ADVERTISEMENT

ಇಂದಿನ ತಂತ್ರಜ್ಞಾನ ನಾಳೆಗೆ ಹಳತು

ವಾಣಿಜ್ಯೋತ್ಸವ ಉದ್ಘಾಟಿಸಿದ ಉದ್ಯಮಿ ಅಥಣಿ ವೀರಣ್ಣ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2019, 15:30 IST
Last Updated 23 ಡಿಸೆಂಬರ್ 2019, 15:30 IST
ದಾವಣಗೆರೆಯ ಬಾಪೂಜಿ ಹೈಟೆಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾಣಿಜ್ಯೋತ್ಸವ ಪ್ರದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮತ್ತು ಉದ್ಯಮಿ ಅಥಣಿ ವೀರಣ್ಣ ಅವರು ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳನ್ನು ವಿಕ್ಷಿಸಿದರು
ದಾವಣಗೆರೆಯ ಬಾಪೂಜಿ ಹೈಟೆಕ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾಣಿಜ್ಯೋತ್ಸವ ಪ್ರದರ್ಶನದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮತ್ತು ಉದ್ಯಮಿ ಅಥಣಿ ವೀರಣ್ಣ ಅವರು ವಿದ್ಯಾರ್ಥಿಗಳು ತಯಾರಿಸಿದ್ದ ವಿವಿಧ ಮಾದರಿಗಳನ್ನು ವಿಕ್ಷಿಸಿದರು   

ದಾವಣಗೆರೆ: ತಂತ್ರಜ್ಞಾನದ ಅತಿ ವೇಗದಲ್ಲಿ ಬೆಳೆಯುತ್ತಿದೆ. ಇಂದಿನ ತಂತ್ರಜ್ಞಾನ ನಾಳೆಗೆ ಹಳತಾಗಿರುತ್ತದೆ. ಬೇರೆ ವರ್ಶನ್‌ ಬಂದಿರುತ್ತದೆ ಎಂದು ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಟೆಕ್‌ ಎಜುಕೇಶನ್‌ ಚಯರ್‌ಮನ್‌, ಉದ್ಯಮಿ ಅಥಣಿ ವೀರಣ್ಣ ಹೇಳಿದರು.

ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಹೈ ಟೆಕ್‌ ಎಜುಕೇಶನ್‌ನಿಂದ ಸೋಮವಾರ ನಡೆದ ‘ವಾಣಿಜ್ಯೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮೊಬೈಲ್‌ ಬರುವುದಕ್ಕಿಂತ ಸ್ವಲ್ಪ ಮೊದಲು ಪೇಜರ್‌ ಎಂಬುದೊಂದು ತಂತ್ರಜ್ಞಾನ ಬಂದಿತ್ತು. ಅದರ ಆಯಸ್ಸು ಬರೀ ಆರೇ ತಿಂಗಳಾಗಿತ್ತು. ಮೊಬೈಲ್‌ ಬಂದ ಮೇಲೆ ನಾಪತ್ತೆಯಾಗಿ ಬಿಟ್ಟಿತ್ತು. ಹಿಂದೆ ನಾವು ಕಲಿಯುವ ಸಮಯದಲ್ಲಿ ಕೆಲವೇ ಕೋರ್ಸ್‌ಗಳಿದ್ದವು. ಈಗ ಎಲ್ಲಾ ವಿಭಾಗದಲ್ಲಿ ಇ–ಸೌಲಭ್ಯ ಅಂದರೆ ಎಲೆಕ್ಟ್ರಾನಿಕ್‌ ತಂತ್ರಜ್ಞಾನ ಸೇರಿಕೊಂಡು ಇರುತ್ತದೆ. ಹಾಗಾಗಿ ಕಳೆದ ಶತಮಾನದಲ್ಲಿ ಹುಟ್ಟಿರುವ ನಾವು ಈ ಶತಮಾನದ ಮಕ್ಕಳಿಂದ ಬಹಳಷ್ಟು ಕಲಿಯಬೇಕಾಗಿದೆ’ ಎಂದರು.

ADVERTISEMENT

‘ಓದಿದರಷ್ಟೇ ಸಾಲದು. ಎಲ್ಲರಂಗದಲ್ಲಿಯೂ ತೊಡಗಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಸವಾಲು ಎಸೆಯುವವರಾಗಬೇಕಿದ್ದರೆ ಗಟ್ಟಿಯಾಗಿರಬೇಕು’ ಎಂದು ಸಲಹೆ ನೀಡಿದರು.

‘ಬೆಂಗಳೂರು ಹೊರತುಪಡಿಸಿದರೆ ಎಂಬಿಎ ಇಷ್ಟು ವಿಶಾಲ ಕಟ್ಟಡದಲ್ಲಿ ರಾಜ್ಯದ ಎಲ್ಲೂ ನಡೆಯುತ್ತಿಲ್ಲ. ನಮ್ಮಲ್ಲಿ 360 ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. ವಾಣಿಜ್ಯವನ್ನು ಪ್ರಮುಖ ಕೋರ್ಸ್‌ ಆಗಿ ಈಗ ಆರಂಭಿಸಿದ್ದೇವೆ. ಬಾಪೂಜಿಯಲ್ಲಿ ಕಲಿತವರು ಎಂದರೆ ಜಗತ್ತು ಗುರುತಿಸುವಂತಾಗಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಶುಭ ಹಾರೈಸಿದರು. ಪ್ರಾಂಶುಪಾಲ ಡಾ. ಬಿ. ವೀರಪ್ಪ ಸ್ವಾಗತಿಸಿದರು. ನಿರ್ದೇಶಕ ಡಾ. ಸ್ವಾಮಿ ತ್ರಿಭುವನಂ ಎಚ್‌.ವಿ. ವಂದಿಸಿದರು. ಡಾ. ನವೀನ್‌ ನಾಗರಾಜ್‌, ಡಾ. ಸುಜಿತ್‌, ಇಂಚರಾ ಇದ್ದರು.

ವಾಣಿಜ್ಯೋತ್ಸವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮಾದರಿ, ಪೋಸ್ಟರ್‌, ಕರೆನ್ಸಿ, ಎಜ್ಯು ಟಿಕ್‌ಟಾಕ್, ನೃತ್ಯ ಪ್ರದರ್ಶಿಸಿದರು. ಅಂತಾರಾಷ್ಟ್ರೀಯ ಕರೆನ್ಸಿಗಳು, ಬ್ಯಾಂಕಿಂಗ್‌ ಕ್ಯಾಶ್‌ಲೆಸ್‌ ವ್ಯವಹಾರ, ಮೊಬೈಲ್‌ ಬ್ಯಾಂಕುಂಗ್‌, ವಿದೇಶಿ ವಿನಿಮಯ, ಇ–ವಾಣಿಜ್ಯ, ಸಾರ್ವಜನಿಕ ವಿತರಣಾ ವ್ಯವಸ್ಥೆ, ಕೃಷಿ ವ್ಯವಹಾರ, ಡೈರಿ ವ್ಯಾಪಾರ, ಆಹಾರ ಮತ್ತು ಸಂಸ್ಕರಣ ಕೈಗಾರಿಕೆಗಳು, ಕೈಮಗ್ಗ, ಚಿಲ್ಲರೆ ವ್ಯಾಪಾರ, ಜಿಎಸ್‌ಟಿ, ಸಾರಿಗೆ ಮತ್ತು ಲಾಜಿಸ್ಟಿಕ್‌, ಸೈಬರ್‌ ಅಪರಾಧದ ಬಗೆಗಿನ ಪ್ರದರ್ಶನಗಳು ಗಮನ ಸೆಳೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.