ADVERTISEMENT

ದಾವಣಗೆರೆ: ಆರ್‌ಟಿಐ ಕಾರ್ಯಕರ್ತ ಸಾವು, ಇಬ್ಬರು ಪೊಲೀಸರ ಅಮಾನತು

​ಪ್ರಜಾವಾಣಿ ವಾರ್ತೆ
Published 29 ಮೇ 2023, 12:51 IST
Last Updated 29 ಮೇ 2023, 12:51 IST
ಹರೀಶ್ ಹಳ್ಳಿ
ಹರೀಶ್ ಹಳ್ಳಿ   

ದಾವಣಗೆರೆ: ಪೊಲೀಸರ ವಶದಲ್ಲಿದ್ದಾಗ ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಗಾಂಧಿನಗರ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಕೃಷ್ಣಪ್ಪ ಹಾಗೂ ಕಾನ್‌ಸ್ಟೆಬಲ್ ದೇವರಾಜ್ ಅವರನ್ನು ಅಮಾನತು ಮಾಡಲಾಗಿದೆ.

ನಿವೇಶನಗಳನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ ಆರೋಪದಡಿ ದಾಖಲಾಗಿದ್ದ ಪ್ರಕರಣದ ವಿಚಾರಣೆಗಾಗಿ ಪೊಲೀಸರು ಹರೀಶ್‌ ಹಳ್ಳಿ ಅವರನ್ನು ಭಾನುವಾರ ತಡರಾತ್ರಿ ಕಾಕನೂರಿನಲ್ಲಿ ವಶಕ್ಕೆ ಪಡೆದು ಕಾರಿನಲ್ಲಿ ದಾವಣಗೆರೆಗೆ ಕರೆದುಕೊಂಡು ಬರುತ್ತಿದ್ದರು. ತೋಳಹುಣಸೆ ಬಳಿ ಬಂದಾಗ ಹರೀಶ್‌ ಅವರು ತಪ್ಪಿಸಿಕೊಂಡು ಮೇಲ್ಸೇತುವೆಯಿಂದ ಜಿಗಿದು ಸರ್ವೀಸ್‌ ರಸ್ತೆಗೆ ಬಿದ್ದಿದ್ದರಿಂದ ಗಾಯಗೊಂಡು ಮೃತಪಟ್ಟಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು. ತಮ್ಮ ಪತಿಯನ್ನು ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಹರೀಶ್‌ ಅವರ ಪತ್ನಿ ಕೆ.ಆರ್‌. ಲತಾ ದೂರು ನೀಡಿದ್ದರು.

‘ನಕಲಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೊಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಬಲವಾದ ಸಾಕ್ಷಿ ಇಲ್ಲದಿರುವುದರಿಂದ ಕರ್ತವ್ಯದಲ್ಲಿದ್ದ ಪೊಲೀಸರನ್ನು ಇನ್ನೂ ಬಂಧಿಸಿಲ್ಲ. ಸದ್ಯಕ್ಕೆ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದ್ದು, ತನಿಖೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ.ಅರುಣ್ ತಿಳಿಸಿದರು.

ADVERTISEMENT

ಸಿಐಡಿ ತನಿಖೆಗೆ ಆದೇಶಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಈಗಾಗಲೇ ಮನವಿ ಮಾಡಲಾಗಿದೆ. ಅಧಿಕೃತ ಆದೇಶ ಇನ್ನೆರಡು ದಿನಗಳಲ್ಲಿ ಬರುವ ನಿರೀಕ್ಷೆ ಇದೆ. ಇದರ ನಡುವೆಯೇ ಸಿಐಡಿಯ ಡಿಎಸ್‌ಪಿ ಹುದ್ದೆಯ ಅಧಿಕಾರಿಯೊಬ್ಬರು ದಾವಣಗೆರೆಗೆ ಬಂದಿದ್ದು, ಪ್ರಕರಣ ಸಂಬಂಧ ಪ್ರಾಥಮಿಕ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.