ADVERTISEMENT

ಕೇಂದ್ರ ಬಜೆಟ್‌ | ದಾವಣಗೆರೆ: ನಿರೀಕ್ಷೆ ಬೆಟ್ಟದಷ್ಟು; ಸಿಕ್ಕಿದ್ದು ಸಾಸಿವೆಯಷ್ಟು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 3:01 IST
Last Updated 2 ಫೆಬ್ರುವರಿ 2026, 3:01 IST
ಡಾ.ಪ್ರಭಾ ಮಲ್ಲಿಕಾರ್ಜುನ್
ಡಾ.ಪ್ರಭಾ ಮಲ್ಲಿಕಾರ್ಜುನ್   

ದಾವಣಗೆರೆ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಭಾನುವಾರ ಮಂಡಿಸಿದ ಬಜೆಟ್‌ನಲ್ಲಿ ಮಧ್ಯ ಕರ್ನಾಟಕಕ್ಕೆ ನಿರ್ದಿಷ್ಟ ಯೋಜನೆಗಳನ್ನು ಘೋಷಿಸಿಲ್ಲ. ಆದರೆ, ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಸುಧಾರಣೆ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಿರುವುದು ಜಿಲ್ಲೆಗೂ ಅನುಕೂಲಕರವಾಗುವ ನಿರೀಕ್ಷೆ ಮೂಡಿಸಿದೆ.

2025–26ನೇ ಆರ್ಥಿಕ ಸಾಲಿನ ಬಜೆಟ್‌ನಲ್ಲಿ ದಾವಣಗೆರೆ–ಚಿತ್ರದುರ್ಗ–ತುಮಕೂರು ನೇರ ರೈಲು ಮಾರ್ಗಕ್ಕೆ ₹ 549 ಕೋಟಿ ಅನುದಾನವನ್ನು ಘೋಷಣೆ ಮಾಡಲಾಗಿತ್ತು. ಹೀಗಾಗಿ, 2026–27ನೇ ಆರ್ಥಿಕ ಸಾಲಿನ ಬಜೆಟ್ ಮೇಲೆ ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮುಖ್ಯವಾಗಿ ಶಿವಮೊಗ್ಗ–ಹೊನ್ನಾಳಿ–ಮಲೆಬೆನ್ನೂರು–ಹರಿಹರ–ಮರಿಯಮ್ಮನಹಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕೋರಿಕೆಗೆ ಕೇಂದ್ರ ಸ್ಪಂದಿಸಿಲ್ಲ.

ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೆ ಒಂದು ಹಾಸ್ಟೆಲ್‌ ನಿರ್ಮಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಉನ್ನತ ಶಿಕ್ಷಣ ಪಡೆಯುವ ಹಾಗೂ ಪ್ರಯೋಗಾಲಯ ಮತ್ತು ದೀರ್ಘಾವಧಿಯ ಅಧ್ಯಯನದಲ್ಲಿ ತೊಡಗಿದ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಾಸ್ಟೆಲ್‌ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣದ ಕನಸು ಕಟ್ಟಿಕೊಂಡ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಅನುಕೂಲವಾಗಲಿದೆ.

ADVERTISEMENT

ಜನಸಾಮಾನ್ಯರು ಎದುರಿಸುತ್ತಿರುವ ವೈದ್ಯಕೀಯ ಸಮಸ್ಯೆಗಳನ್ನು ನಿವಾರಿಸಲು ಜಿಲ್ಲಾ ಆಸ್ಪತ್ರೆಯ ತುರ್ತು ಸೇವೆ ಹಾಗೂ ಟ್ರಾಮಾ ಕೇರ್‌ ಕೇಂದ್ರದ ಸಾಮರ್ಥ್ಯವನ್ನು ಶೇ 50ರಷ್ಟು ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಇದರಿಂದ ಅನುಕೂಲವಾಗುವ ಸಾಧ್ಯತೆ ಇದೆ. ಬಡವರಿಗೆ ಅನಿರೀಕ್ಷಿತವಾಗಿ ಎದುರಾಗುವ ವೈದ್ಯಕೀಯ ವೆಚ್ಚಗಳನ್ನು ಇದು ಕಡಿಮೆ ಮಾಡುವ ನಿರೀಕ್ಷೆ ಇದೆ.

‘ಕಿಸಾನ್‌ ಕ್ರೆಡಿಟ್‌ ಕಾರ್ಡ್‌’ ಸಾಲದ ಮಿತಿಯನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ. ತೋಟಗಾರಿಕೆ ಬೆಳೆಗಳತ್ತ ಉತ್ಸುಕರಾಗಿರುವ ಜಿಲ್ಲೆಯ ರೈತರಿಗೆ ಇದರಿಂದ ಅನುಕೂಲವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೈಗಾರಿಕೆಗಳ ಸ್ಥಾಪನೆ, ನೇರ ರೈಲು ಮಾರ್ಗಕ್ಕೆ ಹೆಚ್ಚಿನ ಅನುದಾನ, 2ನೇ ದರ್ಜೆಯ ನಗರಗಳಿಗೆ ಐಟಿ ಕಂಪನಿಗಳನ್ನು ಸೆಳೆಯುವ ಪ್ರಯತ್ನಕ್ಕೆ ಕೇಂದ್ರ ಬಜೆಟ್‌ನಲ್ಲಿ ಪೂರಕ ಪ್ರತಿಸ್ಪಂದನೆಗಳು ಸಿಕ್ಕಿಲ್ಲ. ಜಗಳೂರು ತಾಲ್ಲೂಕಿನಲ್ಲಿ ಏಕಲವ್ಯ ಶಾಲೆ ನಿರ್ಮಾಣಕ್ಕೆ ಕಳುಹಿಸಿದ ಪ್ರಸ್ತಾವಕ್ಕೂ ಬಜೆಟ್‌ನಲ್ಲಿ ಮಾನ್ಯತೆ ಸಿಕ್ಕಿಲ್ಲ ಎಂಬ ಟೀಕೆ ವ್ಯಕ್ತವಾಗಿದೆ.

ನಿರ್ಲಕ್ಷ್ಯ ಧೋರಣೆ: ಸಂಸದೆ

‘ದೇಶದ ಜಿಡಿಪಿ ಹಾಗೂ ತೆರಿಗೆ ಆದಾಯಕ್ಕೆ ಮಹತ್ತರ ಕೊಡುಗೆ ನೀಡುವ ಕರ್ನಾಟಕಕ್ಕೆ ಅಗತ್ಯ ಅನುದಾನ ಮತ್ತು ವಿಶೇಷ ಆದ್ಯತೆ ನೀಡದೇ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿದೆ’ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಶಿವಮೊಗ್ಗ–ಮರಿಯಮ್ಮನಹಳ್ಳಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಲು ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದನೆ ಸಿಗದಿರುವುದು ವಿಷಾದಕರ. ಜಗಳೂರು ತಾಲ್ಲೂಕಿಗೆ ಏಕಲವ್ಯ ಮಾದರಿ ಶಾಲೆ ಮಂಜೂರು ಮಾಡುವಂತೆ ಮಾಡಿಕೊಂಡಿದ್ದ ಕೋರಿಕೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ. ‘ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಬಿಸಿಯೂಟ ತಯಾರಕರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಐಟಿ ಡೀಪ್-ಟೆಕ್ ಸ್ಟಾರ್ಟ್‌ಅಪ್‌ಗಳು ಉನ್ನತ ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಮುಂಚೂಣಿಯಲ್ಲಿದ್ದರೂ ರಾಜ್ಯದ ಕೊಡುಗೆಗೆ ತಕ್ಕಷ್ಟು ಹಣಕಾಸು ಬೆಂಬಲ ಈ ಬಜೆಟ್‌ನಲ್ಲಿ ಕಾಣುತ್ತಿಲ್ಲ’ ಎಂದು ಟೀಕಿಸಿದ್ದಾರೆ.

ಬಜೆಟ್‌ ಅಭಿಪ್ರಾಯಗಳು

‘ದೇಶದ ಪ್ರಗತಿಗೆ ಮುನ್ನುಡಿ’

ಭಾರತದ ಆರ್ಥಿಕತೆಯನ್ನು ಸಶಕ್ತಗೊಳಿಸಲು ಕೇಂದ್ರ ಸರ್ಕಾರ ಗಮನ ಹರಿಸಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿದೆ. ಕ್ಯಾನ್ಸರ್‌, ಮಧುಮೇಹದಂತಹ ಔಷಧಗಳು ಜನಸಾಮಾನ್ಯರ ಕೈಗೆಟಕುವಂತೆ ಮಾಡಲಾಗಿದೆ. ಔಷಧ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ದೇಶದ ಪ್ರಗತಿಗೆ ಕೇಂದ್ರ ಬಜೆಟ್‌ ಮುನ್ನುಡಿ ಬರೆದಿದೆ.

ಜಿ.ಎಂ. ಸಿದ್ದೇಶ್ವರ, ಕೇಂದ್ರದ ಮಾಜಿ ಸಚಿವ

‘ಮೂಲಸೌಕರ್ಯಕ್ಕೆ ಒತ್ತು’

ಹೆದ್ದಾರಿ, ಮೂಲಸೌಕರ್ಯ ಅಭಿವೃದ್ಧಿ, ರೈಲ್ವೆ ಹಾಗೂ ಮೆಟ್ರೊ ಯೋಜನೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ‘ಮೇಕ್‌ ಇನ್ ಇಂಡಿಯಾ’ಗೆ ಪ್ರೋತ್ಸಾಹ ಸಿಕ್ಕಿದೆ. ರಕ್ಷಣೆ, ಎಲೆಕ್ಟ್ರಾನಿಕ್ಸ್‌ ಕ್ಷೇತ್ರಗಳನ್ನು ಬಲಪಡಿಸಲು ಮುಂದಾಗಿದೆ. ದೇಶಕ್ಕೆ ಅಗತ್ಯವಿರುವ ಔಷಧಿಯನ್ನು ಸ್ಥಳೀಯವಾಗಿಯೇ ಉತ್ಪಾದನೆ ಮಾಡುವ ಆಲೋಚನೆ ಕೇಂದ್ರ ಸರ್ಕಾರದ್ದು. ಇದೊಂದು ಮಧ್ಯಮ ವರ್ಗ ಸ್ನೇಹಿ ಬಜೆಟ್.

ಬಿ.ಪಿ.ಹರೀಶ್‌, ಹರಿಹರ ಶಾಸಕ

‘ಕೃಷಿ ಕ್ಷೇತ್ರಕ್ಕೆ ಆದ್ಯತೆ’

‘500 ಹೊಸ ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಯೋಜನೆ ಘೋಷಣೆ ಮಾಡಿದೆ. ಇದರಿಂದ ಕೃಷಿ ವಲಯಕ್ಕೆ ಉತ್ತೇಜನ ಸಿಗಲಿದ್ದು, ಇದರಿಂದ ರೈತರು ಹರ್ಷಗೊಂಡಿ
ದ್ದಾರೆ. ಸಣ್ಣ ಮತ್ತು ಅತಿ ಸಣ್ಣ ಉದ್ಯಮಕ್ಕೆ ₹ 10,000 ಕೋಟಿ ಅನುದಾನ ನೀಡಲಾಗಿದೆ. 2 ಮತ್ತು 3ನೇ ದರ್ಜೆಯ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದರಿಂದ ರಾಜ್ಯಕ್ಕೆ ಸಾವಿರಾರು ಕೋಟಿ ಅನುದಾನ ಹರಿದು ಬರಲಿದೆ. 

 ರಾಜಶೇಖರ ಎನ್‌., ಅಧ್ಯಕ್ಷ ಬಿಜೆಪಿ ಜಿಲ್ಲಾ ಘಟಕ

‘ದೂರದೃಷ್ಟಿಯ ಬಜೆಟ್’

ಉತ್ಪಾದನೆ, ಉದ್ಯೋಗಾವಕಾಶ ಹೆಚ್ಚಿಸುವ ಯೋಜನೆಗಳನ್ನು ರೂಪಿಸಿಲಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ತಂತ್ರಜ್ಞಾನ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರಗಳಿಗೆ ಅನುದಾನ ಮೀಸಲಿಡಲಾಗಿದೆ. ಭಾರತವನ್ನು ಜಾಗತಿಕವಾಗಿ ಮುಂಚೂಣಿಗೆ ತರಲು ವಿಶಿಷ್ಟವಾದ ರೂಪುರೇಷೆ ಬಜೆಟ್‌ನಲ್ಲಿ ಕಾಣುತ್ತಿದೆ. ಇದೊಂದು ದೂರದೃಷ್ಟಿಯ ಬಜೆಟ್.

ಅಶೋಕ್ ಕುಮಾರ್ ಪಾಳೇದ. ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ದಾವಣಗೆರೆ
ವಿಶ್ವವಿದ್ಯಾಲಯ

‘ಸುಸ್ಥಿರ ಆರ್ಥಿಕತೆಯ ಆಶಯ’

ಕೇಂದ್ರ ಬಜೆಟ್‌ ದೇಶದ ಸುಸ್ಥಿರ ಬೆಳವಣಿಗೆಯ ಜೊತೆಗೆ ಜನಸಾಮಾನ್ಯರ ಆಶೋತ್ತರಗಳನ್ನು ನೆರವೇರಿಸುವ ಹೆಬ್ಬಯಕೆಯಿಂದ ಕೂಡಿದೆ. ಸಮಗ್ರ ಆರ್ಥಿಕ ಸುಧಾರಣೆಗಾಗಿ ಉದ್ಯೋಗಾವಕಾಶಗಳ ಸೃಷ್ಟಿ, ಉತ್ಪಾದಕತೆಯನ್ನು ವೃದ್ಧಿಸಿದೆ. ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರಗಳ ಸುಧಾರಣೆಗೆ ಉನ್ನತ ಸಮಿತಿಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ, ಬೆಲೆ ನಿಯಂತ್ರಣ, ಕೃಷಿ ಮಾರುಕಟ್ಟೆಯ ಸುಧಾರಣೆಗೆ ನಿಗದಿತ ಕಾರ್ಯಕ್ರಮಗಳನ್ನು ರೂಪಿಸಿದ್ದರೆ ಇನ್ನೂ ಅನುಕೂಲವಾಗುತ್ತಿತ್ತು.

ಎಚ್. ಗೌಡ, ಪ್ರಾಧ್ಯಾಪಕ, ಅರ್ಥಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ

‘ಕಾರ್ಮಿಕ ವಿರೋಧಿ’

ಕೇಂದ್ರ ಬಜೆಟ್‌ ಕಾರ್ಮಿಕ ಮತ್ತು ರೈತ ವಿರೋಧಿಯಾಗಿದೆ. ಈ ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಾರ್ಪೊರೇಟ್ ಕಂಪನಿಗಳಿಗೆ ಮಣೆಹಾಕಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ವಸತಿ ಯೋಜನೆಗಳಿಗೆ ಅತ್ಯಲ್ಪ ಅನುದಾನ ಮೀಸಲಿಡಲಾಗಿದೆ. ಉದ್ಯೋಗಗಳನ್ನ ಸೃಷ್ಟಿಸುವಂತಹ ಯಾವುದೇ ಯೋಜನೆಗಳು ಇಲ್ಲ.

ಆನಂದರಾಜು ಕೆ.ಎಚ್., ಸಿಐಟಿಯು ರಾಜ್ಯ ಕಾರ್ಯದರ್ಶಿ

ಆರ್ಥಿಕ ಪ್ರಗತಿಗೆ ಪೂರಕ ಬಜೆಟ್

ಮೂಲ ಸೌಕರ್ಯಗಳಿಗೆ ಕೇಂದ್ರ ಬಜೆಟ್ ಹೆಚ್ಚು ಒತ್ತು ನೀಡಿದೆ. ಜಿಡಿಪಿ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಮಿಲಿಟರಿ, ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವವೇ ಇಲ್ಲ

ತೇಜಸ್ವಿ ಡಿ.ಜೆ., ಸಂತೇಬೆನ್ನೂರು

ಶಿಕ್ಷಣ ಸ್ನೇಹಿ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 9ನೇ ಬಾರಿ ಬಜೆಟ್ ಮಂಡಿಸಿರುವುದು ಸ್ವಾಗತಾರ್ಹ. ವಿದೇಶದಲ್ಲಿ ಓದುವ ವಿದ್ಯಾರ್ಥಿಗಳಿಗೆ ಕಳುಹಿಸುತ್ತಿದ್ದ ಹಣಕ್ಕೆ ವಿಧಿಸುತ್ತಿದ್ದ ಟಿಸಿಎಸ್ ದರವನ್ನು ಇಳಿಕೆ ಮಾಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲವಾಗಲಿದೆ. ಇದೊಂದು ಶಿಕ್ಷಣ ಸ್ನೇಹಿ ಬಜೆಟ್ ಆಗಿದೆ

ನೂರ್ ಜಾಯೇಬಾ ಖಾನಂ, ವಿದ್ಯಾರ್ಥಿನಿ, ಚನ್ನಗಿರಿ

ರಾಜ್ಯವನ್ನು ಕಡೆಗಣಿಸಿದ ಕೇಂದ್ರ

ರಾಜ್ಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಯೋಜನೆಗಳನ್ನು ನಿರ್ಮಲಾ ಸೀತಾರಾಮನ್ ನೀಡಿಲ್ಲ. ಹಿಂದೆ ಘೋಷಣೆ ಮಾಡಿದ್ದ ಯೋಜನೆಗಳಿಗೂ ಅನುದಾನ ಕೊಟ್ಟಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ನಿರ್ಮಲಾ ಅವರ ಗಮನಸೆಳೆಯುವ ಕೆಲಸ ಮಾಡಿಲ್ಲ.  ರಾಜ್ಯ ಸರ್ಕಾರವನ್ನು ಕೇಂದ್ರ ಸಂಪೂರ್ಣ ನಿರ್ಲಕ್ಷಿಸಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? 

ಎಂ.ಎ. ಸ್ಪಂದನಾ, ಹೊನ್ನಾಳಿ

ಸುಂಕ ಕಡಿತ ಸ್ವಾಗತಾರ್ಹ

ಕ್ಯಾನ್ಸರ್ ಸೇರಿದಂತೆ ಏಳು ಕಾಯಿಲೆಗಳ ಮೇಲಿನ ಸೀಮಾ ಸುಂಕ ಕಡಿತಗೊಳಿಸಿರುವುದು ಸ್ವಾಗತಾರ್ಹ ಕ್ರಮ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ‌ ನೀಡಿದ್ದರೆ ಮಧ್ಯ ಕರ್ನಾಟಕ ಭಾಗದ ರೈತರಿಗೆ ವರದಾನ ಆಗುತ್ತಿತ್ತು

ಎಂ.ಜಿ. ಗುರುನಾಥ್, ಮಾಯಕೊಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.