ADVERTISEMENT

ಖರೀದಿಗೆ ಮಾರುಕಟ್ಟೆಯಲ್ಲಿ ಜನಜಂಗುಳಿ

ವಾರಕ್ಕೆ ಎರಡೇ ದಿನ ಖರೀದಿಗೆ ಅವಕಾಶ ನೀಡಿದ್ದರ ಪರಿಣಾಮ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 4:30 IST
Last Updated 4 ಜೂನ್ 2021, 4:30 IST
ದಾವಣಗೆರೆಯಲ್ಲಿ ಗುರುವಾರ ಸುರಿದ ಮಳೆಯಲ್ಲಿಯೇ ಕೆ.ಆರ್. ಮಾರುಕಟ್ಟೆಯಲ್ಲಿ ಕಂಡುಬಂದ ಜನರ ಮತ್ತು ವಾಹನ ದಟ್ಟಣೆ       ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯಲ್ಲಿ ಗುರುವಾರ ಸುರಿದ ಮಳೆಯಲ್ಲಿಯೇ ಕೆ.ಆರ್. ಮಾರುಕಟ್ಟೆಯಲ್ಲಿ ಕಂಡುಬಂದ ಜನರ ಮತ್ತು ವಾಹನ ದಟ್ಟಣೆ       ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಜಿಲ್ಲೆಯಲ್ಲಿ ಲಾಕ್‌ಡೌನ್‌ ಜಾರಿಗೊಳಿಸಿ ವಾರಕ್ಕೆ ಎರಡೇ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಖರೀದಿಸಲು ಅವಕಾಶ ನೀಡಲಾಗಿರುವುದರಿಂದ ಗುರುವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು.

ಪ್ರತಿದಿನ ಬೆಳಿಗ್ಗೆ 10ರವರೆಗೆ ಖರೀದಿಗೆ ಅವಕಾಶ ನೀಡಿದ್ದಾಗ ಆರಂಭದಲ್ಲಿ ಜನಜಂಗುಳಿ ಇದ್ದರೂ ಬಳಿಕ ಅಷ್ಟೊಂದು ಸಂದಣಿ ಇರಲಿಲ್ಲ. ಆದರೆ ಕಠಿಣ ಲಾಕ್‌ಡೌನ್‌ ಮಾಡಿ ಮೇ 24ರ ಸೋಮವಾರ ಒಂದೇ ದಿನ ಖರೀದಿಗೆ ಅವಕಾಶ
ನೀಡಲಾಗಿತ್ತು.

ಆಗ ಭಾರಿ ಸಂಖ್ಯೆಯಲ್ಲಿ ಜನ ಬಂದಿದ್ದರು. ಅದಕ್ಕೆ ಸೋಮವಾರ ಮತ್ತು ಗುರುವಾರ ಎರಡು ದಿನ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು. ಗುರುವಾರವೂ ಜನಸಂದಣಿ ದಟ್ಟವಾಗಿತ್ತು.

ADVERTISEMENT

ಗುರುವಾರ ಬೆಳಿಗ್ಗೆ ಮಳೆಯೂ ಬಂದಿದ್ದರಿಂದ ಜನರು ನಿಧಾನಕ್ಕೆ ಹೊರ ಬಂದರು. ಬೆಳಿಗ್ಗೆ 8ರ ಬಳಿಕ ಖರೀದಿದಾರರ ಸಂಖ್ಯೆ ಹೆಚ್ಚಳವಾಯಿತು.

ನಗರದ ಕೆ.ಆರ್. ಮಾರುಕಟ್ಟೆ, ಗಡಿಯಾರ ಕಂಬ, ರಾಜನಹಳ್ಳಿ ಹನುಮಂತಪ್ಪ ಛತ್ರ, ಎಪಿಎಂಸಿ ತರಕಾರಿ ಮಾರುಕಟ್ಟೆ, ವಿಜಯಲಕ್ಷ್ಮಿ ರಸ್ತೆ, ಚಾಮರಾಜಪೇಟೆ, ಮಂಡಿ ಪೇಟೆ ಸೇರಿ ಹಲವೆಡೆ ತೆರೆದಿದ್ದ ದಿನಸಿ, ತರಕಾರಿ ಅಂಗಡಿಗಳ ಸಮೀಪ ಎಂದಿಗಿಂತಲೂ ಹೆಚ್ಚಿನ ಜನದಟ್ಟಣೆ ಕಂಡುಬಂತು. ಮಾಂಸದ ಅಂಗಡಿಗಳಲ್ಲಿಯೂ ಬೇಡಿಕೆ ಹೆಚ್ಚಿತ್ತು. ಮದ್ಯದಂಗಡಿಗಳಲ್ಲಿ ಪಾರ್ಸೆಲ್‌ಗಾಗಿ ಜನರು ಸರದಿಯಲ್ಲಿ ನಿಂತಿದ್ದರು. ಮಧ್ಯಾಹ್ನ 12 ದಾಟಿದರೂ ಎಲ್ಲ ಕಡೆ ಜನರು ಇರುವುದನ್ನು ಕಂಡು ಪೊಲೀಸರು ಒತ್ತಾಯಪೂರ್ವಕವಾಗಿ ಅಂಗಡಿಗಳಿಗೆ ಬಾಗಿಲು ಹಾಕಿಸಿದರು.

ಪೊಲೀಸರು, ಪಾಲಿಕೆ ಆಯುಕ್ತರು ಸಹಿತ ವಿವಿಧ ಅಧಿಕಾರಿಗಳು ನಿಯಮ ಮೀರಿ ವ್ಯಾಪಾರ ನಡೆಸುತ್ತಿರುವವರಿಗೆ ದಂಡ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.