ADVERTISEMENT

ದಾವಣಗೆರೆ: ಬೀದಿ ನಾಟಕ ಕಲಾವಿದರ ಬದುಕು ಅತಂತ್ರ

ಲಾಕ್‌ಡೌನ್‌ನಿಂದ ಕಾರ್ಯಕ್ರಮಗಳು ಇಲ್ಲದೇ ಕಲಾವಿದರ ಸಂಕಷ್ಟ

ಡಿ.ಕೆ.ಬಸವರಾಜು
Published 4 ಮೇ 2020, 11:19 IST
Last Updated 4 ಮೇ 2020, 11:19 IST
ಬೀದಿ ನಾಟಕ ಕಲಾವಿದರು (ಸಂಗ್ರಹ ಚಿತ್ರ)
ಬೀದಿ ನಾಟಕ ಕಲಾವಿದರು (ಸಂಗ್ರಹ ಚಿತ್ರ)   

ದಾವಣಗೆರೆ: ಸಮಾಜದ ಅನಿಷ್ಠ ಪದ್ಧತಿಗಳ ಬಗ್ಗೆ ಬೀದಿ ನಾಟಕ ಹಾಗೂ ಜಾಗೃತಿ ಗೀತೆಗಳ ಮೂಲಕ ಅರಿವು ಮೂಡಿಸುವ ಬೀದಿ ನಾಟಕ ಕಲಾವಿದರ ಬದುಕು ಲಾಕ್‌ಡೌನ್‌ನಿಂದ ಬೀದಿಗೆ ಬಿದ್ದಿದೆ.

ಅನಕ್ಷರತೆ, ಬಾಲ್ಯ ವಿವಾಹ, ಮಹಿಳಾ ದೌರ್ಜನ್ಯ, ಬಾಲ ಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿ, ಪರಿಸರ, ನೀರು, ನೈರ್ಮಲ್ಯ, ಎಚ್‌ಐವಿ ಸೇರಿ ಅನೇಕ ಪಿಡುಗುಗಳ ವಿರುದ್ಧ ಗ್ರಾಮೀಣ ಪ್ರದೇಶ ಹಾಗೂ ನಗರಗಳಲ್ಲಿ ಬೀದಿ ಬೀದಿ ತಿರುಗಿ ಜಾಗೃತಿ ಮೂಡಿಸುವ ಕಲಾ ನಾಟಕ ಪ್ರದರ್ಶನಗಳು ಇಲ್ಲದೇ ಜೀವನ ನಡೆಸುವುದೇ ಕಷ್ಟವಾಗಿದೆ.

ಸರ್ಕಾರದ ಜನಪದ ಯೋಜನೆಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಂಪರ್ಕ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾಡಳಿತಗಳ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡುತ್ತಾ ಬಂದಿದ್ದು, ಕಾರ್ಯಕ್ರಮ ಇದ್ದಾಗ ಮಾತ್ರ ಗೌರವ ಧನ ಪಡೆಯುವ ಕಲಾವಿದರು ಕಾರ್ಯಕ್ರಮಗಳು ಸಿಗದೇ ಇದ್ದರೆ ಇವರ ಬದುಕು ನಿಜಕ್ಕೂ ಶೋಚನೀಯ.

ADVERTISEMENT

‘ಲಾಕ್‌ಡೌನ್ ಹಿನ್ನೆಯಲ್ಲಿ ಜನರು ಗುಂಪು ಗುಂಪಾಗಿ ನಿಲ್ಲುವ ಆಗಿಲ್ಲ. ಬೀದಿಗಳಲ್ಲಿ ಜಾಗೃತಿ ನಾಟಕಗಳ ಪ್ರದರ್ಶನಕ್ಕೆ ಅವಕಾಶವಿಲ್ಲವಾಗಿದೆ. ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಬರುತ್ತಿದ್ದವು,. ಮುಖ್ಯವಾಗಿ ನೀರು, ನೈರ್ಮಲ್ಯಗಳ ಬಗ್ಗೆ ನಾಟಕಗಳ ಪ್ರದರ್ಶನ ನೀಡುತ್ತಿದ್ದೆವು. ಆದರೆ ಕಾರ್ಯಕ್ರಮಗಳು ಸಿಗದೇ ಜಿಲ್ಲೆಯಲ್ಲಿರುವ 80ಕ್ಕೂ ಹೆಚ್ಚು ಕಲಾವಿದರ ಜೀವನ ದುಸ್ತರವಾಗಿದೆ’ ಎನ್ನುತ್ತಾರೆ ಬೀದಿ ನಾಟಕ ಕಲಾವಿದರ ಸಂಘದ ಕಾರ್ಯದರ್ಶಿ ಕೆ.ಬಾನಪ್ಪ.

‘ಬೀದಿ ರಂಗಭೂಮಿ ಅತ್ತ ವೃತ್ತಿಯೂ ಆಗದೇ, ಇತ್ತ ಬೇರೆ ಉದ್ಯೋಗವೂ ಇಲ್ಲದೇ ಅಲೆದಾಟದ ಬದುಕು ಕಟ್ಟಿಕೊಂಡಿರುವ ಕಲಾವಿದರಿಗೆ ಲಾಕ್‌ಡೌನ್ ಸಂದರ್ಭ ಯಾರೂ ಆಹಾರದ ಕಿಟ್‌ಗಳನ್ನು ನೀಡಿಲ್ಲ. ಅಲ್ಲದೇ ಆರ್ಥಿಕ ಸಹಾಯವೂ ಇಲ್ಲವಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ.

‘ಸಾಹಿತಿಗಳು ಹಾಗೂ ಜಾನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ₹2 ಸಾವಿರ ಸಹಾಯ ಧನ ನೀಡುತ್ತಿದ್ದು, ಇದಕ್ಕೆ ನಮ್ಮನ್ನೂ ಪರಿಗಣಿಸಬೇಕು. ಬೀದಿ ನಾಟಕ ಕಲಾವಿದರಿಗೆ ವಿಶೇಷ ಅನುದಾನ ನೀಡುವ ಮೂಲಕ ಆರ್ಥಿಕವಾಗಿ ನೆರವಾಗಬೇಕು. ಜಾನಪದ ಅಕಾಡೆಮಿ ರೀತಿ ‘ಬೀದಿ ನಾಟಕ ಅಕಾಡೆಮಿ’ ರಚನೆ ಮಾಡಬೇಕು’ ಎಂಬುದು ಅವರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.