ADVERTISEMENT

ಅನ್ನಭಾಗ್ಯ ಕಾಂಗ್ರೆಸ್ ಕೊಡುಗೆಯಲ್ಲ- ಎಂ.ಪಿ. ರೇಣುಕಾಚಾರ್ಯ

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 15:33 IST
Last Updated 4 ಏಪ್ರಿಲ್ 2021, 15:33 IST
ರೇಣುಕಾಚಾರ್ಯ
ರೇಣುಕಾಚಾರ್ಯ   

ಹೊನ್ನಾಳಿ: ‘ಅನ್ನಭಾಗ್ಯದ ಅಕ್ಕಿ ಬಿಜೆಪಿ ಸರ್ಕಾರದ ಕೊಡುಗೆ. ನಮ್ಮ ಯೋಜನೆಯ ಲಾಭ ಪಡೆದು ಸಿದ್ದರಾಮಯ್ಯ ಅವರು ಅನ್ನಭಾಗ್ಯ ಕಾಂಗ್ರೆಸ್‌ ಕೊಡುಗೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ದೂರಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ 7 ಕೆ.ಜಿ ಅಕ್ಕಿ ನೀಡುವುದರ ಬದಲು 5 ಕೆ.ಜಿಗೆ ಇಳಿಸಿರುವುದಕ್ಕೆ ಯಡಿಯೂರಪ್ಪ ಬಗ್ಗೆ ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ.ಇಲ್ಲಿ ಯಾರೂ ಅಕ್ಕಿಯನ್ನು ಅವರ ಅಪ್ಪನ ಮನೆಯಿಂದ ತಂದು ಕೊಡುವುದಿಲ್ಲ. ಅಕ್ಕಿ ಕೊಡುವುದು ಅಧಿಕಾರಕ್ಕೆ ಬಂದ ಸರ್ಕಾರಗಳು’ ಎಂದು ಟಾಂಗ್ ನೀಡಿದರು.

‘ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಜಿಪುಣ ಸರ್ಕಾರ ಎಂದು ಪದೇ ಪದೇ ಹೇಳುತ್ತಿದ್ದಾರೆ. ಒಂದು ಜವಾಬ್ದಾರಿಯುತ ಸರ್ಕಾರ ಜನರ ನಾಡಿಮಿಡಿತವನ್ನು ಅರಿತು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಸಿದ್ದರಾಮಯ್ಯ ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಮರೆತು ಮುಖ್ಯಮಂತ್ರಿ ಬಗ್ಗೆ ಏಕವಚನದಲ್ಲಿ ಮಾತನಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ADVERTISEMENT

‘ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದ ಡಿ.ಎನ್. ಜೀವರಾಜ್ ಅನ್ನಭಾಗ್ಯ ಅಕ್ಕಿ ನೀಡಲು ಯೋಜನೆ ರೂಪಿಸಿದ್ದರು. ಆದರೆ ಚುನಾವಣೆ ನಡೆದು ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಸಿಎಂ ಆದರು. ನಾವು ರೂಪಿಸಿದ್ದ ಯೋಜನೆಯ ಕಡತಕ್ಕೆ ಸಹಿ ಮಾಡಿದರು ಅಷ್ಟೇ ಎಂದು’ ಹೇಳಿದರು.

‘ಕೋವಿಡ್‌ನಿಂದ ಸರ್ಕಾರದ ಆರ್ಥಿಕತೆಯ ಮೇಲೆ ಸಾಕಷ್ಟು ಪೆಟ್ಟು ಬಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರು, ಅಸಂಘಟಿತ ಕಾರ್ಮಿಕರು, ಆಟೊ ಚಾಲಕರು, ಹೂವು ಬೆಳೆಗಾರರಿಗೆ ನೆರವಿನ ಹಸ್ತ ಚಾಚಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಮನೆಯಿಂದ ಹೊರಬಾರದ ಕಾಂಗ್ರೆಸ್‌ನವರು ಈಗ ಮಾತನಾಡುವುದು ಹಾಸ್ಯಾಸ್ಪದ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.