್ಥಿತಿ:

ಬೆಳಗಿನ ಜಾವ ಮತ್ತು ಸಂಜೆ ವಾಯು ವಿಹಾರಿಗಳು ನದಿಯ ಕಡೆಗೆ ಅಥವಾ ಹೊರ ವಲಯಕ್ಕೆ ಹೊರಟರೆ ಕತ್ತಲೆ ಸಾಮ್ರಾಜ್ಯ ಕಾಡುತ್ತದೆ. ಹೋಟೆಲ್, ಅಂಗಡಿಗಳಲ್ಲಿನ ಕಾರ್ಮಿಕರು ತಮ್ಮ ಮನೆಗೆ ತೆರಳಲು ಸೈಕಲ್ ಅಥವಾ ನಡೆದುಕೊಂಡು ಹೋಗುತ್ತಾರೆ. ಮನೆ ಸಮೀಪಿಸುವವರೆಗೂ ಭಯದಲ್ಲಿ ಹೋಗುವಂತಾಗಿದೆ ಎಂದು ತಮಗಾದ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಸಿಇಟಿ, ನೀಟ್‌ ವಿದ್ಯಾರ್ಥಿಗಳು ಹಾಗೂ ಪದವಿ ವಿದ್ಯಾರ್ಥಿಗಳು ಮನೆ ಪಾಠಕ್ಕೆ ಬೆಳಗಿನ ಜಾವ ಅಥವಾ ಸಂಜೆಯ ನಂತರ ಹೋಗಿ ಬರಲು ಕತ್ತಲೆಯಲ್ಲಿ ಸಮಸ್ಯೆಯಾಗುತ್ತಿದೆ. ಕನಿಷ್ಠ ಬೈಕ್ ಇರುವವರು ಮಾತ್ರ ಇಲ್ಲಿ ಸಂಚರಿಸಬಹುದು. ಉಳಿದವರ ಸಮಸ್ಯೆ ಹೇಳಿದರೂ ಕೇಳುವವರಿಲ್ಲದಾಗಿದೆ.

ಹೆಚ್ಚು ವಿದ್ಯುತ್ ಬೇಡುವ ಬೀದಿ ದೀಪಗಳನ್ನು ಎಲ್.ಇ.ಡಿ. ದೀಪಗಳಾಗಿ ಪರಿವರ್ತಿಸುವ ಕಾರ್ಯ ಸಿಸಿಎಂಎಸ್ ಎಂಬ ಸಂಸ್ಥೆಗೆ ವಹಿಸಲಾಗಿದೆ. ಆದರೆ ಆ ಕಾರ್ಯ ಪರಿಪೂರ್ಣವಾಗಿ ಜಾರಿಯಾಗಿಲ್ಲ. ಉಳಿದಂತೆ ವಾರ್ಷಿಕ ನಿರ್ವಹಣೆ ಮಾಡುವ ಗುತ್ತಿಗೆದಾರರು ನಮ್ಮಲ್ಲಿ ಕ್ರೇನ್ ವ್ಯವಸ್ಥೆ ಇಲ್ಲ, ಕೆಟ್ಟಿರುವ ಬೀದಿ ದೀಪಗಳನ್ನು ಬದಲಿಸಲಾಗುತ್ತಿಲ್ಲ ಎಂಬ ಸಬೂಬು ಹೇಳುತ್ತಿದ್ದು ಸಮಸ್ಯೆ ಉಲ್ಬಣಿಸುವಂತಾಗಿದೆ ಎಂದು ನಗರಸಭೆಯ ಮೂಲಗಳು ತಿಳಿಸಿವೆ.

ಹರಿಹರದ ಹೊಸ ಸೇತುವೆ ಮೇಲೆ ಬೀದಿ ದೀಪಗಳಿಲ್ಲದೆ ಕತ್ತಲಾಗಿರುವುದು

ಮೊಬೈಲ್‌ ಫೋನ್ ಬೆಳಕಲ್ಲಿ ಸಾಗುವ ಜನ ಮನೆ ಪಾಠಕ್ಕೆ ಹೋಗುವುದೇ ಕಷ್ಟವಾಗಿದೆ ಬೀದಿದೀಪಗಳಿಲ್ಲ, ನಾಯಿಗಳ ಕಾಟ ಹೆಚ್ಚಿದೆ

ಬೀದಿ ದೀಪ ಸಮಸ್ಯೆ ಹೇಳಲು ಸಹಾಯವಾಣಿಯೇ ಇಲ್ಲ. ನಗರಸಭೆ ಅಧ್ಯಕ್ಷರು ಹಾಗೂ ಪೌರಾಯುಕ್ತರು ಸಂಜೆ ಆದ ಮೇಲೆ ನಗರದೊಳಗೆ ಹಾಗೂ ಹೊರವಲಯದಲ್ಲಿ ನಡೆದು ಸಾಗಿದರೆ ಜನಸಾಮಾನ್ಯರ ಸಂಕಷ್ಟ ಅರಿವಿಗೆ ಬರುತ್ತದೆ
 ಟಿ.ಎಸ್.ನಾಗರಾಜ್ ನಗರನಿವಾಸಿ
ನಗರದೊಳಗೆ ಬೀದಿ ದೀಪಗಳ ಅಳವಡಿಕೆಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ  ಸಲ್ಲಿಸಲಾಗಿದೆ. ದೀಪಗಳ ಪರಿವರ್ತನೆಗೆ ಸಿಸಿಎಂಎಸ್ ಸಂಸ್ಥೆಗೂ ಸೂಚಿಸಿದೆ 2 ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ
  ವಿನಯ್ ಕುಮಾರ್ ಎಇಇ ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.