ADVERTISEMENT

ಯಾವುದೇ ಸಂದರ್ಭದಲ್ಲೂ ಸಿಗಬಹುದು ಕೋವಿಡ್‌ ವ್ಯಾಕ್ಸಿನ್‌: ಜಿಲ್ಲಾಧಿಕಾರಿ

ತಯಾರಾಗಿರಲು, ಅಂಕಿ–ಅಂಶ ಸಂಗ್ರಹಿಸಲು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸರ್ಕಾರ ಸೂಚನೆ

ಬಾಲಕೃಷ್ಣ ಪಿ.ಎಚ್‌
Published 24 ಅಕ್ಟೋಬರ್ 2020, 2:12 IST
Last Updated 24 ಅಕ್ಟೋಬರ್ 2020, 2:12 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೊರೊನಾ ವೈರಸ್ ಸೋಂಕಿಗೆ ಯಾವುದೇ ಸಂದರ್ಭದಲ್ಲಿ ವ್ಯಾಕ್ಸಿನ್‌ ಬರಬಹುದು. ಬಂದಮೇಲೆ ಸಿದ್ಧತೆ ಮಾಡಿಕೊಳ್ಳುವ ಬದಲು ಈಗಲೇ ತಯಾರಾಗಿರಿ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲರ ಮಾಹಿತಿ ಸಂಗ್ರಹಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗೆ ಸೂಚನೆ ನೀಡಿವೆ. ಈ ತಿಂಗಳ ಅಂತ್ಯದೊಳಗೆ ಮಾಹಿತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

ಕೆಲವು ದೇಶಗಳು ವ್ಯಾಕ್ಸಿನ್‌ ಸಂಶೋಧನೆಯಲ್ಲಿ ತೊಡಗಿವೆ. ಅದರಲ್ಲಿ ರಷ್ಯಾ ಯಶಸ್ವಿಯಾಗಿದ್ದು, ಅದನ್ನು ಭಾರತಕ್ಕೆ ತರಿಸಿಕೊಳ್ಳಲು ಸಿದ್ಧತೆ ನಡೆದಿದೆ. ಆರಂಭಿಕ ಹಂತದಲ್ಲಿ ಎಷ್ಟು ಬೇಕು ಎಂದು ಇಂಡೆಂಟ್‌ ಅನ್ನು ಭಾರತವು ನೀಡಬೇಕಾಗುತ್ತದೆ. ಅದಕ್ಕಾಗಿ ಕೇಂದ್ರ ಸರ್ಕಾರ ರಾಜ್ಯವನ್ನು ಈ ಮಾಹಿತಿ ಕೇಳಿದೆ. ರಾಜ್ಯ ಸರ್ಕಾರವು ಜಿಲ್ಲೆಗಳಿಗೆ ಕೇಳಿದೆ.

ಎಲ್ಲರಿಗೂ ನೀಡುವಷ್ಟು ವ್ಯಾಕ್ಸಿನ್‌ ಆರಂಭದಲ್ಲಿ ಬರುವುದಿಲ್ಲ. ಅದಕ್ಕಾಗಿ ಆರೋಗ್ಯ ಕ್ಷೇತ್ರದಲ್ಲಿ ಸರ್ಕಾರಿ ಮತ್ತು ಖಾಸಗಿಯಾಗಿ ಕೆಲಸ ಮಾಡುವ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು ಹೀಗೆ ಎಲ್ಲರೂ ಸೇರಿ ಎಷ್ಟು ಮಂದಿ ಇದ್ದಾರೆ ಎಂದು ಅಂಕಿ ಅಂಶ ಪಡೆಯಲಾಗುತ್ತದೆ. ಮೊದಲ ಹಂತದಲ್ಲಿ ಈ ವ್ಯಾಕ್ಸಿನ್‌ ಅನ್ನು ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೇ ನೀಡಲಾಗುತ್ತದೆ. ಸಾರ್ವಜನಿಕರ ಜತೆಗೆ ಆರೋಗ್ಯ ಇಲಾಖೆಯ ನಂತರ ಹೆಚ್ಚು ಸಂಪರ್ಕ ಇರುವವರಿಗೆ ನೀಡಲಾಗುತ್ತದೆ. ಕೊನೆಗೆ ಸಾರ್ವಜನಿಕರಿಗೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ‘ಪ್ರಜಾವಾಣಿ’ಗೆ ತಿಳಿಸಿದೆ.

ADVERTISEMENT

‘ವ್ಯಾಕ್ಸಿನ್‌ ವೆಚ್ಚ ಎಷ್ಟಿರುತ್ತದೆ? ಅದನ್ನು ಸರ್ಕಾರವೇ ಭರಿಸುತ್ತದೆಯೇ? ಇಲ್ಲ ಜನರೇ ಭರಿಸಬೇಕಾ ಎಂಬ ಮಾಹಿತಿ ಸದ್ಯಕ್ಕೆ ಬಂದಿಲ್ಲ. ಆದರೆ ಇನ್ನಾರು ತಿಂಗಳಲ್ಲಿ ವ್ಯಾಕ್ಸಿನ್‌ ಬರುವುದಂತೂ ಸತ್ಯ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ಸೋಂಕಿಗೆ ಈವರೆಗೆ ನಿರ್ದಿಷ್ಟ ಔಷಧ ಇರಲಿಲ್ಲ. ಸೋಂಕಿತರಲ್ಲಿ ಯಾವ ಲಕ್ಷಣಗಳು ಮತ್ತು ಇತರ ಕಾಯಿಲೆಗಳು ಇವೆ ಎಂಬುದನ್ನು ನೋಡಿಕೊಂಡು ಔಷಧ ನೀಡಲಾಗುತ್ತಿತ್ತು. ಕೊರೊನಾಕ್ಕಾಗಿಯೇ ಔಷಧ ಬರುತ್ತಿರುವುದು ಖುಷಿಯ ವಿಚಾರ ಎಂಬುದು ಅವರ ಅಭಿಪ್ರಾಯ.

***

ವ್ಯಾಕ್ಸಿನ್‌ ಬಳಕೆಗೆ ಸಿದ್ಧವಿರಲು, ಮಾಹಿತಿ ಸಂಗ್ರಹ ಮಾಡಲು ಸೂಚನೆ ಬಂದಿರುವುದು ಹೌದು. ಆರೋಗ್ಯ ಇಲಾಖೆಯ ಮುಖ್ಯಸ್ಥರ ಜತೆಗೆ ಈ ಬಗ್ಗೆ ಸಭೆ ನಡೆಸಿದ್ದೇನೆ.

ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ವ್ಯಾಕ್ಸಿನ್‌ ಬರುವುದರಿಂದ ಸಿದ್ಧವಾಗುವಂತೆ ಸೂಚನೆ ಬಂದಿರುವುದು ನಿಜ. ಕೆಲವೇ ದಿನಗಳಲ್ಲಿ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟ ಮಾಹಿತಿ ಸಿಗಲಿದೆ.

ಡಾ.ಜಿ.ಡಿ. ರಾಘವನ್‌ , ಜಿಲ್ಲಾ ಸರ್ವೇಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.