ದಾವಣಗೆರೆ: ‘ಮೈಸೂರು ಸ್ಯಾಂಡಲ್ ಸೋಪ್’ ರಾಯಭಾರಿಯಾಗಿ ಕನ್ನಡದ ನಟಿಯರನ್ನು ಆಯ್ಕೆ ಮಾಡುವ ಅವಕಾಶವಿತ್ತು. ಈ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರುವ ಪರಿಣಾಮ ಈ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ತಿಳಿಸಿದರು.
ಇಲ್ಲಿನ ಎಂಬಿಎ ಕಾಲೇಜು ಮೈದಾನದ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸಚಿವರನ್ನು ಭೇಟಿ ಮಾಡಿದ ಸುದ್ದಿಗಾರರು, ‘ಮೈಸೂರು ಸ್ಯಾಂಡಲ್ ಸೋಪ್’ ರಾಯಭಾರಿಯಾಗಿ ತಮ್ಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಪ್ರಶ್ನಿಸಿದರು.
‘ಕನ್ನಡದಲ್ಲಿಯೂ ಪ್ರತಿಭಾವಂತ ನಟಿಯರಿದ್ದಾರೆ. ಆದರೆ, ಬಹುಭಾಷಾ ನಟಿಯನ್ನು ರಾಯಭಾರಿಯಾಗಿ ಈಗಾಗಲೇ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದ ಅವರು, ‘ಆಯ್ಕೆಯ ಹಿಂದೆ ತಮ್ಮ ಪಾತ್ರವಿದೆ’ ಎಂಬ ವಿರೋಧ ಪಕ್ಷದ ಆರೋಪವನ್ನು ತಳ್ಳಿ ಹಾಕಿದರು.
‘ಕೋವಿಡ್‌ಗೆ ಯಾರೂ ಭಯಪಡುವ ಅಗತ್ಯವಿಲ್ಲ. ಸೋಂಕು ಹರಡದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಆದರೆ, ಪ್ರತಿಯೊಬ್ಬರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರು ಹಾಜರಾಗಿರುವ ಕುರಿತು ಪ್ರತಿಕ್ರಿಯೆ ನೀಡಲು ಸಚಿವರು ನಿರಾಕರಿಸಿದರು.
ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಅನ್ವರ್ ಭಾಷಾ, ಮುಖಂಡ ಸಿರಾಜ್ ಮಹಮ್ಮದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.