ADVERTISEMENT

ಚನ್ನಗಿರಿ | ಉಬ್ರಾಣಿ ಏತ ನೀರಾವರಿ; ರೈತರ ಬದುಕು ಹಸನು

ಮಲಹಾಳ್ ಕೆರೆಗೆ ಮಾಜಿ ಶಾಸಕರಿಂದ ಬಾಗಿನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 7:11 IST
Last Updated 18 ಅಕ್ಟೋಬರ್ 2025, 7:11 IST
ಚನ್ನಗಿರಿ ತಾಲ್ಲೂಕು ಮಲಹಾಳ್ ಕೆರೆ ತುಂಬಿದ್ದು ಶುಕ್ರವಾರ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಾಗಿನ ಅರ್ಪಿಸಿದರು
ಚನ್ನಗಿರಿ ತಾಲ್ಲೂಕು ಮಲಹಾಳ್ ಕೆರೆ ತುಂಬಿದ್ದು ಶುಕ್ರವಾರ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಾಗಿನ ಅರ್ಪಿಸಿದರು   

ಮಲಹಾಳ್ (ಚನ್ನಗಿರಿ): ‘ರಾಜ್ಯದಲ್ಲಿ ಅನೇಕ ಏತ ನೀರಾವರಿ ಯೋಜನೆಗಳು ವೈಫಲ್ಯ ಕಂಡಿದ್ದವು. ಇಂತಹ ಸಮಯದಲ್ಲಿ ಉಬ್ರಾಣಿ ಏತ ನೀರಾವರಿ ಯೋಜನೆ ನಮ್ಮ ತಾಲ್ಲೂಕಿನಲ್ಲಿ ಯಶಸ್ವಿಯಾಗಿದ್ದು ಈ ಯೋಜನೆಯಿಂದ ರೈತರ ಬದುಕು ಹಸನಾಗಿದೆ’ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ತಾಲ್ಲೂಕಿನ ಮಲಹಾಳ್ ಗ್ರಾಮದಲ್ಲಿ ಶುಕ್ರವಾರ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.

‘ಉಬ್ರಾಣಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಹಿಂದಿನ ಶಾಸಕರಾಗಿದ್ದ ಕರಿಯಣ್ಣ, ಮಹಿಮಾ ಪಟೇಲ್, ವಡ್ನಾಳ್ ರಾಜಣ್ಣ ಹಾಗೂ ಡಿ.ಎಚ್. ಶಂಕರಮೂರ್ತಿ ಅವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. 2008ರಲ್ಲಿ ನಾನು ಶಾಸಕನಾಗಿದ್ದ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಯೋಜನೆಗೆ ₹ 100 ಕೋಟಿ ಅನುದಾನವನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದ ಕಾರಣದಿಂದಾಗಿ ಅಂದಿನ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿಯವರು ಈ ಯೋಜನೆಯನ್ನು ಲೋಕಾರ್ಪಣೆ ಮಾಡಿದರು’ ಎಂದರು.

ADVERTISEMENT

‘ಸಿರಿಗೆರೆ ಶ್ರೀಗಳು ಹಾಗೂ ಪಾಂಡೋಮಟ್ಟಿ ಸ್ವಾಮೀಜಿ ಸತತ ಪರಿಶ್ರಮದ ಫಲವಾಗಿ ಈ ಯೋಜನೆ ಯಶಸ್ವಿಯಾಯಿತು. ಈ ಭಾಗದ ಕೆರೆಗಳು ತುಂಬಿ ರೈತರು ನೆಮ್ಮದಿಯಿಂದ ಜೀವನ ಸಾಗುವಂತಾಗಿದೆ’ ಎಂದು ಹೇಳಿದರು.

‘ಶಾಸಕರು ಬೆಂಕಿಕೆರೆ, ಹೊದಿಗೆರೆ ಹಾಗೂ ಬಾಕಿ ಉಳಿದಿರುವ ಕೆರೆಗಳನ್ನು ತುಂಬಿಸಲು ಮುಂದಾಗಬೇಕು. ಕೆರೆಗಳು ತುಂಬಿರುವುದರಿಂದ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರೈತರು ಅಡಿಕೆ ತೋಟಗಳನ್ನು ಮಾಡಿಕೊಂಡು ನೆಮ್ಮದಿಯ ಜೀವನ ನಡೆಸುವಂತಾಗಿದೆ’ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ತಿಪ್ಪೇಶಪ್ಪ, ರಂಗನಾಥ್, ಕೆ.ಸಿ. ರವಿ, ಜಿ. ಕೃಷ್ಣಪ್ಪ, ಜಿ.ಎಸ್. ಬಸವಂತಪ್ಪ, ತಿಮ್ಮಯ್ಯ, ಪಾಲಾಕ್ಷಪ್ಪ, ದರ್ಶನ್, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಸಿ. ಕುಮಾರಸ್ವಾಮಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.