ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಸದ್ಯಕ್ಕೆ ಯಾರಿಗೂ ಕೊರೊನಾ ಇಲ್ಲ: ಜಿಲ್ಲಾಧಿಕಾರಿ

ಅಂತರರಾಷ್ಟ್ರೀಯ ಪ್ರಯಾಣಿಕರ ಸಾರ್ವತ್ರಿಕ ತಪಾಸಣಾ ವರದಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 15:10 IST
Last Updated 18 ಮಾರ್ಚ್ 2020, 15:10 IST
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ   

ದಾವಣಗೆರೆ: ಭಾರತ ಸೇರಿ 117 ದೇಶಗಳನ್ನು ಬಾಧಿಸಿರುವ ನೋವೆಲ್‌ ಕೊರೊನಾ ವೈರಸ್‌ (ಕೋವಿಡ್‌ –19) ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶಂಕೆಗೆ ಒಳಗಾದ ಎಲ್ಲ ಪ್ರಕರಣಗಳು ನೆಗೆಟಿವ್‌ ಆಗಿವೆ. ಮಂಗಳವಾರದ ವರೆಗೆ ಸೋಂಕು ಇರುವ ಯಾವುದೇ ಪ್ರಕರಣ ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮಾರ್ಚ್ 4ರಿಂದ ಇದುವರೆಗೆ 78 ಜನರು ಜಿಲ್ಲೆಯಿಂದ ವಿದೇಶ ಪ್ರಯಾಣ ಮಾಡಿ ಬಂದಿದ್ದು, ಒಬ್ಬರು 28 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 14 ಜನರು 14 ದಿನಗಳ ಅವಲೋಕನ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. 68 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿ ಇರಿಸಲಾಗಿದೆ. ಇಬ್ಬರನ್ನು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ.

ಹೊರದೇಶಗಳಲ್ಲಿ ಶಾಶ್ವತವಾಗಿ ನೆಲೆಸಿರುವ ವಿದೇಶಿಗರು ಜಿಲ್ಲೆಗೆ ಬಂದು ಮತ್ತೆ ಹೊರದೇಶಗಳಿಗೆ ಇದುವರೆಗೆ 5 ಜನರು ತೆರಳಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ನಮ್ಮ ಜಿಲ್ಲೆಗೆ ಬಂದು ಇತರೆ ಜಿಲ್ಲೆಗಳಿಗೆ 4 ಮಂದಿ ತೆರಳಿದ್ದಾರೆ. ಕೊರೊನಾ ವೈರಸ್ ಪರೀಕ್ಷೆಗಾಗಿ 6 ಮಾದರಿಗಳನ್ನು ಇದುವರೆಗೆ ಕಳುಹಿಸಲಾಗಿದೆ. ಎಲ್ಲವೂ ನೆಗೆಟಿವ್ ಎಂದು ಫಲಿತಾಂಶ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಬಾಪೂಜಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವ್ಯವಸ್ಥೆ: ಬಾಪೂಜಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಚಿಕಿತ್ಸೆ ನೀಡುವ 5 ಬೆಡ್‌ಗಳುಳ್ಳ ಪ್ರತ್ಯೇಕ ಮಕ್ಕಳ ವಾರ್ಡ್ ವ್ಯವಸ್ಥೆ ಮಾಡಲಾಗಿದೆ. ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಬೆಡ್‌ಗಳ ಸಂಖ್ಯೆಯನ್ನು 146ಕ್ಕೆ ಹೆಚ್ಚಿಸಲಾಗಿದೆ.

ಜಿಲ್ಲಾಡಳಿತ ಕಚೇರಿಯಲ್ಲಿ ನಡೆದ ಕೊರೊನಾ ವೈರಸ್ ಸೋಂಕು ನಿಯಂತ್ರಣ ಮತ್ತು ತಡೆ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಈ ಮಾಹಿತಿ ನೀಡಿದರು.

ಆರ್‌ಟಿಒ, ಸಬ್ ರಿಜಿಸ್ಟ್ರಾರ್ ಕಚೇರಿ, ಪಾಲಿಕೆ, ತಾಲ್ಲೂಕು ಕಚೇರಿಗಳು ಸೇರಿ ಜನದಟ್ಟಣೆ ಹೆಚ್ಚಿರುವ ಕಚೇರಿಗಳಲ್ಲಿ ಜನರನ್ನು ನಿಯಂತ್ರಿಸಲು ಕ್ರಮ ವಹಿಸಬೇಕು. ಆಧಾರ್ ಮಾಡಿಸುವವರಿಗೆ ದಿನಕ್ಕೆ 50 ಟೋಕನ್ ನೀಡಲಾಗುತ್ತಿದೆ. ಆರ್‌ಟಿಒ ಕಚೇರಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಬಾರದು. ಗದ್ದಲ ಸೃಷ್ಟಿಸಬಾರದು ಎಂದು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸರ್ಕಾರಿ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಇರಬೇಕು. ಕೆಲವು ನೌಕರರು ಹಾವೇರಿ, ಚಿತ್ರದುರ್ಗ, ಶಿವಮೊಗ್ಗ, ಧಾರವಾಡ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರತಿ ದಿನ ಓಡಾಡುತ್ತಿರುವುದು ಕಂಡು ಬಂದಿದೆ. ಅಂತಹ ಸಿಬ್ಬಂದಿ ಇಂದಿನಿಂದಲೇ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಬೇಕು. ಇಲ್ಲದಿದ್ದಲ್ಲಿ ಸಂಬಂಧಿಸಿದವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ನರೇಗಾ ಯೋಜನೆಯಡಿ ಗ್ರಾಮಗಳಲ್ಲಿ ಒಂದೊಂದು ತಂಡದಲ್ಲಿ ನೂರಾರು ಜನ ಒಟ್ಟೊಟ್ಟಿಗೆ ಕೆಲಸ ನಿರ್ವಹಿಸುತ್ತಾರೆ. ಈ ತಂಡಗಳಲ್ಲಿ ಕಾರ್ಮಿಕರಿಗೆ ಶೀತ, ಕೆಮ್ಮು ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲು ಪಿಡಿಓಗಳು ಕ್ರಮ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಎಸ್‌ಪಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಎಚ್‌ಒ ಡಾ.ರಾಘವೇಂದ್ರ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಡಿಎಲ್‌ಆರ್ ರಾಮಾಂಜನೇಯ, ಆರ್‌ಟಿಒ ಎನ್.ಜೆ. ಬಣಕಾರ್, ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕ ಡಾ. ಭಾಸ್ಕರ್ ನಾಯಕ್, ಪಿಡಬ್ಲ್ಯುಡಿ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ್, ಹರಿಹರ ನಗರಸಭೆ ಆಯುಕ್ತೆ ಲಕ್ಷ್ಮೀ, ದಾವಣಗೆರೆ ತಹಶೀಲ್ದಾರ್ ಸಂತೋಷ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.