ಹರಿಹರ: ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿನ ಬಿರುಸಿನ ಮಳೆ ಹಾಗೂ ಭದ್ರಾ ಡ್ಯಾಂನಿಂದ ನೀರು ಹರಿ ಬಿಟ್ಟಿರುವುದರಿಂದ ತಾಲ್ಲೂಕಿನಲ್ಲಿ ಹರಿಯುತ್ತಿರುವ ಜಿಲ್ಲೆಯ ಜೀವ ನದಿ ತುಂಗಭದ್ರ ನದಿ ಮೈದುಂಬಿದ್ದು, ದೃಶ್ಯ ನೋಡಲು ಜನರು ಗುಂಪು– ಗುಂಪಾಗಿ ಬರುತ್ತಿದ್ದಾರೆ.
ವಾರದಿಂದ ಸುತ್ತಲಿನ ಜಿಲ್ಲೆಗಳಲ್ಲಿ ಮಳೆಯು ಬಿರುಸುಗೊಂಡಿದೆ. ಹಳ್ಳ, ಕೊಳ್ಳಗಳು ತುಂಬಿದ್ದು, ತುಂಗಭದ್ರಾ ಮೈದುಂಬಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ.
ತಾಲ್ಲೂಕಿನ ಗ್ರಾಮೀಣ ಭಾಗಗಳಿಂದ ಹರಿದು ಬರುವ ನದಿಯು ನಗರ ವ್ಯಾಪ್ತಿಗೆ ಬರುವಾಗ ಪೂರ್ವದಿಂದ ಉತ್ತರದ ಕಡೆ ತಿರುವು ಪಡೆಯುತ್ತದೆ. ಹಾಗೆ ತಿರುವು ಪಡೆಯುವಾಗ ಈಗಿನ ಸೂಳೆಕೆರೆ ಹಳ್ಳಿ ಹಿಂದಿನ ಹರಿದ್ರಾವತಿ ನದಿಯನ್ನು ತನ್ನ ಒಡಲಿಗೆ ಸೇರಿಸಿಕೊಂಡು ಮತ್ತಷ್ಟು ಉಬ್ಬಿ ಮುಂದೆ ಸಾಗುವ ಮನಮೋಹಕ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.
ಹಾಗೆ ಪೂರ್ವದಿಂದ ಉತ್ತರದತ್ತ ಪಥ ಬದಲಿಸುವ ನದಿಯು ನದಿಗೆ ನಿರ್ಮಿಸಿರುವ ಹೊರ ಸೇತುವೆ, ಶತಮಾನ ಕಂಡ ಹಳೆ ಸೇತುವೆ ನಂತರ ರೈಲು ಸೇತುವೆ ಮೂಲಕ ಹಾದು ಹರಪನಹಳ್ಳಿ ತಾಲ್ಲೂಕಿನೆಡೆಗೆ ಸಾಗುತ್ತದೆ. ನದಿಯ ಈ ಮೈಮಾಟವನ್ನು ಕಣ್ತುಂಬಿಕೊಳ್ಳಲು ಹರಿಹರ, ದಾವಣಗೆರೆ ಹಾಗೂ ಸುತ್ತಲಿನ ಪ್ರದೇಶದಿಂದ ನೂರಾರು ಜನರು ಕುಟುಂಬ ಸಮೇತ ರಾಘವೇಂದ್ರ ಮಠದ ಹಿಂಬದಿಯ ಯೋಗ ಮಂಟಪಕ್ಕೆ ಬರುತ್ತಿದ್ದಾರೆ.
ಸುರಕ್ಷತೆ ಹೆಚ್ಚಲಿ: ನದಿಯ ಈ ಭಾಗದಲ್ಲಿ ಬರುವ ನೂರಾರು ಜನರಲ್ಲಿ ಹಲವರು ಸೆಲ್ಫಿಗಾಗಿ ನದಿಯ ಸಮೀಪಕ್ಕೆ ಹೋಗುತ್ತಿದ್ದಾರೆ, ಸೇತುವೆಯ ಮೇಲಿನಿಂದ ಯೋಗ ಮಂಟಪದ ಮೆಟ್ಟಿಲುಗಳನ್ನು ಇಳಿಯುತ್ತಾರೆ. ನದಿ ಸಮೀಪಕ್ಕೆ ಜನರು ಹೋಗದಂತೆ ನೋಡಿಕೊಳ್ಳಲು ಓರ್ವ ಗೃಹರಕ್ಷಕ ಸಿಬ್ಬಂದಿ ಮಾತ್ರ ಇದ್ದಾರೆ. ಅವರು ವಿಷಲ್ ಊದಿ ನದಿಯಿಂದ ದೂರ ಇರಲು ಎಷ್ಟೇ ಎಚ್ಚರಿಕೆ ಕೊಟ್ಟರು ಜನರು ಗಮನವನ್ನೇ ಕೊಡುತ್ತಿಲ್ಲ.
‘ಇಲ್ಲಿ ಧ್ವನಿವರ್ಧಕವನ್ನು ಅಳವಡಿಸಬೇಕು, ಹೆಚ್ಚಿನ ಸಿಬ್ಬಂದಿಯನ್ನೂ ನಿಯೋಜಿಸುವ ಅಗತ್ಯ’ ಎಂದು ಹಲವರ ಅಭಿಪ್ರಾಯವಾಗಿದೆ.
ಪ್ರವಾಹ ಭೀತಿ: ನದಿಯಲ್ಲಿ ಇನ್ನಷ್ಟು ನೀರಿನಹರಿವು ಹೆಚ್ಚಾದಲ್ಲಿ ನಗರದ ಗಂಗಾನಗರದ ಹಲವು ಮನೆಗಳು ಜಲಾವೃತವಾಗುವ ಭೀತಿ ಇದೆ. ಪ್ರತಿ ವರ್ಷದ ಮಳೆಗಾಲದಲ್ಲಿ ತಾಲ್ಲೂಕು ಆಡಳಿತ ಈ ಭಾಗದ 20ಕ್ಕೂ ಹೆಚ್ಚು ಮನೆಗಳ ಕುಟುಂಬದವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.