ADVERTISEMENT

ಅಂತರ ಮರೆತು ಹಣ್ಣು, ತರಕಾರಿ ಖರೀದಿಸಿದ ಗ್ರಾಹಕರು

ಯುಗಾದಿ ಖರೀದಿ ಭರಾಟೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 3:58 IST
Last Updated 13 ಏಪ್ರಿಲ್ 2021, 3:58 IST
ಯುಗಾದಿ ಹಬ್ಬದ ಆಚರಣೆಗಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಮಾವು ಹಾಗೂ ಬೇವನ್ನು ಖರೀದಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಯುಗಾದಿ ಹಬ್ಬದ ಆಚರಣೆಗಾಗಿ ದಾವಣಗೆರೆಯ ಪ್ರವಾಸಿ ಮಂದಿರ ರಸ್ತೆಯಲ್ಲಿ ಮಾವು ಹಾಗೂ ಬೇವನ್ನು ಖರೀದಿಸಿದರು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಏ 13ರಂದು (ಮಂಗಳವಾರ) ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಜಿಲ್ಲೆಯ ಜನರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಆತಂಕದ ನಡುವೆಯೂ ಅಂತರ ಮರೆತು ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೇವು ಹಾಗೂ ಮಾವಿನ ಎಲೆಗಳನ್ನು ಖರೀದಿಸಿದರು.

ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷದ ಆರಂಭವೇ ಯುಗಾದಿ. ಅಂದು ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು, ಬೇವು ಬೆಲ್ಲ ತಿಂದು ಮನೆ ಮಂದಿಯೆಲ್ಲ ಹೊಸ ಸಂವತ್ಸರದ ಸ್ವಾಗತಕ್ಕೆ ಜನರು ಅಣಿಯಾಗಿದ್ದಾರೆ.ಹಬ್ಬದ ಮುನ್ನಾ ದಿನವಾದ ಸೋಮವಾರ ಅಮಾವಾಸ್ಯೆ ಪೂಜೆ ನೆರವೇರಿಸಿದರು. ಕೆಲವರು ವಾಹನಗಳಿಗೆ ಪೂಜೆ ಸಲ್ಲಿಸಿದರು. ಮಾವಿನ ತಳಿರು–ತೋರಣಗಳಿಂದ ಮನೆಗಳನ್ನು ಶೃಂಗರಿಸಲಾಗಿತ್ತು. ಹೆಂಗೆಳೆಯರು ಬಣ್ಣದ ಅಕ್ಕಿ ಅಥವಾ ಹೂವಿನ ದಳಗಳಿಂದ ವಿವಿಧ ವಿನ್ಯಾಸದ ರಂಗೋಲಿ ಬಿಡಿಸಿದ್ದಿದ್ದು ಕಂಡುಬಂತು.

ನಗರದ ಚಾಮರಾಜಪೇಟೆ, ಗಡಿಯಾರದ ಕಂಬದ ಮಾರುಕಟ್ಟೆಗಳಲ್ಲಿ ಭಾನುವಾರದಿಂದಲೇ ಜನಸಂದಣಿ ಕಂಡುಬಂತು. ರೈತರು ಮಾವು–ಬೇವಿನ ಎಲೆಗಳು, ಲೋಳೆಸರ, ದವನ, ಬಿಲ್ವಪತ್ರೆಗಳನ್ನು ಮಾರಾಟ ಮಾಡಿದರು.ಹೊಸ ವರ್ಷಕ್ಕೆ ಹೊಸ ಉಡುದಾರವನ್ನು ಹಾಕಿಕೊಳ್ಳುವುದು ವಾಡಿಕೆ. ಹೀಗಾಗಿ ಉಡುದಾರ ಖರೀದಿಯೂ ಭರದಿಂದ ಸಾಗಿತ್ತು. ಒಂದು ಉಡುದಾರವನ್ನು ₹5ರಿಂದ ₹10ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ADVERTISEMENT

ಮಾವಿನ ಸೊಪ್ಪು ಒಂದು ಕಟ್ಟಿಗೆ ₹ 10ರಿಂದ ₹ 20ಕ್ಕೆ ಹಾಗೂ ಬೇವಿನ ಸೊಪ್ಪಿನ ಕಟ್ಟನ್ನು ₹10ಕ್ಕೆ ಕೊಡಲಾಗುತ್ತಿತ್ತು. ಯುಗಾದಿ ಹಬ್ಬದ ಪೂಜೆಗಾಗಿ ಬಿಲ್ವಪತ್ರೆ ಒಂದು ಮಾರು ಮಾಲೆಗೆ ₹ 30 ಹಾಗೂ ದವನದ ಸೊಪ್ಪನ್ನು ₹ 10ಕ್ಕೆ ಮಾರಾಟ ಮಾಡಲಾಗುತ್ತಿತ್ತು. ತರಕಾರಿ ಬೆಲೆಯಲ್ಲಿ ತುಸು ಇಳಿಕೆ ಕಂಡು ಬಂದಿದ್ದರೂ ಹಣ್ಣಿನ ಬೆಲೆಗಳು ಹೆಚ್ಚಿತ್ತು. ಹಾಗಿದ್ದೂ ಹೂವು–ಹಣ್ಣುಗಳ ಖರೀದಿಯ ಭರಾಟೆ ಜೋರಾಗಿತ್ತು.

ಹೂವಿನ ದರ ಮಾಮೂಲಿಗಿಂತ ದುಪ್ಪಟ್ಟಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಹೂವಿನ ಬೆಲೆ ಏರಿಕೆ ಕಂಡುಬಂದಿತು. ಕನಕಾಂಬರ ಹಾಗೂ ಮಲ್ಲಿಗೆ ಹೂವುಗಳು ಒಂದು ಮಾರಿಗೆ ₹ 80ರಿಂದ ₹ 100ಕ್ಕೆ ಮಾರಾಟವಾದವು.ಹಬ್ಬದ ನಿಮಿತ್ತ ಬೇಳೆ, ಬೆಲ್ಲ, ಸಕ್ಕರೆ, ಅಡುಗೆ ಎಣ್ಣೆ, ಶ್ಯಾವಿಗೆ ಸೇರಿ ಎಲ್ಲಾ ಪದಾರ್ಥಗಳೂ ದುಬಾರಿಯಾಗಿದ್ದವು.

ಬಟ್ಟೆ ಅಂಗಡಿಗಳಲ್ಲಿ ಜನಜಂಗುಳಿ:

ಹಬ್ಬಕ್ಕೆ ಹೊಸ ಬಟ್ಟೆಗಳನ್ನೂ ಖರೀದಿಸಲು ಜನ ಮುಂದಾಗಿದ್ದರಿಂದ ನಗರದ ಜವಳಿ ಅಂಗಡಿಗಳಲ್ಲೂ ಜನದಟ್ಟಣೆ ಕಂಡುಬಂದಿತು.

‘ಯುಗಾದಿ ಹಬ್ಬಕ್ಕೆ ಹೋಳಿಗೆಯ ಜೊತೆಗೆ ಮಾವು ಹೊಸದಾಗಿ ಬಂದಿರುವುದರಿಂದ ಅದರಿಂದ ತಯಾರಿಸಿದ ಚಿತ್ರಾನ್ನ, ಉಪ್ಪಿನಕಾಯಿ ತಯಾರಿಸುತ್ತೇವೆ. ಈ ಹಬ್ಬದಲ್ಲಿ ಹೆಚ್ಚಿನ ಸಂಭ್ರಮ ಇಲ್ಲ, ತೀರಾ ಕಳೆಗಟ್ಟಿಲ್ಲ. ಮಾಮೂಲಿನಂತೆ ನಡೆಯುತ್ತಿದೆ. ಮಂಗಳವಾರ ಹೊಸ ಬಟ್ಟೆಗಳನ್ನು ತೊಟ್ಟು ಚಂದ್ರನನ್ನು ನೋಡಲು ಕಾಯುತ್ತಿದ್ದೇವೆ’ ಎನ್ನುತ್ತಾರೆ ಗೃಹಿಣಿ ಸೌಮ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.