ADVERTISEMENT

ವಿಶೇಷ ಮಕ್ಕಳ ಪೋಷಕರ ಕಷ್ಟ ಅರ್ಥ ಮಾಡಿಕೊಳ್ಳಿ- ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ

₹ 24.61 ಕೋಟಿ ವೆಚ್ಚದ ಸಿ.ಆರ್.ಸಿ. ಕಟ್ಟಡಕ್ಕೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 4:07 IST
Last Updated 17 ಏಪ್ರಿಲ್ 2022, 4:07 IST
ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿ ಬಳಿ ಶನಿವಾರ ನಡೆದ ಸಂಯುಕ್ತ ಪ್ರಾದೇಶಿಕ ಕೇಂದ್ರದ ಕಟ್ಟಡದ (ಸಿಆರ್‌ಸಿ) ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಪರಿಕರ ವಿತರಿಸಲಾಯಿತು
ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿ ಬಳಿ ಶನಿವಾರ ನಡೆದ ಸಂಯುಕ್ತ ಪ್ರಾದೇಶಿಕ ಕೇಂದ್ರದ ಕಟ್ಟಡದ (ಸಿಆರ್‌ಸಿ) ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಪರಿಕರ ವಿತರಿಸಲಾಯಿತು   

ದಾವಣಗೆರೆ: ಅಂಗವಿಕಲರು ಮತ್ತು ವಿಶೇಷ ಸಾಮರ್ಥ್ಯದ ಮಕ್ಕಳು ಮನೆಯಲ್ಲಿದ್ದರೆ ಆ ಮಕ್ಕಳ ಪೋಷಣೆ ಮಾಡುವುದರಲ್ಲೇ ಹೆತ್ತವರ ಅರ್ಧ ಜೀವನ ಕಳೆದು ಹೋಗುತ್ತದೆ. ಅವರ ಕಷ್ಟ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಹೇಳಿದರು.

ಶನಿವಾರ ದಾವಣಗೆರೆ ತಾಲ್ಲೂಕಿನ ವಡ್ಡಿನಹಳ್ಳಿ ಬಳಿ ಬೌದ್ಧಿಕ ದಿವ್ಯಾಂಗ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ₹ 24.61 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸಂಯುಕ್ತ ಪ್ರಾದೇಶಿಕ ಕೇಂದ್ರದ ಕಟ್ಟಡದ (ಸಿಆರ್‌ಸಿ) ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ದಿವ್ಯಾಂಗರಿಎಗ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲ. ಸಿಆರ್‌ಸಿಗಳನ್ನೇ ಹುಡುಕಿ ಹೋಗಬೇಕಾಗುತ್ತದೆ. ನಿಮ್ಹಾನ್ಸ್‌ನಲ್ಲಿ ಸಿಆರ್‌ಸಿ ವಿಭಾಗ ಇದೆ. ದಾವಣಗೆರೆಯ ಸಿಆರ್‌ಸಿಯಲ್ಲಿ ಎಲ್ಲ ಚಿಕಿತ್ಸೆಗಳು ದೊರೆಯುತ್ತವೆ ಎಂದು ಹೇಳಿದರು.

ADVERTISEMENT

ಮಕ್ಕಳಿಗೆ ಕಿವಿ ಕೇಳದ ಸಮಸ್ಯೆ ಇದ್ದರೆ 5 ವರ್ಷದೊಳಗೆ ಸೂಕ್ತ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಆ ಮಕ್ಕಳಿಗೆ ಕಿವಿ ಕೇಳಿಸುವಂತೆ ಮಾಡಬಹುದು. ಆಗ ಮಕ್ಕಳು ಮಾತನಾಡಲೂ ಸಾಧ್ಯವಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮಕ್ಕಳ ಈ ಸಮಸ್ಯೆಯನ್ನು ಹೆತ್ತವರು ಮುಚ್ಚಿಡುತ್ತಾರೆ. ಇದು ಅಪರಾಧ. ಅದಕ್ಕಾಗಿ ಸಂಯುಕ್ತ ಪ್ರಾದೇಶಿಕ ಕೇಂದ್ರದ ಮೂಲಕ ಪೋಷಕರಿಗೂ ತರಬೇತಿ ನೀಡಲಾಗುವುದು. ಪೋಷಕರನ್ನು ಒಂದು ರೀತಿ ತರಬೇತಿದಾರರನ್ನಾಗಿ ಹಾಗೂ ವೈದ್ಯರನ್ನಾಗಿಸಿ ದಿವ್ಯಾಂಗರಿಗೆ ನೆರವು ನೀಡಲಾಗುತ್ತದೆ ಎಂದು ವಿವರಿಸಿದರು.

ಈ ಕೇಂದ್ರವನ್ನು ಗೋವಾ ಮತ್ತು ಕರ್ನಾಟಕದವರಿಗಾಗಿ ಸ್ಥಾಪಿಸಲಾಗಿದೆ. ಚಿಕಿತ್ಸೆ ಹಾಗೂ ತರಬೇತಿ ನೀಡಲಾಗುತ್ತದೆ. ದೂರದಿಂದ ಬಂದು ಉಳಿದುಕೊಳ್ಳುವವರಿಗೆ ಎಲ್ಲ ರೀತಿಯ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಒಂದೊಂದು ಪ್ರಾದೇಶಿಕ ಸಂಯುಕ್ತ ಕೇಂದ್ರ ಸ್ಥಾಪಿಸುವ ಅವಶ್ಯಕತೆ ಇದೆ ಎಂದರು.

ಸಂಸದ ಜಿ.ಎಂ ಸಿದ್ದೇಶ್ವರ‌, ‘ತರಬೇತಿ ಕೇಂದ್ರದ ಮೂಲಕ ವಿಕಲಚೇತನರಿಗೆ ಅನೇಕ ರೀತಿಯ ಕೌಶಲ ತರಬೇತಿಗಳನ್ನು ನೀಡಲಾಗುವುದು. ವಡ್ಡಿನಲ್ಲಿ ವ್ಯಾಪ್ತಿಯಲ್ಲಿ 4 ಎಕರೆ ಮತ್ತು 5 ಎಕರೆ, ಕೊಗ್ಗನೂರಿನಲ್ಲಿ 7 ಎಕರೆಯನ್ನು ಸಿಆರ್‌ಸಿಗೆ ಮೀಸಲಿಡಲಾಗಿದೆ. 2017 ರಲ್ಲಿ ಮಂಜೂರಾದ ಕೇಂದ್ರವು ಕ್ಲಿನಿಕಲ್ ಸೇವೆಗಳನ್ನು ಒದಗಿಸುತ್ತಿತ್ತು. ಕೊಗ್ಗನೂರಿನಲ್ಲಿ ಕೌಶಲಾಭಿವೃದ್ಧಿ ಚಟುವಟಿಕೆ ನಡೆಯಲಿದೆ’ ಎಂದು ತಿಳಿಸಿದರು.

492 ಅರ್ಹ ಫಲಾನುಭವಿಗಳಿಗೆ ₹ 41 ಲಕ್ಷ ವೆಚ್ಚದ ವಿವಿಧ ಬೋಧನ ಕಲಿಕಾ ಸಾಮಗ್ರಿಗಳನ್ನು ಹಾಗೂ ಕಿಟ್ ಗಳನ್ನು ವಿತರಿಸಲಾಯಿತು.

ಮಾಯಕೊಂಡ ಶಾಸಕ ಪ್ರೊ. ಲಿಂಗಣ್ಣ, ದಾವಣಗೆರೆ ಉತ್ತರ ಶಾಸಕ ಎಸ್.ಎ. ರವೀಂದ್ರನಾಥ್, ಸಿ.ಆರ್.ಸಿ ಕೇಂದ್ರದ ಜಂಟಿ ಕಾರ್ಯದರ್ಶಿ ರಾಜೀವ್ ಶರ್ಮಾ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಸಿಆರ್‌ಸಿ ನಿರ್ದೇಶಕ ಡಾ. ಉಮಾಶಂಕರ್ ಮೊಹಂತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್ ಇದ್ದರು.

ಸಿಆರ್‌ಸಿಯಲ್ಲಿ ದೊರೆಯುವ ಸೌಲಭ್ಯ

ದಾವಣಗೆರೆಯ ಸಿಆರ್‌ಸಿಯಲ್ಲಿ ಅನೇಕ ಸೌಲಭ್ಯಗಳು ದಿವ್ಯಾಂಗರಿಗೆ ಮತ್ತು ಅಂಗವಿಕಲರಿಗೆ ದೊರೆಯಲಿದೆ.

ಆರಂಭಿಕ ಗುರುತಿಸುವಿಕೆ ಮತ್ತು ಮಧ್ಯಸ್ಥಿಕೆ, ಔದ್ಯೋಗಿಕ ಚಿಕಿತ್ಸೆ, ಭೌತಿಕ ಚಿಕಿತ್ಸೆ, ದೈಹಿಕ ವೈದ್ಯಕೀಯ ಚಿಕಿತ್ಸೆ ಮತ್ತು ಪುನರ್ವಸತಿ, ಮಾನಸಿಕ ಮಧ್ಯಸ್ಥಿಕೆ, ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್, ಮಾತನಾಡುವ ಭಾಷೆ ಮತ್ತು ಶ್ರವಣ, ವಿಶೇಷ ಶಿಕ್ಷಣ, ಕೌಶಲ್ಯ ತರಬೇತಿ, ವೃತ್ತಿಪರ ತರಬೇತಿ, ಸಹಾಯಕ ಸಾಧನಗಳ ವಿತರಣೆ, ಬೋಧನೆ ಕಲಿಕೆ ಮತ್ತು ಸಂವಹನ ಸಾಮಗ್ರಿಗಳು, ಸಮಾಜ ಕಾರ್ಯ, ಉದ್ಯೋಗ, ಔಟ್‍ರೀಚ್ ಸೇವೆಗಳು, ಮಾನವ ಸಂಪನ್ಮೂಲ ಅಭಿವೃದ್ಧಿ, ಸಂಶೋಧನೆ ಮತ್ತು ಅಭಿವೃದ್ಧಿ, ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಕೃತಕ ಅಂಗಗಳು, ಬೋಧನೆ ಮತ್ತು ಕಲಿಕಾ ಸಾಮಗ್ರಿ ಕಿಟ್‍ಗಳು, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಶ್ರವಣ ಸಾಧನಗಳು ಸೇರಿ ದೈಹಿಕ ಅಂಗವೈಕಲ್ಯ ಸಹಾಯಕ ಸಾಧನಗಳ ನಿಯಮಿತ ವಿತರಣೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.