ADVERTISEMENT

ಅನೈತಿಕ ಸಂಬಂಧ: ಪತ್ನಿ, ಪ್ರಿಯಕರನ ಕೊಲೆಗೈದ ಪತಿ

48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 15:20 IST
Last Updated 1 ನವೆಂಬರ್ 2020, 15:20 IST
ಹನುಮಂತರಾಯ
ಹನುಮಂತರಾಯ   

ದಾವಣಗೆರೆ: ಪತ್ನಿ ಅನೈತಿಕ ಸಂಬಂಧದ ಕಾರಣದಿಂದ ಬೇಸತ್ತ ಪತಿ, ಸಹೋದರನ ಜೊತೆ ಸೇರಿ ಪತ್ನಿ ಹಾಗೂ ಪ್ರಿಯಕರನನ್ನು ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧ 48 ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊಳಲ್ಕೆರೆಯ ನಿವಾಸಿ ಖಾಸಗಿ ಶಾಲೆಯೊಂದರ ಶಿಕ್ಷಕ ಶಿವಕುಮಾರ್ ಬಂಧಿತ. ಈತನ ಪತ್ನಿ ಶ್ವೇತಾ (26) ಹಾಗೂ ಪ್ರಿಯಕರ ವೇದಮೂರ್ತಿ (27) ಕೊಲೆಯಾದವರು. ಕೊಲೆಗೆ ಸಹಕರಿಸಿದ ಶಿವರಾಜ್ ಎಂಬಾತನ್ನು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

‘ಶಿವಕುಮಾರ್ 9 ವರ್ಷಗಳ ಹಿಂದೆ ಶ್ವೇತಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಕಾರಿಗನೂರು ಕ್ರಾಸ್ ಬಳಿ ಮನೆ ಮಾಡಿಕೊಂಡು ವಾಸವಿದ್ದರು. ಅದೇ ಗ್ರಾಮದ ವೇದಮೂರ್ತಿಗೆ ಶ್ವೇತಾ ಅವರ ಪರಿಚಯವಾಗಿ ಅನೈತಿಕ ಸಂಬಂಧ ಹೊಂದಿದ್ದ. ಈ ಸಂಬಂಧ ಪತಿ ಪತ್ನಿಯ ನಡುವೆ ಜಗಳವಾಗಿತ್ತು. ಕೆಲ ದಿನಗಳ ಹಿಂದೆ ಶ್ವೇತಾ ಅವರು ವೇದಮೂರ್ತಿ ಜೊತೆ ಓಡಿಹೋಗಿದ್ದು, ಹೊನ್ನಾಳಿ, ಹರಿಹರದಲ್ಲಿ ಸುತ್ತಾಡಿದ್ದಾರೆ. ಈ ಬಗ್ಗೆ ಕೆಲವರು ಶಿವಕುಮಾರ್‌ಗೆ ಮಾಹಿತಿ ನೀಡಿದ್ದು, ವಿಷಯ ತಿಳಿದ ಈತ ಸಹೋದರನ ಸಹಾಯದಿಂದ ವೇದಮೂರ್ತಿಯನ್ನು ಬೆಲ್ಟ್‌ನಲ್ಲಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಅಕ್ಟೋಬರ್ 28ರಂದು ವೇದಮೂರ್ತಿಯನ್ನು ಹೊನ್ನಾಳಿಯ ತುಂಗಭದ್ರಾ ನದಿಯ ದಂಡೆಯ ಮೇಲೆ ಕೊಲೆ ಮಾಡಿ ನೀರಿನಲ್ಲಿ ಬಿಸಾಡಿ ಹೋಗಿದ್ದು, ಬಳಿಕ ಪತ್ನಿಯನ್ನು ಸಾಯಿಸುವ ದುರುದ್ದೇಶದಿಂದ ‘ನಮ್ಮ ಮೇಲೆ ಆಪಾದನೆ ಬರುತ್ತದೆ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳೋಣ’ ಎಂದು ನಾಟಕವಾಡಿದ ಶಿವಕುಮಾರ್ ಪತ್ನಿಯನ್ನು ಚನ್ನಗಿರಿ ತಾಲ್ಲೂಕಿನ ಸೂಳೆಕೆರೆಗೆ ಕರೆದುಕೊಂಡು ಬಂದಿದ್ದಾನೆ. ಅಲ್ಲಿ ಸಾಯಿಸಲು ಸಾಧ್ಯವಾಗದೇ ವಿಷ ಕುಡಿಯೋಣ ಎಂದು ಹೇಳಿ ಚನ್ನಗಿರಿಗೆ ಬಂದಿದ್ದು, ಅಲ್ಲಿ ಯಾವುದೇ ಅಂಗಡಿಗಳು ತೆರೆಯದ ಕಾರಣ ಬೀರೂರು ರಸ್ತೆಯ ಮುಖಾಂತರ ರಾಜಗೊಂಡನಹಳ್ಳಿ ಗ್ರಾಮದ ತೋಟದ ಬಳಿ ಉಸಿರುಗಟ್ಟಿಸಿ 29ರಂದು ಕೊಲೆ ಮಾಡಿ ಅನುಮಾನ ಬಾರದಂತೆ ಬಾವಿಯಲ್ಲಿ ಎಸೆದು ಹೋಗಿದ್ದ’ ಎಂದು ಮಾಹಿತಿ ನೀಡಿದರು.

‘ವೇದಮೂರ್ತಿ ಪ್ರಕರಣ ಹೊನ್ನಾಳಿ ಠಾಣೆಯಲ್ಲಿ ಹಾಗೂ ಶ್ವೇತಾ ಕೊಲೆ ಪ್ರಕರಣ ಚನ್ನಗಿರಿ ಠಾಣೆಯಲ್ಲಿ ದಾಖಲಾಗಿದ್ದು, ಈ ಎರಡು ಠಾಣೆಗಳ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಜಿ.ಮುನ್ನೋಳಿ, ಸಿಪಿಐ ಆರ್.ಆರ್.ಪಾಟೀಲ್, ಪಿಎಸ್‌ಐ ಜಗದೀಶ್ (ಕಾನೂನು ಹಾಗೂ ಸುವ್ಯವಸ್ಥೆ) ಪಿಎಸ್‌ಐ ರೂಪ್ಲಿಬಾಯಿ, ಸಿಬ್ಬಂದಿ ರುದ್ರೇಶ್, ಮಂಜುನಾಥ್, ಮೊಹಮ್ಮದ್ ಖಾನ್, ಧರ್ಮ, ಪ್ರವೀಣ್‌ಗೌಡ ಹಾಗೂ ಚಾಲಕರಾದ ರಘು, ರವಿ ಹಾಗೂ ರೇವಣಸಿದ್ದಪ್ಪ ಅವರ ತಂಡಗಳನ್ನು ರಚಿಸಲಾಗಿತ್ತು’ ಎಂದು ಹೇಳಿದರು.

‘ಪ್ರಕರಣ ದಾಖಲಾದ 48 ಗಂಟೆಗಳಲ್ಲಿ ಬೆಂಗಳೂರಿನ ಸಹೋದರಿಯ ಮನೆಯಲ್ಲಿದ್ದ ಆರೋಪಿ ಶಿವಕುಮಾರ್‌ನನ್ನು ಭಾನುವಾರ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ. ಹೊನ್ನಾಳಿ ಠಾಣೆಯ ಪಿಎಸ್ಐ ಅವರೂ ಸಹಕರಿಸಿದ್ದಾರೆ’ ಎಂದು ಹೇಳಿದರು.

ಎಎಸ್‌ಪಿ ರಾಜೀವ್, ಹೊನ್ನಾಳಿ ಸಿಪಿಐ ದೇವರಾಜ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.