ADVERTISEMENT

ಹೊನ್ನಾಳಿ | ಬೇಸಿಗೆಯ ‘ರಾಜ’ ಕರಬೂಜದ ಘಮ: ಕೋಟ್ಯಂತರ ರೂಪಾಯಿ ವಹಿವಾಟು

ಎನ್.ಕೆ.ಆಂಜನೇಯ
Published 11 ಫೆಬ್ರುವರಿ 2025, 5:25 IST
Last Updated 11 ಫೆಬ್ರುವರಿ 2025, 5:25 IST
ಹೊನ್ನಾಳಿ ಪೊಲೀಸ್ ಠಾಣೆ ಮುಂಭಾಗದ ಅಂಗಡಿಯೊಂದರಲ್ಲಿ ವ್ಯಾಪಾರಿ ಪರ್ವೇಜ್ ಕರಬೂಜ ಹಣ್ಣುಗಳ ರಾಶಿ ಹಾಕಿರುವುದು
ಹೊನ್ನಾಳಿ ಪೊಲೀಸ್ ಠಾಣೆ ಮುಂಭಾಗದ ಅಂಗಡಿಯೊಂದರಲ್ಲಿ ವ್ಯಾಪಾರಿ ಪರ್ವೇಜ್ ಕರಬೂಜ ಹಣ್ಣುಗಳ ರಾಶಿ ಹಾಕಿರುವುದು   

ಹೊನ್ನಾಳಿ: ಬೇಸಿಗೆ ಬಂತೆಂದರೆ ಕರಬೂಜ ಹಣ್ಣುಗಳ ಸುಗ್ಗಿ ಆರಂಭವಾಯಿತು ಎಂದೇ ಅರ್ಥ. ಬಂಗಾರದ ಬಣ್ಣ ಹಾಗೂ ಸುವಾಸನೆಯ ಮೂಲಕ ಗಮನ ಸೆಳೆಯುವ ಈ ಹಣ್ಣುಗಳು ಪಟ್ಟಣಕ್ಕೆ ಲಗ್ಗೆಯಿಟ್ಟಿವೆ. ಎಲ್ಲೆಲ್ಲೂ ಇವುಗಳ ಘಮ ಮೂಗಿಗೆ ಬಡಿಯುತ್ತಿದೆ. 

ಇದರಿಂದ ತಯಾರಿಸುವ ಜ್ಯೂಸ್, ಸೀಕರಣೆ ಜನಪ್ರಿಯ. ದೇಹವನ್ನು ತಂ‍ಪಾಗಿರಿಸಿ ಆರೋಗ್ಯ ವೃದ್ಧಿಸುತ್ತವೆ. ಎಲ್ಲಾ ವಯೋಮಾನದವರೂ ಇಷ್ಟಪಡುವ ಈ ಹಣ್ಣುಗಳು ಮೂತ್ರಪಿಂಡ ಸ್ವಚ್ಛ ಮಾಡುವ ಕೆಲಸ ಮಾಡುತ್ತವೆ ಎನ್ನುತ್ತಾರೆ ವೈದ್ಯರು. 

ತಾಲ್ಲೂಕಿನ ಹೊಳೆಮಾದಾಪುರ, ಬೇಲಿಮಲ್ಲೂರು, ಹರಳಹಳ್ಳಿಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಕರಬೂಜ ಬೆಳೆಯಲಾಗುತ್ತದೆ. ಪ್ರತಿ ದಿನ ಬೆಳಗ್ಗಿನ ಜಾವ 4 ಗಂಟೆಗೆ ಸೇತುವೆ ಪಕ್ಕದ ಮಾರುಕಟ್ಟೆಗೆ ಹಣ್ಣು ಲಗ್ಗೆಯಿಡುತ್ತವೆ. ಭದ್ರಾವತಿ, ಶಿವಮೊಗ್ಗ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿರಾಳಕೊಪ್ಪ, ಬಂಕಾಪುರ, ಕಡೂರು, ಬೀರೂರು, ತರಿಕೇರಿ ಭಾಗಗಳ ವ್ಯಾಪಾರಿಗಳು ಇಲ್ಲಿಗೆ ಬಂದು ಖರೀದಿ ಮಾಡುತ್ತಾರೆ. 8 ಗಂಟೆ ಹೊತ್ತಿಗೆ ವಹಿವಾಟು ಮುಗಿದಿರುತ್ತದೆ.

ADVERTISEMENT

3 ತಿಂಗಳಲ್ಲಿ ವಹಿವಾಟು: ಸಾಮಾನ್ಯವಾಗಿ ಪ್ರತಿವರ್ಷದ ಜನವರಿ ಕೊನೆ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ಕರಬೂಜ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತವೆ. ಮಾರ್ಚ್‌ವರೆಗೂ ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸುತ್ತವೆ. ರೈತರಿಗೆ ಉತ್ತಮ ಆದಾಯವನ್ನೂ ತಂದುಕೊಡುತ್ತವೆ. ಮೂರು ತಿಂಗಳ ಅವಧಿಯಲ್ಲಿ ₹80 ಲಕ್ಷದಿಂದ ₹1 ಕೋಟಿವರೆಗೂ ವಹಿವಾಟು ನಡೆಯುತ್ತದೆ ಎನ್ನುತ್ತಾರೆ ವ್ಯಾಪಾರಿ ಅಲ್ಲಾಭಕ್ಷಿ ಮುಲ್ಲಾಣಿ.

ಕನಿಷ್ಟ ₹80ಕ್ಕೆ ಒಂದರಂತೆ ಕರಬೂಜ ಮಾರಾಟ ಮಾಡಲಾಗುತ್ತಿದೆ. ಹಣ್ಣುಗಳ ಗಾತ್ರದ ಮೇಲೆ ದರ ನಿಗದಿ ಮಾಡಲಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ನಾಗರಾಜ್.

ಅಲ್ಪಾವಧಿ ಬೆಳೆ ಅಧಿಕ ಲಾಭ

ಡಿಸೆಂಬರ್‌ನಲ್ಲಿ ಬಿತ್ತನೆ ಪ್ರಕ್ರಿಯೆ ಶುರುವಾಗುತ್ತದೆ. ಭೂಮಿ ಹದಮಾಡಿ ಗುಣಿ ತೆಗೆದು ಅದರಲ್ಲಿ ಸಗಣಿ ಗೊಬ್ಬರ ಹಾಕಲಾಗುತ್ತದೆ. 20 ದಿನ ಬಿಟ್ಟು ನೆನೆಸಲು ಇಟ್ಟಿದ್ದ ಬೀಜಗಳನ್ನು ಅರಳೆಲೆಯಲ್ಲಿ ಬಟ್ಟೆಸುತ್ತಿ ಕಟ್ಟಲಾಗುತ್ತದೆ. 2 ದಿನಕ್ಕೆ ಬೀಜ ಮೊಳಕೆ ಬರುತ್ತದೆ. ಮಡಿಗಳಲ್ಲಿ ಎಂಟು ದಿನ ಪೋಷಿಸಿದ ಬಳಿಕ ಸಸಿ ನಾಟಿ ಮಾಡಲಾಗುತ್ತದೆ. 3 ತಿಂಗಳಿಗೆ ಈ ಬೆಳೆ ಫಲಕ್ಕೆ ಬರುತ್ತದೆ ಎಂದು ರೈತರಾದ ರಾಜಪ್ಪ ಶಿವಾನಂದಪ್ಪ ವಿವರಿಸುತ್ತಾರೆ.  ಶೀತ ಹವಾಗುಣ ಹಾಗೂ ನದಿ ದಡದಲ್ಲಿ ಈ ಹಣ್ಣುಗಳನ್ನು ಬೆಳೆಯುತ್ತಾರೆ. ಅಧಿಕ ನೀರು ಅಗತ್ಯವಿಲ್ಲ. ಕೇವಲ ಸಗಣಿ ಗೊಬ್ಬರ ಬಳಸಿದರೆ ಸಾಕು. ಕರಬೂಜಕ್ಕೂ ರೋಗಬಾಧೆ ತಪ್ಪಿದ್ದಲ್ಲ. ಬುಡ ಕೊಳೆರೋಗ ಕಡಕ್ ರೋಗ ಬುಟ್ರಿ ರೋಗ ತಗುಲಿದರೆ ಬೆಳೆನಾಶವಾಗುವ ಸಂಭವವೂ ಇದೆ. ರೋಗಮುಕ್ತವಾಗಿದ್ದರೆ ಅಲ್ಪಾವಧಿಯಲ್ಲಿಯೇ ಒಳ್ಳೆಯ ಲಾಭ ಗಳಿಸಬಹುದು ಎನ್ನುತ್ತಾರೆ ವ್ಯಾಪಾರಿ ಪರ್ವೇಜ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.