ADVERTISEMENT

ದಾವಣಗೆರೆ: ಆಧಾರ್ ತಿದ್ದುಪಡಿಗೆ ತಾಂತ್ರಿಕ ಅಡಚಣೆ

ಗ್ರಾಮ ಪಂಚಾಯಿತಿಗಳಲ್ಲಿ ಆರಂಭವಾದ ಪ್ರಕ್ರಿಯೆ,

ಪ್ರಕಾಶ ಕುಗ್ವೆ
Published 28 ಸೆಪ್ಟೆಂಬರ್ 2018, 12:10 IST
Last Updated 28 ಸೆಪ್ಟೆಂಬರ್ 2018, 12:10 IST
ಆಧಾರ್ ನೋಂದಣಿ ಪ್ರಕ್ರಿಯೆ  (ಸಂಗ್ರಹ ಚಿತ್ರ)
ಆಧಾರ್ ನೋಂದಣಿ ಪ್ರಕ್ರಿಯೆ  (ಸಂಗ್ರಹ ಚಿತ್ರ)   

ದಾವಣಗೆರೆ: ಆಧಾರ್ ತಿದ್ದುಪಡಿ ಇದೀಗ ನಿಮ್ಮ ಗ್ರಾಮ ಪಂಚಾಯಿತಿಗಳಲ್ಲೇ! ಎಂದು ಸರ್ಕಾರ ಘೋಷಣೆ ಹೊರಡಿಸಿದೆ. ಆದರೆ, ಜಿಲ್ಲೆಯಲ್ಲಿ ಒಂದೇ ಒಂದು ಆಧಾರ್ ತಿದ್ದುಪಡಿಯಾಗಿಲ್ಲ. ದೇಶದಲ್ಲೇ ಪ್ರಪ್ರಥಮವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ತಿದ್ದುಪಡಿ ಕೇಂದ್ರಗಳ ಸ್ಥಾಪಿಸಲಾಗಿದೆ ಎಂಬ ರಾಜ್ಯ ಸರ್ಕಾರದ ಹೆಮ್ಮೆಯ ಹೇಳಿಕೆ ಕೃತಿಯಲ್ಲಿ ಸಾಕಾರಗೊಂಡಿಲ್ಲ.

ಮನೆ ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ, ಹೊಸ ಮೊಬೈಲ್‌ ಸಂಖ್ಯೆ ಸೇರ್ಪಡೆ ಎಲ್ಲವನ್ನೂ ಸುಲಭವಾಗಿ ಗ್ರಾಮ ಪಂಚಾಯಿತಿಗಳಲ್ಲೇ ಮಾಡಿಕೊಡಲಾಗುತ್ತದೆ ಎಂದೇ ಹೇಳಲಾಗಿತ್ತು. ಇದೇ 5ರಂದು ರಾಜ್ಯದಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಆಧಾರ್‌ ತಿದ್ದುಪಡಿ ಕೇಂದ್ರಗಳಿಗೆ ಚಾಲನೆ ನೀಡಿದ್ದರು. ಆದರೆ, ಜಿಲ್ಲೆಯ ಶೇ 60ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್ ಯುಸಿಎಲ್ ಸಾಫ್ಟ್‌ವೇರ್ ಅಳವಡಿಕೆ ಆಗಿಲ್ಲ. ಈಗಾಗಲೇ ಸಾಫ್ಟ್‌ವೇರ್ ಅಳವಡಿಸಿಕೊಂಡ ಪಂಚಾಯಿತಿಗಳಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗಿ ತಿದ್ದುಪಡಿ ಕಾರ್ಯ ಸಾಧ್ಯವಾಗುತ್ತಿಲ್ಲ.

‘ಕಂಪ್ಯೂಟರ್‌ಗೆ ಸಾಫ್ಟ್‌ವೇರ್‌ ಅಳವಡಿಸಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆ ತುಂಬಾ ಇದೆ. ಸರ್ವರ್ ಪದೇ ಪದೇ ಕೈಕೊಡುತ್ತದೆ. ಸಮೀಪವೇ ಚನ್ನಗಿರಿ ಪಟ್ಟಣ ಇದೆ. ಜನ ಅಲ್ಲಿಗೇ ಹೋಗಿ ತಿದ್ದುಪಡಿ ಮಾಡಿಸಿಕೊಂಡು ಬರುತ್ತಾರೆ. ಇದುವರೆಗೂ ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಒಂದೂ ಆಧಾರ್‌ ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ’ ಎಂಬುದು ಚನ್ನಗರಿ ತಾಲ್ಲೂಕು ಅಗರಬನ್ನಿಹಟ್ಟಿ ಗ್ರಾಮ ಪಂಚಾಯಿತಿ ಪಿಡಿಒ ಗಣೇಶ್ ಅವರ ಬೇಸರ.

ADVERTISEMENT

‘ಡಾಟಾ ಎಂಟ್ರಿ ಆಪರೇಟರ್‌ ಈ ಬಗ್ಗೆ ತರಬೇತಿ ಪಡೆದಿದ್ದಾರೆ. ಆದರೆ, ನಮ್ಮಲ್ಲಿ ಇನ್ನೂ ಸಾಫ್ಟ್‌ವೇರ್‌ ಅಳವಡಿಸಿಲ್ಲ’ ಎನ್ನುತ್ತಾರೆ ದಾವಣಗೆರೆ ತಾಲ್ಲೂಕು ಹೆಮ್ಮನಬೇತೂರು ಗ್ರಾಮ ಪಂಚಾಯಿತಿ ಪಿಡಿಒ ಹಾಲಸಿದ್ದಪ್ಪ.

ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜಿಲ್ಲಾ ಮಟ್ಟದಲ್ಲಿ ಒಂದು ಹಂತದ ತರಬೇತಿ ನೀಡಲಾಗಿದೆ. ಈಗ ಸಾಫ್ಟ್‌ವೇರ್ ಅಳವಡಿಕೆ ಪ್ರಕ್ರಿಯೆ ಗ್ರಾಮ ಪಂಚಾಯಿಗಳಲ್ಲಿ ನಡೆಯುತ್ತಿದೆ. ತಾಂತ್ರಿಕ ತೊಂದರೆಯಿಂದಾಗಿ ನಿರೀಕ್ಷೆಯಂತೆ ಈ ಕೆಲಸ ಆಗುತ್ತಿಲ್ಲ. ಪತ್ರಿಕೆಗಳಲ್ಲಿ ಆಧಾರ್ ತಿದ್ದುಪಡಿ ಬಗ್ಗೆ ಮಾಹಿತಿ ಬಂತೇ ಹೊರತು ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಜಿಲ್ಲಾ ಹಂತದಲ್ಲಿ ತರಬೇತಿಗೊಳಿಸಿದವರು ಹಾಗೂ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿದವರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳ ನಡುವೆ ಸಂವಹನ ಕೊರತೆ ಇದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ (ಸಿಐಟಿಯು) ಸಂಯೋಜಿತ ಅಧ್ಯಕ್ಷ ಉಮೇಶ್ ಕೈದಾಳೆ.

‘ಆಧಾರ್ ತಿದ್ದುಪಡಿ ಸಾಫ್ಟ್‌ವೇರ್‌ ಎಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಳವಡಿಸಲಾಗಿದೆ ಎಂದು ಪ್ರತಿ ದಿವಸ ಮೇಲಧಿಕಾರಿಗಳು ಪಿಡಿಒಗಳನ್ನು ಕೇಳುತ್ತಾರೆ. ಆದರೆ, ಅಳವಡಿಸಲು ಮುಂದಾದರೆ ಸರ್ವರ್‌ ಸಮಸ್ಯೆ ಎದುರಾಗುತ್ತದೆ. ಕೆಲವು ಕಡೆ ಸಾಫ್ಟ್‌ವೇರ್ ಅಳವಡಿಸಿಕೊಂಡು ತಿದ್ದುಪಡಿಗೆ ಮುಂದಾಗುತ್ತಿದ್ದಂತೆ ಇಂಟರ್‌ನೆಟ್‌ ನಿಧಾನವಾಗುತ್ತದೆ. ವೆಬ್‌ಸೈಟ್‌ ಓಪನ್ ಆಗುವುದೇ ಇಲ್ಲ. ಇಂತಹ ಹತ್ತು ಹಲವು ಸಮಸ್ಯೆಗಳಿವೆ. ದಾವಣಗೆರೆ ಕೈದಾಳೆ ಗ್ರಾಮ ಪಂಚಾಯಿತಿಯಲ್ಲಿ ಇದುವರೆಗೂ ಒಂದು ತಿದ್ದುಪಡಿ ಮಾಡಲು ಸಾಧ್ಯವಾಗಿಲ್ಲ’ ಎನ್ನುತ್ತಾರೆ ಅವರು.

‘ಗ್ರಾಮ ಪಂಚಾಯಿತಿಗಳಲ್ಲಿ ಈಗ ನೂರು ಸೇವೆಗಳು ಲಭ್ಯ ಎಂದು ಸರ್ಕಾರ ಹೇಳುತ್ತದೆ. ರೈತರಿಗೆ ತಕ್ಷಣಕ್ಕೆ ಪಹಣಿ ಕೊಡಿ, ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆಧಾಯ ಪ್ರಮಾಣಪತ್ರ ನೀಡಿ ಎಂದು ಪ್ರತಿಯೊಂದನ್ನೂ ಗ್ರಾಮ ಪಂಚಾಯಿತಿಯಿಂದಲೇ ಕೊಡಿ ಎನ್ನುತ್ತಾರೆ. ತಂತ್ರಜ್ಞಾನವೇ ಸರಿ ಇಲ್ಲದಿದ್ದರೆ ಯಾವ ಸೇವೆಯನ್ನೂ ಸಕಾಲಕ್ಕೆ ನೀಡಲು ಸಾಧ್ಯವಿಲ್ಲ’ ಎನ್ನುತ್ತಾರೆ ಉಮೇಶ್.

ಉನ್ನತೀಕರಿಸಿದ ಸಾಫ್ಟ್‌ವೇರ್ ಬಳಕೆಗೆ ಚಿಂತನೆ:

‘ಸಮಸ್ಯೆ ಗಮನಕ್ಕೆ ಬಂದಿದೆ. ಆಧಾರ್‌ ಯುಸಿಎಲ್‌ ಅಳವಡಿಸಿಕೊಂಡ ಕೆಲವು ಕಡೆಗಳಲ್ಲಿ ಜನರ ಬೆರಳಚ್ಚು, ಕಣ್ಣಿನ ಚಿತ್ರಗಳು ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂಬ ದೂರುಗಳಿವೆ. ಇದನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಉನ್ನತೀಕರಿಸಿದ ಸಾಫ್ಟ್‌ವೇರ್ ನೀಡುವ ಬಗ್ಗೆ ಅವರು ಚಿಂತನೆ ನಡೆಸಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿಯ ಯೋಜನಾ ವ್ಯವಸ್ಥಾಪಕ ಅನಿಲ್‌ಕುಮಾರ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.